ಹರ್ಯಾಣ ಸರಕಾರ ರಚಿಸುವ ಕಸರತ್ತು ದಿಲ್ಲಿಗೆ

ಹೊಸದಿಲ್ಲಿ , ಅ . 25 : ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಸರಕಾರ ರಚಿಸುವ ಕಸರತ್ತು ರಾಷ್ಟ್ರ ರಾಜಧಾನಿಗೆ | 

ವರ್ಗಾವಣೆಯಾಗಿದೆ . ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ ಹಾಗೂ ಕಾಂಗ್ರೆಸ್‌ನ ಸಿಎಂ ಆಕಾಂಕ್ಷಿ ಭೂಪಿಂದರ್ ಸಿಂಗ್ ಹೂಡಾ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ . ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪಕ್ಷೇತರರ ಬೆಂಬಲದೊಂದಿಗೆ ಸರಕಾರ ರಚಿಸಲು ತೀವ್ರ ಪ್ರಯತ್ನ ನಡೆಸುತ್ತಿವೆ . ಕೆಲವು ಪಕ್ಷೇತರರು ದಿಲ್ಲಿಗೆ ಈಗಾಗಲೇ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ . ಅತ್ಯಂತ ಪ್ರಮುಖ ಬೆಳವಣಿಗೆಯಲ್ಲಿ ಹರ್ಯಾಣ ಲೋಕಹಿತ ಪಕ್ಷದ ನಾಯಕ ಗೋಪಾಲ್ ಕಂಡಾ ತಾನು ಹಾಗೂ ಇತರ ಪಕ್ಷೇತರರು ಬಿಜೆಪಿಗೆ ಷರತ್ತುರಹಿತ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ . ಆಡಳಿತಾರೂಢ ಬಿಜೆಪಿ 40 ಕ್ಷೇತ್ರಗಳಲ್ಲಿ ಜಯ ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು , ಬಹುಮತಕ್ಕೆ ಆರು ಸ್ಥಾಗಳ ಕೊರತೆ ಎದುರಿಸುತ್ತಿದೆ . ಕಾಂಗ್ರೆಸ್ 31 ಸ್ಥಾನಗಳನ್ನು ಬಾಚಿಕೊಂಡಿದೆ . ಏಳು ಪಕ್ಷೇತರರು ಹಾಗೂ ಜನನಾಯಕ ಜನತಾ ಪಕ್ಷ 10 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಮುಖ್ಯ ಪಾತ್ರವಹಿಸುವ ನಿರೀಕ್ಷೆ ಮೂಡಿಸಿದೆ .

ಶುಕ್ರವಾರ ಬೆಳಗ್ಗೆ ದಿಲ್ಲಿಗೆ ತಲುಪಿರುವ ಖಟ್ಟರ್ , ಹರ್ಯಾಣ ಭವನದಲ್ಲಿ ಪಕ್ಷೇತರ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ . ಬಿಜೆಪಿ ಉನ್ನತ ನಾಯಕರನ್ನು ಭೇಟಿಯಾಗಿ ಸರಕಾರ ರಚನೆಯ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ . ಬಿಜೆಪಿ ವಿರುದ್ಧ ಒಂದಾಗುವಂತೆ ಪಕ್ಷೇತರ ಶಾಸಕರಿಗೆ ಕರೆ ನೀಡಿರುವ ಹೂಡಾ , ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಝಾದ್‌ರನ್ನು ದಿಲ್ಲಿಯಲ್ಲಿ ಭೇಟಿಯಾದರು . “ ಹರ್ಯಾಣದಲ್ಲಿ ಜನತೆ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ . ಬಿಜೆಪಿ ಪಕ್ಷೇತರ ಶಾಸಕರುಗಳ ಬೆಂಬಲ ಪಡೆಯಲು ಅವರ ಮೇಲೆ ಒತ್ತಡ ಹಾಕಲು ಯತ್ನಿಸುತ್ತಿದೆ . ಇದು ಪ್ರಜಾಪ್ರಭುತ್ವ ವಿರೋಧಿ ಕೆಲಸ ” ಎಂದು ಕೂಡಾ ಹೇಳಿದ್ದಾರೆ . ಬಿಜೆಪಿ ಹರ್ಯಾಣದಲ್ಲಿ ಸರಕಾರ ರಚಿಸಿದರೆ , ಒಟ್ಟು ಅಭಿವೃದ್ಧಿ ಕಾರ್ಯ ಹೆಚ್ಚಾಗಲಿದೆ . ಹೆಚ್ಚಿನ ಪಕ್ಷೇತರ ಶಾಸಕರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪಕ್ಷದ ಹಿನ್ನಡೆಯಿಂದ ಹತಾಶರಾಗಿ ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷ ಸುಭಾಶ್‌ ಬರಾಲ ಹೇಳಿದ್ದಾರೆ .

Please follow and like us:
error