ಹೋಗಿ ಬನ್ನಿ ಜಾರ್ಜ್ : ನೀವು “ಅವರು ಹೆಣೆದ ಬಲೆಗೆ ಬೀಳಬಾರದಿತ್ತು”

ಜನಹೋರಾಟದ ಅಗ್ನಿಕುಂಡದಿಂದ ಮೇಲೆದ್ದು ಬಂದ ಸೋಷಲಿಸ್ಟ್ ನಾಯಕ ಜಾರ್ಜ್ ಫರ್ನಾಂಡೀಸ್ ನಮ್ಮನ್ನ ಅಗಲಿದ್ದಾರೆ,ನಮ್ಮ ಆ ಯೌವನದ ದಿನಗಳಲ್ಲಿ ಜಾರ್ಜ್ ನಮಗೆಲ್ಲ ಹೀರೋ, ಅವರನ್ನು ನಾನು ಮೊದಲ ಬಾರಿ ನೋಡಿದ್ದು ಹುಬ್ಬಳ್ಳಿಯಲ್ಲಿ ರೇಲ್ವೆ ಕಾರ್ಮಿಕರ ಸಂಘಟನೆ ಗೆ ಆಗಾಗ ಹುಬ್ಬಳ್ಳಿಗೆ ಬರುತ್ತಿದ್ದ ಜಾರ್ಜ್ ಸೀದಾ ಸಾದಾ ಮನುಷ್ಯ, ನರಗುಂದ ರೈತ ಹೋರಾಟದ ಸಂದರ್ಭದಲ್ಲಿ, ಹುಬ್ಬಳ್ಳಿ ಗೆ ಬಂದಿದ್ದ ಜಾರ್ಜ ಬೆಂಗಳೂರಿಗೆ ಹೊರಟ ರೈತ ಜಾಥಾದಲ್ಲಿ ಹುಬ್ಬಳ್ಳಿಯಲ್ಲಿ ಹೆಜ್ಜೆ ಹಾಕಿದರು ,ಹಳೆ ಹುಬ್ಬಳ್ಳಿ ಯ ಕಮ್ಯುನಿಸ್ಟ್ ಪಾರ್ಟಿ ಕಚೇರಿ ಮುಂಭಾಗದಲ್ಲಿ ನಡೆದ ಭಾರೀ ಬಹಿರಂಗ ಸಭೆಯಲ್ಲಿ ನಾನು ಮಾಡಿದ ಸ್ವಾಗತ ಭಾಷಣದ ನಂತರ ಅವರು ಸ್ಫೂರ್ತಿದಾಯಕವಾಗಿ ಮಾತಾಡಿದರು, ಇಂಥ ಜಾರ್ಜ್ ಫರ್ನಾಂಡೀಸ್ ಅವರನ್ನು ಭೇಟಿಯಾಗುವ ಅವಕಾಶವೂ ನನಗೆ ದೊರಕಿತ್ತು ,ಆಗ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು, ಬೆಂಗಳೂರಿಗೆ ಬಂದು ರಿಚಮಂಡ್ ರಸ್ತೆಯ ತಮ್ಮ ಸೋದರನ ಮನೆಯಲ್ಲಿ ತಂಗಿದ್ದ ಅವರ ಬಳಿ ನನ್ನನ್ನು ಸಂಗಾತಿ‌ ಕೆ ಸಿ ಬಸವರಾಜು ಕರೆದುಕೊಂಡು ಹೋಗಿ ಭೇಟಿ‌ಮಾಡಿಸಿದ್ದರು,ಆಗ ಹುಬ್ಬಳ್ಳಿಯಲ್ಲಿ ಭೇಟಿಯಾದ ನೆನಪನ್ನು ಮಾಡಿಕೊಂಡ ಜಾರ್ಜ್ ನಮ್ಮ ಜೊತೆ ತುಂಬ ಹೊತ್ತು‌ಅಂದರೆ ಎರಡೂವರೆ ತಾಸು ಮಾತಾಡಿದರು, “ಸಮಾಜವಾದಿ ಚಳವಳಿಯಿಂದ ಬಂದ ನೀವು ಬಿಜೆಪಿ ಜೊತೆ ಸೇರಿದ್ದು ಸರಿಯೇ ಎಂದು ನೇರವಾಗಿ ಪ್ರಶ್ನಿಸಿದ್ದೆ, ಆಗ ಒಂದು ಕ್ಷಣ ಸಮ್ಮನಾದ ಜಾರ್ಜ್ ” ನಮಗೆ ಬೇರೆ ದಾರಿ ಇರಲಿಲ್ಲ,ಜೆಪಿ ಚಳವಳಿ ನಂತರ ನಮ್ಮ ಸೋಷಲಿಸ್ಟ್ ಪಾರ್ಟಿಯನ್ನು ಜನತಾಪಕ್ಷದಲ್ಲಿ ಮರ್ಜ್ ಮಾಡಿದ್ದೆವು,ನಮಗೆ ವೇದಿಕೆ ಇಲ್ಲವಾಯಿತು,ಆದರೆ ಆರ್ ಎಸ್ ಎಸ್ ಪ್ರತ್ಯೇಕ ವಾಗಿ ಉಳಿದು ಬಿಜೆಪಿಯೆಂಬ ಹೊಸ ಪಕ್ಷ ಕಟ್ಟಿತು‌,ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಬೆಳೆದ ನಮಗೆ ಬೇರೆ ದಾರಿ ಇರಲಿಲ್ಲ ಎಂದರು,ಲಾಲೂ ಬಗೆಗಿನ ಅಸಮಾಧಾನ ಹೊರಗೆ ಹಾಕಿದರು,ಕೊನೆಗೆ ತಮ್ಮದು ಅಸಹಾಕತೆ ” ಎಂದರು, ನಂತರ ಒಮ್ಮೆ ದಿಲ್ಲಿಗೆ ಹೋದಾಗ ವಾಜಪೇಯಿ ಸಂಪುಟದಲ್ಲಿ ಅವರು ರಕ್ಷಣಾ ಸಚಿವರು,ಅವರನ್ನು ಭೇಟಿ‌ಮಾಡಲು ಕೃಷ್ಣ ಮೆನನ್ ಮಾರ್ಗದಲ್ಲಿದ್ದ ಅವರ ಮನೆಗೆ ಹೋದೆ ,ಅವರ ಮನೆಗೆ ಯಾವ ಸೆಕ್ಯೂರಿಟಿ ಇರಲಿಲ್ಲ ನೇರವಾಗಿ ಒಳ ನುಗ್ಗಿದೆ,ಅಲ್ಲಿ ಮಂಗಳೂರಿನ ಗೆಳೆಯ ಹೆಗ್ಡೆಯವರು ಸಿಕ್ಕರು,ಜಾರ್ಜ ಹೊರಡುವ ಅವಸರದಲ್ಲಿದ್ದರು,ಮನೆ ತುಂಬಾ ಬಿಹಾರದಿಂದ ಬಂದಿದ್ದ ಕೂಲಿ ಕಾರ್ಮಿಕರಿದ್ದರು, ಹೆಚ್ಚು ಮಾತಾಡಲಾಗಲಿಲ್ಲ, ಇಂಥ ಜಾರ್ಜ್ ಈಗ ಇಲ್ಲಿ ,ಆ ಕಾಲದಲ್ಲಿ ಜನಜೋರಾಟದ ರಣರಂಗದಿಂದ ಜಾರ್ಜ್ ಫರ್ನಾಂಡೀಸ್ ರಂಥ ನಾಯಕರು ಬರುತ್ತಿದ್ದರು ,ಈಗ ಗಣಿಗಾರಿಕೆ ರಿಯಲ್‌ಎಸ್ಟೆಟ ದಂಧೆಕೋರರು ರಾಜಕೀಯ ಪ್ರವೇಶಿಸುತ್ತಿದ್ದಾರೆ ,ಇಂಥ ಕೆಟ್ಟ ಕಾಲದಲ್ಲಿ ಜಾರ್ಜ್ ಫರ್ನಾಂಡೀಸ್ ನೆನಪು ಮಾತ್ರ.. ಸನತ್ ಕುಮಾರ್ ಬೆಳಗಲಿ ಹಿರಿಯ ಪತ್ರಕರ್ತರು

