ಹೊಸದಿಲ್ಲಿ, ನ.: ದೇಶದಾದ್ಯಂತ ಪತ್ರಕರ್ತರ ವ್ಯಾಪಕ ಪ್ರತಿಭಟನೆಗೆ ಮಣಿದ ಕೇಂದ್ರ ಸರಕಾರ ಎನ್ಡಿಟಿ ಪ್ರಸಾರವನ್ನು ಒಂದು ದಿನದ ಮಟ್ಟಿಗೆ ನಿಷೇದಿಸಿರುವ ನಿರ್ಧಾರವನ್ನು ತಡೆಹಿಡಿದಿದೆ. ಮಾಹಿತಿ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯ ನಾಯ್ಡು ಮತ್ತು ಎನ್ಡಿ ಟಿವಿ ಪ್ರವರ್ತಕರ ಮಧ್ಯೆ ನಡೆದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಾರ ನಿರ್ಬಂಧಿಸುವ ಕೇಂದ್ರ ಸರಕಾರದ ನಿಲುವು ವಾಕ್ ಸ್ವಾತಂತ್ರದ ಹರಣ ಎಂದು ಖಂಡಿಸಿ ದಿಲ್ಲಿಯ ಪ್ರೆಸ್ಕ್ಲಬ್ ಎದುರು ಭಾರೀ ಸಂಖ್ಯೆಯಲ್ಲಿ ಸೇರಿದ ಪತ್ರಕರ್ತರು ಪ್ರತಿಭಟನೆ ನಡೆಸಿದ ಬಳಿಕ ಸರಕಾರದ ಈ ನಿರ್ಧಾರ ಹೊರಬಿದ್ದಿದೆ.
ಈ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ಇದನ್ನೇ ಜನತೆಯ ಶಕ್ತಿ ಎನ್ನುವುದು. ಬೊಬ್ಬೆ ಹೊಡೆಯಿರಿ, ಕಿರುಚಾಡಿ, ಪ್ರತಿರೋಧ ಒಡ್ಡಿ, ಹೋರಾಡಿ. ಆದರೆ ಅನ್ಯಾಯವನ್ನು ಎಂದಿಗೂ ಸಹಿಸಿಕೊಳ್ಳಬೇಡಿ. ಅಭಿನಂದನೆಗಳು ಎನ್ಡಿ ಟಿವಿ ಎಂದು ಟ್ವೀಟ್ ಮಾಡಿದ್ದಾರೆ. ಪಠಾಣ್ಕೋಟ್ ವಾಯುನೆಲೆಗೆ ನಡೆದ ಉಗ್ರರ ದಾಳಿ ಘಟನೆಯ ಪ್ರಸಾರದ ವೇಳೆ ಸೇನಾ ಇಲಾಖೆಗೆ ಸಂಬಂಧಿಸಿದ ಕೆಲವೊಂದು ಮಹತ್ವದ ಮಾಹಿತಿಗಳನ್ನು ಎನ್ಡಿಟಿವಿ ಬಹಿರಂಗಗೊಳಿಸಿದ್ದು ಇದು ನಿಯಮದ ಉಲ್ಲಂಘನೆಯಾಗಿದೆ. ಇದರಿಂದ ಕೇವಲ ರಾಷ್ಟ್ರದ ಭದ್ರತೆಗೆ ಮಾತ್ರವಲ್ಲ ನಾಗರಿಕರ ಮತ್ತು ಯೋಧರ ಬದುಕಿಗೆ ಭಾರೀ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಮಿತಿಯು ಎನ್ಡಿಟಿವಿಯ ಪ್ರಸಾರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ಸೂಚಿಸಿತ್ತು.
ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಎನ್ಡಿಟಿವಿ ಸುಪ್ರೀಂಕೋರ್ಟ್ನ ಮೊರೆ ಹೋಗಿತ್ತು. ಎನ್ಡಿ ಟಿವಿಗೆ ಬೆಂಬಲ ಘೋಷಿಸಿದ್ದ ‘ಜನ್ತಾ ಕಾ ರಿಪೋರ್ಟರ್ ’ ವೆಬ್ಸೈಟ್, ಎನ್ಡಿಟಿವಿ ಪ್ರಸಾರ ಸ್ಥಗಿತಗೊಳಿಸಿದ ದಿನ ತಾನು ಕೂಡಾ ಸುದ್ದಿ ಪ್ರಸಾರ ಮಾಡುವುದಿಲ್ಲ ಎಂದು ತಿಳಿಸಿತ್ತು.