ಶಿವಸೇನೆ ಜತೆ ಮೈತ್ರಿಗೆ ನಕಾರ : ಸೋನಿಯಾ ಪಟ್ಟು ಸಡಿಲಿಸಿದ್ದೇಕೆ ?

ಹೊಸದಿಲ್ಲಿ , ನ . 13 : ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ವಿಫಲವಾದರೆ ಅದು ರಾಜ್ಯದಲ್ಲಿ ಪಕ್ಷದ ಅವಸಾನಕ್ಕೆ ಕಾರಣವಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷೆ ಸೋನಿಯಾ 
ಗಾಂಧಿಯವರಿಗೆ ರವಾನಿಸಿದ್ದಾರೆ . ಇದರಿಂದಾಗಿ ಶಿವಸೇನೆ ಜತೆ ಮೈತ್ರಿಗೆ ಖಡಾಖಂಡಿತವಾಗಿ ನಿರಾಕರಿಸಿದ್ದ ಸೋನಿಯಾ ತಮ್ಮ ನಿಲುವು ಸಡಿಲಿಸಿದ್ದಾರೆ ಎಂದು ತಿಳಿದುಬಂದಿದೆ . ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಾರಥಾನ್ ಚರ್ಚೆ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ತಮ್ಮ ವಾದ ಮಂಡಿಸಿದರು ಎಂದು ತಿಳಿದುಬಂದಿದೆ . ಕೇಸರಿ ಮೈತ್ರಿಕೂಟ ಕುಸಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಲಭಿಸಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಕ್ಷದ ಹಿರಿಯ ಮುಖಂಡರಾದ ಅಶೋಕ್ ಚವ್ಹಾಣ್ , ಪೃಥ್ವಿರಾಜ್ ಚವ್ಹಾಣ್ , ಬಾಳಾ ಸಾಹೇಬ್ ಥೋರಟ್ , ಮಾಣಿಕ್ ರಾವ್ ಠಾಕ್ರಿ . ಹಾಗೂ ರಜನಿ ಪಾಟೀಲ್ ಪ್ರತಿಪಾದಿಸಿದರು ಎನ್ನಲಾಗಿದೆ . ಶಾಸಕರು ಕೂಡಾ ಸರ್ಕಾರದ ಭಾಗವಾಗಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವುದನ್ನು ಕೂಡಾ ಪಕ್ಷದ ಹೈಕಮಾಂಡ್‌ಗೆ ಮನವರಿಕೆ ಮಾಡಿದರು . ಎಲ್ಲ ಶಾಸಕರು ತಮ್ಮ ಸ್ವಂತ ಬಲದಿಂದ ಗೆದ್ದಿದ್ದಾರೆ ಹಾಗೂ ಸಿಟ್ಟಾಗಿದ್ದಾರೆ . ಪಕ್ಷವನ್ನು ಒಡೆಯುವ ಬಿಜೆಪಿ ಸಂಚು ವಿಫಲಗೊಳಿಸುವ ಸಲುವಾಗಿ ಅವರನ್ನು ಜೈಪುರಕ್ಕೆ ಕರೆದೊಯ್ಯಲಾಗಿದೆ ಎಂಬ ಅಂಶವನ್ನು ಕೂಡಾ ವಿವರಿಸಿದರು . ಆದರೆ ಈ ವಾದಕ್ಕೆ ಎ . ಕೆ . ಆಂಟನಿ , ಮುಕುಲ್ ವಾಸ್ಟಿಕ್ , ಮಾಜಿ ಗೃಹಸಚಿವ ಶಿವರಾಜ್ ಪಾಟೀಲ್ ಸೇರಿದಂತೆ ಇತರ ಕೆಲ ಮುಖಂಡರಿಂದ ಪ್ರತಿರೋಧ ವ್ಯಕ್ತವಾಯಿತು . ಯಾವುದೇ ಕಾರಣಕ್ಕೆ ಶಿವಸೇನೆ ಜತೆ ಮೈತ್ರಿಗೆ ಮುಂದಾಗಬಾರದು ಎಂದು ಪತಿವಾದ ಮಂಡಿಸಿದರು . .

Please follow and like us:
error