ಜಾರ್ಜ್ ಫೆರ್ನಾಂಡೀಸ್ ಅಂದರೆ ಆ ಕಾಲದ ಯುವಕರಿಗೆ, ನಮ್ಮಂತ ಬಾಲಕರಿಗೆ ರೋಮಾಂಚನ. ತುಳುನಾಡಿನ ಬಡವರ ಮನೆಯ ಹುಡುಗನೊಬ್ಬ ಮುಂಬೈ ಸೇರಿದ್ದು, ಅಲ್ಲಿ ನಿಗಿ ನಿಗಿ ಕೆಂಡದಂತ ಕಾರ್ಮಿಕ ನಾಯಕನಾಗಿ ಬೆಳೆದದ್ದು.ವಿದೇಶಿ ಕಂಪೆನಿಗಳ ವಿರುದ್ದ ನೇರಾ ನೇರಾ ಯುದ್ದಕ್ಕೇ ಇಳಿದದ್ದು, ಸಮಾಜವಾದಿ ರಾಜಕೀಯ ನೇತಾರನಾದದ್ದು, ತುರ್ತು ಪರಿಸ್ಥಿತಿಯ ವಿರುದ್ದ ಭೂಗತರಾಗಿ ಹೋರಾಟ ಕಟ್ಟಿದ್ದು, ಫ್ಯೂಡಲ್ ಭೂಮಾಲಕರ ಆಡಂಬೊಲ ದೂರದಬಿಹಾರದಲ್ಲಿ ಸ್ಪರ್ಧಿಸಿ ಲೋಕ ಸಭೆಗೆ ಆಯ್ಕೆ ಆದದ್ದು, ರಾಷ್ಟ್ರದ ಪ್ರಮುಖ ನೇತಾರರಾಗಿ ಮೂಡಿಬಂದದ್ದು. ಅದೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಹುಟ್ಟಿದ “ಶಿಲುಬೆ” ಯನ್ನು ಹೊತ್ತುಕೊಂಡು…‌ ನಿಜಕ್ಕೂ ಜಾರ್ಜ್ ಫೆರ್ನಾಂಡಿಸರ ಈ ಬದುಕು ಇಂಡಿಯಾದಂತಹ ಸಾಮಾಜಿಕ, ರಾಜಕೀಯ ಸ್ಥಿತಿಯ ದೇಶದಲ್ಲಿ ಒಂದು ಅಪರೂಪದ ಮಾದರಿ.

90 ರ ದಶಕದ ನಂತರದ ಜಾರ್ಜ್ ಮಾತ್ರ ದುರಂತ ನಾಯಕ ಅನ್ನುವುದಕ್ಕಿಂತಲೂ ಖಳನಾಯಕ. ತಾನು ಜೀವನದುದ್ದಕ್ಕೂ ಪ್ರಾಣವನ್ನೇ ಪಣಕ್ಕಿಟ್ಟು ಬಡಿದಾಡಿದ ಅದೇ ಸಾಮ್ರಾಜ್ಯಶಾಹಿ ಪ್ರಣೀತ ಬಂಡವಾಳದಾರರು, ಫ್ಯೂಡಲ್ ದೊರೆಗಳು ಸಾಲದೆಂಬಂತೆ ಕೋಮುವಾದಿ ಶಕ್ತಿಗಳೊಂದಿಗೆ ಅಧಿಕಾರದ ಖುರ್ಚಿಗೋಸ್ಕರ ರಾಜಿ ಮಾಡಿಕೊಂಡದ್ದು. ಫೆರ್ನಾಂಡಿಸರ ಈ ಅವಧಿಯ ರಾಜಕಾರಣವ ಇಂಡಿಯಾದ ಒಂದು ತಲೆಮಾರನ್ನೇ ರಾಜಕೀಯವಾಗಿ, ಸಾಮಾಜಿಕವಾಗಿ ಭ್ರಷ್ಟಗೊಳಿಸಲು ನೆರವು ನೀಡಿತು. ಇದು ಫೆರ್ನಾಂಡಿಸ್ ಒಬ್ಬರ ಕತೆಯಲ್ಲದಿದ್ದರೂ ಈ ಮಾದರಿಯ ಒಂದು ಅತ್ಯಂತ ಕೆಟ್ಟ ರಾಜಿಕೋರತನ ಇಂಡಿಯಾವನ್ನು ಕಾರ್ಪೊರೇಟ್, ಕೋಮುವಾದ, ಭೂಮಾಲಕರ ಸಖ್ಯದ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿತು. ದೇಶವನ್ನು ಇಂದಿನ ಅಸಹಾಯಕ ಪರಿಸ್ಥಿತಿಗೆ ತಲುಪಿಸಿತು.

