ರಾಜ್ಯದ ಎಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ  ಜ 1 ರಿಂದ ಇಂದಿರಾ ಕ್ಯಾಂಟೀನ್ ಪ್ರಾರಂಭ

*: ಟಿ ಬಿ ಜಯಚಂದ್ರ*

*ಬೆಂಗಳೂರು, ಅಕ್ಟೋಬರ್ 11* : ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು ಮಾತ್ರವಲ್ಲದೆ, ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲೂ ಬೆಂಗಳೂರು ಮಾದರಿಯಲ್ಲಿಯೇ ಜನವರಿ 1 ರಿಂದ ಇಂದಿರಾ ಕ್ಯಾಂಟೀನ್‍ಗಳನ್ನು ಪ್ರಾರಂಭಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ

.

*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ ಅವರು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.*

ಶ್ರಮಿಕ ವರ್ಗದವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಮಹತ್ವಯುತ ಈ ಯೋಜನೆಯ ಅನುಷ್ಠಾನಕ್ಕೆ ನವೆಂಬರ್ ತಿಂಗಳ ಅಂತ್ಯದೊಳಗೆ ಸೂಕ್ತ ಸ್ಥಳ ಗುರುತಿಸಬೇಕು ಹಾಗೂ ಡಿಸೆಂಬರ್ ಮಾಸಾಂತ್ಯದೊಳಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಜನ ದಟ್ಟಣೆ ಇರುವ ಎಂದು ಸಂಪುಟ ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಿದೆ.

ಅತ್ಯಧಿಕ ಜನ ದಟ್ಟಣೆ ಇರುವ ಆಸ್ಪತ್ರೆಗಳ ಆವರಣ, ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಸೂಚಿಸಲಾಗಿದೆ. ರಾಜ್ಯದ 171 ಸ್ಥಳಗಳಲ್ಲಿನ 246 ಕೇಂದ್ರಗಳಲ್ಲಿ ಜನವರಿ 1 ರಂದು ಇಂದಿರಾ ಕ್ಯಾಂಟೀನ್‍ಗಳು ಪ್ರಾರಂಭವಾಗಲಿವೆ. ಇದಕ್ಕಾಗಿ ಪ್ರತಿ ದಿನಕ್ಕೆ 29 ಲಕ್ಷ ರೂ ನಂತೆ ಪ್ರತಿ ಮಾಹೆಗೆ ಸುಮಾರು ಒಂಭತ್ತು ಕೋಟಿ ರೂ ಸಹಾಯ ಧನ ಬಿಡುಗಡೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.

*ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ*: ನವೆಂಬರ್ 13 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನವು ನಡೆಸಲು ಸಂಪುಟ ತೀರ್ಮಾನಿಸಿದೆ.

*ಮುಖ್ಯಮಂತ್ರಿಯವರ ಅನಿಲ ಭಾಗ್ಯ*: ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ವ್ಯಾಪ್ತಿಗೆ ಒಳಪಡದ ಫಲಾನುಭವಿಗಳಿಗೆ ಮುಖ್ಯಮಂತ್ರಿಯವರ ಅನಿಲ ಭಾಗ್ಯ ಯೋಜನೆಯಡಿ 4040 ರೂ ವೆಚ್ಚದಲ್ಲಿ ಎರಡು ಒಲೆಗಳ ಸ್ಟೌವ್ ಒದಗಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ರಾಜ್ಯದಲ್ಲಿ 28 ಲಕ್ಷ ಫಲಾನುಭವಿ ಕುಟುಂಬಗಳು ಒಳಪಡುವ ಈ ಯೋಜನೆಯ ಸೌಲಭ್ಯವನ್ನು 2018 ರ ಮಾರ್ಚ್ ಅಂತ್ಯದೊಳಗೆ ಹತ್ತು ಲಕ್ಷ ಫಲಾನುಭವಿಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಇದಕ್ಕಾಗಿ ಈ ಯೋಜನೆಗೆ 1137 ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಸಂಪುಟ ನಿರ್ಣಯಿಸಿದೆ.

*ಪುರ್ನಬೆಳಕು* : ಅದೇ ರೀತಿ ಸೀಮೆ ಎಣ್ಣೆ ಆಧ್ಯಾರ್ಪಣೆ ಮಾಡುವ ಕುಟುಂಬಗಳಿಗೆ ಉಚಿತ ಎಲ್ ಇ ಡಿ ಬಲ್ಬ್ ವಿಸ್ತರಿಸುವ ಯೋಜನೆಗೂ ಸಂಪುಟ ಅನುಮೋದನೆ ನೀಡಿದೆ.

