ಅಕ್ಟೋಬರ್. 02 ರಿಂದ ಕೊಪ್ಪಳ ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಜಾರಿ- ಎಂ. ಕನಗವಲ್ಲಿ

ಆರೋಗ್ಯವಂತ ಮಕ್ಕಳಿಗಾಗಿ ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ

ಅಂಗನವಾಡಿಗಳಲ್ಲಿ ಶಿಶು ಹಾಗೂ ಪುಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಸರಕಾರದ ಯೋಜನೆಯಲ್ಲಿ ಇನ್ನೊಂದು ಮಹತ್ವದ ಯೋಜನೆಯಾದ ಮಾತೃಪೂರ್ಣ ಯೋಜನೆ ಅಕ್ಟೋಬರ್. 02ರ ಗಾಂಧಿ ಜಯಂತಿಯಂದು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ. ಆರೋಗ್ಯಯುತ ಮಕ್ಕಳು ಹುಟ್ಟಲು ಈ ಯೋಜನೆ ಅತ್ಯಂತ ಮಹತ್ವಪೂರ್ಣವಾಗಿದ್ದು, ಈ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಠಿಕ ಆಹಾರ ಬಿಸಿಯೂಟ ನೀಡುವುದು ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಮಾತೃಪೂರ್ಣ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸುವ ಸಂಬಂಧ ಜಿಲ್ಲಾಡಳಿತ ಭವನದ ಕೆ-ಸ್ವಾನ್ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಾತೃಪೂರ್ಣ ಯೋಜನೆ ಅಕ್ಟೋಬರ್ 02 ರಿಂದ ಜಾರಿಗೆ ಬರಲಿದ್ದು, ಜಿಲ್ಲೆಯ 1850 ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 18796 ಗರ್ಭಿಣಿಯರು ಹಾಗೂ 17038 ಬಾಣಂತಿಯರು ಸೇರಿದಂತೆ ಒಟ್ಟು 35834 ಜನ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯಲಿದ್ದಾರೆ. ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಕೊಡಲ್ಪಡುವ ವೈಶಿಷ್ಟ್ಯಪೂರ್ಣ ಯೋಜನೆ ಇದಾಗಿದೆ. ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಹಾಗೂ ವ್ಯವಸ್ಥಿತವಾಗಿ ಜಾರಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಅಲ್ಲದೆ ಫಲಾನುಭವಿಗಳಿಗೆ ಯೋಜನೆಯ ಸವಲತ್ತು ಸರಿಯಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯೋಜನೆಯ ಜಾರಿಯ ಪ್ರಾರಂಭದಲ್ಲಿ ಅನೇಕ ಸವಾಲುಗಳು ಎದುರಾಗುವ ಸಾಧ್ಯತೆಗಳಿದ್ದು, ಅವೆಲ್ಲವನ್ನು ಸಮರ್ಪಕವಾಗಿ ಸಮರ್ಥವಾಗಿ ನಿಭಾಯಿಸಿ, ಯೋಜನೆಯನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಆಯಾ ಅಂಗನವಾಡಿ ಕೇಂದ್ರಗಳ ಸಿಬ್ಬಂದಿಗಳ ಮೇಲಿದೆ ಅಲ್ಲದೆ ಇದಕ್ಕೆ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರೂ ಕೂಡ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ್ ಅವರು ವಿವರಣೆ ನೀಡಿ, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚು ಪೌಷ್ಠಿಕತೆ ಒಳಗೊಂಡ ಮಧ್ಯಾಹ್ನದ ಊಟವನ್ನು ಒದಗಿಸುವ ಮೂಲಕ ಪೌಷ್ಠಿಕಾಂಶ ಪ್ರಮಾಣ ಹೆಚ್ಚಿಸುವುದು. ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ, ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ, ಮಕ್ಕಳಲ್ಲಿ ಅಪೌಷ್ಠಿಕತೆ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಜಿಲ್ಲೆಯಲ್ಲಿ ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿ/ಬಾಣಂತಿಯರ ಪ್ರಮಾಣ ಕಡಿಮೆ ಮಾಡುವುದು ಕೂಡ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಗರ್ಭಿಣಿ ಎಂದು ಗೊತ್ತಾದ ಕೂಡಲೇ ಹಾಗೂ ಗರಿಷ್ಟ 12 ವಾರದೊಳಗೆ ಅಂಗನವಾಡಿಯಲ್ಲಿ ತಪ್ಪದೇ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಗರ್ಭಿಣಿಯರಿಗೆ, ಮೊದಲ ತಿಂಗಳಿನಿಂದ ಎಂಟನೆ ತಿಂಗಳಿನವರೆಗೂ ಅವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಾಂಶವುಳ್ಳ ಮಧ್ಯಾಹ್ನದ ಬಿಸಿಯೂಟವನ್ನು 12.30 ರಿಂದ 03 ಗಂಟೆಯ ಅವಧಿಯೊಳಗೆ ನೀಡಲಾಗುವುದು. ಗರ್ಭಿಣಿಯರಿಗೆ ಒಂಭತ್ತನೆ ತಿಂಗಳಿನ ಅವಧಿಯಲ್ಲಿ ಹಾಗೂ ಬಾಣಂತಿಯರಿಗೆ ಅವರ ಮನೆಗೆ ಪೌಷ್ಠಿಕಾಂಶದ ಊಟ ತಲುಪಿಸುವ ಕ್ರಮ ಕೈಗೊಳ್ಳಲಾಗುವುದು. ಯೋಜನೆಯಡಿ ಮಧ್ಯಾಹ್ನದ ಒಂದು ಪೂರ್ಣ ಪೌಷ್ಟಿಕ ಬಿಸಿಯೂಟದಲ್ಲಿ ಅನ್ನ, ಸಾಂಬರ್, ಪಲ್ಯದ ಜೊತೆಗೆ ಬೇಯಿಸಿದ ಮೊಟ್ಟೆ ಮತ್ತು ಹಾಲು ಒಳಗೊಂಡಿದೆ. ಅಲ್ಲದೆ ಊಟದ ನಂತರ ಕಬ್ಬಿಣಾಂಶದ ಮಾತ್ರೆಯನ್ನು ಸೇವಿಸಲು ನೀಡಲಾಗುವುದು.
ಗರ್ಭಿಣಿಯರಿಗೆ ಅಗತ್ಯವಿರುವ ಎಲ್ಲ ಪೌಷ್ಠಿಕಾಂಶಗಳನ್ನೊಳಗೊಂಡ ಮಧ್ಯಾಹ್ನದ ಪೌಷ್ಠಿಕ ಊಟ, ಕಬ್ಬಿಣಾಂಶದ ಮಾತ್ರೆಗಳನ್ನು ಮತ್ತು ಐಯೋಡಿನ್‍ಯುಕ್ತ ಉಪ್ಪು ನೀಡಲಾಗುತ್ತದೆ. ಗರ್ಭಿಣಿಯರಿಗೆ ಮತ್ತು ಬಾಣಂತಿಯರ ಆರೈಕೆ ಹಾಗೂ ಪೌಷ್ಠಿಕಾಂಶ ಆಹಾರ ಸೇವನೆ ಮತ್ತು ನಿಯಮಿತ ಆರೋಗ್ಯ ಬೆಳವಣಿಗೆ ನಿರ್ವಹಣೆ ಮತ್ತು ಮಾಹಿತಿ ಮತ್ತಿತರ ಸೇವೆಗಳು ಈ ಮಾತೃಪೂರ್ಣ ಯೋಜನೆಯಲ್ಲಿ ಸೇರಿವೆ ಎಂದು ಮಂಜುನಾಥ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ ಸೇರಿದಂತೆ ಪದಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:
error