ಕೋಮುವಾದಿ, ಬಂಡವಾಳ ಶಾಹಿ ಶಕ್ತಿಗಳು ತನ್ನ ವಿರುದ್ದ ಸಮರ ಸಾರಿದ ಅದರ್ಶವಾದಿ, ವ್ಯಕ್ತಿ ಕೇಂದ್ರಿತ ನಾಯಕರನ್ನು ಹೇಗೆ ಪಳಗಿಸಿ ತನ್ನ ಆಜ್ಞಪಾಲಕ ಕಾವಲುಗಾರರನ್ನಾಗಿಸುತ್ತದೆ ಎಂಬುದಕ್ಕೆ ಜಾರ್ಜ್ ಫೆರ್ನಾಂಡಿಸ್ ಒಂದು ಆದ್ಯಯನ ಯೋಗ್ಯ ವ್ಯಕ್ತಿತ್ವ.

ಏನೇ ಇದ್ದರು ಮುಂಬೈ ಬೀದಿಗಳಲ್ಲಿ ಕಾರ್ಮಿಕರಿಗಾಗಿ ಬಡಿದಾಡಿದ, ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ದದ ರಾಜಕಾರಣಕ್ಕೆ ಶಕ್ತಿ ತುಂಬಿದ, ಸಮಾಜವಾದಿ ಚಿಂತನೆಗಳತ್ತ ಯುವಜನರಲ್ಲಿ ಆಕರ್ಷಣೆ ಮೂಡಿಸಿದ ನಮ್ಮ ತುಳುನಾಡಿನ ಬಡವರ ಮನೆಯ ಆ 60, 70 ರ ದಶಕದ ಪೊರ್ಬು ಹುಡುಗ ಎಂದರೆ ನನಗೆ ಈಗಲೂ ಹೆಮ್ಮೆ.

ಶುಭ ವಿದಾಯ ಸಂಗಾತಿ ಜಾರ್ಜ್. ನೀವು “ಅವರು ಹಣೆದ ಬಲೆಗೆ ಬೀಳಬಾರದಿತ್ತು.” – ಮುನೀರ್ ಕಾಟಿಪಾಳ್ಯ ಹೋರಾಟಗಾರ

ನನ್ನ ಬಾಲ್ಯದ ದಿನಗಳ ರಾಜಕೀಯ ಹೀರೋ ಜಾರ್ಜ್ ಫರ್ನಾಂಡಿಸ್ ನಿಧನದಿಂದ ಮನಸ್ಸು ಭಾರವಾಗಿದೆ. ನಮ್ಮೂರ ಹೊಟೇಲ್ ಹುಡುಗರ ಪಾಲಿನ ಭಾಗ್ಯವಿಧಾತ.1967ರ ಲೋಕಸಭಾ ಚುನಾವಣಾ ಕಾಲದಲ್ಲಿ ಮುಂಬೈನ ಪೋರ್ಟ್ ಪ್ರದೇಶದಲ್ಲಿ ಜಾರ್ಜ್ ಪರ ಪೋಸ್ಟರ್ ಅಂಟಿಸಲು ಅಣ್ಣ-ಮಾವಂದಿರ ಬೆನ್ನ ಹಿಂದೆ ಅಂಟಿನ ಡಬ್ಬಿ ಹಿಡ್ಕೊಂಡು ಓಡುತ್ತಿದ್ದದ್ದು ನೆನಪಾಗುತ್ತಿದೆ. ಹೋಗಿಬನ್ನಿ, ನಿಮ್ಮ ಮೇಲೆ ಸಿಟ್ಟಿದೆ, ಅದಕ್ಕಿಂತ ಹೆಚ್ಚು ಪ್ರೀತಿ ಇದೆ – ದಿನೇಶ್ ಅಮೀನ್ ಮಟ್ಟು ಹಿರಿಯ ಪತ್ರಕರ್ತರು

Please follow and like us:
error