ಹೊಸ ನಿಬಂಧನೆಗಳಿಂದ ಸ್ವಾತಂತ್ರ್ಯ , ಖಾಸಗಿತನಕ್ಕೆ ಧಕ್ಕೆ- ಕಳವಳ

ಹೊಸದಿಲ್ಲಿ : ಸಾಮಾಜಿಕ ಜಾಲತಾಣ ಹಾಗೂ ಓವರ್ ದ ಟಾಪ್ ( ಓಟಿಟಿ ) ಸೇವೆಗಳಿಗಾಗಿ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ನಿಬಂಧನೆ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ . ವಿವೇಚನಾಯುಕ್ತ ನಿರ್ಬಂಧಗಳನ್ನು ವಿಧಿಸುವುದು ಸೂಕ್ತ ಎಂದು ಕೆಲವರು ಅಭಿಪ್ರಾಯಪಟ್ಟರೆ , ಇದು ಖಾಸಗಿತನ ಮತ್ತು ಮುಕ್ತ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ .

ದ ವೈರ್‌ ಡಿಜಿಟಲ್‌ ಸುದ್ದಿ ಪ್ಲಾಟ್‌ಫಾರಂನ ಸಂಪಾದಕ ಸಿದ್ಧಾರ್ಥ ವರದರಾಜನ್ ಕೇಂದ್ರದ ನಡೆಯನ್ನು ಕಟುವಾಗಿ ಟೀಕಿಸಿದ್ದು , ” ಇದು ಪತ್ರಿಕಾ ಸ್ವಾತಂತ್ರ್ಯದ ಹತ್ಯೆ ” ಎಂದು ಬಣ್ಣಿಸಿದ್ದಾರೆ . ಆದರೆ ಬಿಜೆಪಿ ಮುಖಂಡರು ನೂತನ ಮಾರ್ಗಸೂಚಿಯನ್ನು ಸ್ವಾಗತಿಸಿದ್ದು , ಇದು ಬಳಕೆದಾರರಿಗೆ ನ್ಯಾಯಸಮ್ಮತ ಅವಕಾಶ ನೀಡುತ್ತದೆ ಎಂದು ಪ್ರತಿಪಾದಿಸಿದ್ದಾರೆ . ಕೇಂದ್ರ ಸರ್ಕಾರ ಮಂಗಳವಾರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್ , ಓಟಿಟಿ ಸೇವಾ ಸಂಸ್ಥೆಯಾದ ನೆಟ್‌ಫಿಕ್ಸ್ ನಿರ್ಬಂಧಕ್ಕೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಪ್ರಕಟಿಸಿದ್ದು , ಇದರ ಅನ್ವಯ ಅಧಿಕಾರಿಗಳು ಆಕ್ಷೇಪಾರ್ಹ ಎಂದು ಸೂಚಿಸುವ ಬರಹ / ಚಿತ್ರಗಳನ್ನು 36 ಗಂಟೆಗಳ ಒಳಗಾಗಿ ಕಿತ್ತುಹಾಕಬೇಕಾಗುತ್ತದೆ . ಇದರ ಜತೆಗೆ ದೇಶದಲ್ಲೇ ಇರುವ ಅಧಿಕಾರಿಯ ನೇತೃತ್ವದಲ್ಲಿ ದೂರು ವ್ಯಾಜ್ಯ ಪರಿಹಾರ ವ್ಯವಸ್ಥೆಯನ್ನು ಆರಂಭಿಸಬೇಕಾಗುತ್ತದೆ . ದೇಶ ವಿರೋಧಿ ಹಾಗೂ ದೇಶದ ಭದ್ರತೆ ಮತ್ತು ಏಕತೆಗೆ ಧಕ್ಕೆ ಎನಿಸುವ ಸಂದೇಶಗಳ ಮೂಲವನ್ನು ಕೂಡಾ ಸಾಮಾಜಿಕ ಜಾಲತಾಣಗಳು ಪತ್ತೆ ಮಾಡಬೇಕಾಗುತ್ತದೆ . ನೂತನ ನಿಬಂಧನೆಗಳ ಬಗ್ಗೆ ಪ್ರತಿಕ್ರಿಯಿಸಿದ ವರದರಾಜನ್ , ” ಯಾವುದನ್ನು ಪ್ರಕಟಿಸಬೇಕು ಹಾಗೂ ಯಾವುದನ್ನು ಪ್ರಕಟಿಸಬಾರದು ಎಂದು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಅಂತರ ಸಚಿವಾಲಯ ಸಮಿತಿಗೆ ನೀಡುವ ಕ್ರಮಕ್ಕೆ ಯಾವುದೇ ಕಾನೂನು ಹಿನ್ನೆಲೆ ಇಲ್ಲ ಹಾಗೂ ಇದು ಪತ್ರಿಕಾ ಸ್ವಾತಂತ್ರ್ಯದ ಹರಣ ‘ ಎಂದು ಬಣ್ಣಿಸಿದ್ದಾರೆ . ಅಂಕಣಗಾರ್ತಿ ತೆಹಸೀನ್ ಪೂನಾವಾಲಾ ಕೂಡಾ ನಿರ್ಬಂಧಗಳನ್ನು ಟೀಕಿಸಿದ್ದು , ಮಾಧ್ಯಮದ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹೇಳಿದ್ದಾರೆ . ಕೇಂದ್ರದ ಕ್ರಮ ಖಾಸಗಿತನದ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮೇನಕಾ ಗೋಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ .

Please follow and like us:
error