*ಡಿ ಎನ್ ಬಿ ಕೋರ್ಸ್‍ಗೆ ಒಪ್ಪಿಗೆ*: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ತಜ್ಞ ವೈದ್ಯರ ಕೊರತೆಯನ್ನು ನೀಗಿಸಲು ಸೇವಾ ನಿರತ ವೈದ್ಯರಿಗೆ ಬೆಂಗಳೂರಿನ ಕೆ. ಜಿ. ಜನರಲ್ ಮತ್ತು ಜಯನಗರ ಸಾರ್ವಜನಿಕ ಆಸ್ಪತೆ,್ರ ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಕೋಲಾರ, ಕಲಬುರಗಿ, ತುಮಕೂರು ಹಾಗೂ ವಿಜಯಪುರ ಒಳಗೊಂಡಂತೆ ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೈದ್ಯಕೀಯ ಸೇವೆಗೆ ಅನುಕೂಲವಾಗುವ ಮೂರು ವರ್ಷದ ಸ್ನಾತಕೋತ್ತರ ಡಿಪ್ಲೋಮೇಟ್ ಇನ್ ನ್ಯಾಷನಲ್ ಬೋರ್ಡ್ ಕೋರ್ಸ್‍ಗಳನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಸಂಪನ್ಮೂಲದಿಂದ ಪ್ರಾರಂಭಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

*ಆಂಬುಲೆನ್ಸ್ ಖರೀದಿಗೆ ಸಮ್ಮತಿ*: ಆರೋಗ್ಯ ಕವಚ ಯೋಜನೆಯ ಹಳೆಯ 95 ಆಧುನಿಕ ಜೀವ ರಕ್ಷಕ ವ್ಯವಸ್ಥೆ ( ಅಡ್ವಾನ್ಸ್ ಲೈಫ್ ಸಪೋರ್ಟರ್ಸ್ ) ಮತ್ತು 276 ಮೂಲ ಜೀವ ರಕ್ಷಕ ವ್ಯವಸ್ಥೆ ( ಬೇಸಿಕ್ ಲೈಫ್ ಸಪೋರ್ಟರ್ಸ್ ) ಆಂಬುಲೆನ್ಸ್‍ಗಳನ್ನು ಬದಲಾಯಿಸಿ 61.78 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಆಂಬುಲೆನ್ಸ್‍ಗಳನ್ನು ಖರೀದಿಸಲು ಸಚಿವ ಸಂಪುಟ ಸಮ್ಮತಿಸಿದೆ.

*ಜಾಗೃತಿ ಸಮಿತಿಗಳ ಸಂಯೋಜಕರಿಗೆ ಗೌರವ ಧನ*: ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಜಾಗೃತಿ ಸಮಿತಿಗಳ ಮೂಲಕ ನ್ಯಾಯಬೆಲೆ ಅಂಗಡಿಗಳ ಕಾರ್ಯ ನಿರ್ವಹಣೆಯ ಸಾಮಾಜಿಕ ಪರಿಶೋಧನೆ ಕೈಗೊಳ್ಳಲು ತರಬೇತಿಯಲ್ಲಿ ಪಾಲ್ಗೊಳುವ ತಾಲ್ಲೂಕು ಸಂಯೋಜಕರಿಗೆ 150 ರೂ ಹಾಗೂ ಗ್ರಾಮ ಸಂಯೋಜಕರಿಗೆ 75 ರೂ ಗೌರವ ಧನ ನೀಡಲು ಅನುಕೂಲವಾಗುವಂತೆ ಪ್ರಸ್ತುತ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕೆಲವು ಮಾರ್ಪಾಡು ಮಾಡಲು ರಾಜ್ಯ ಸಂಪುಟ ಅನುಮೋದನೆ ನೀಡಿದೆ.

*ಲೇಖನ ಸಾಮಗ್ರಿ ಖರೀದಿಸಲು ಒಪ್ಪಿಗೆ*: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ 40,765 ವಿದ್ಯಾರ್ಥಿಗಳಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ಸ್ ಮೂಲಕ ಲೇಖನ ಸಾಮಗ್ರಿಗಳನ್ನು ಖರೀದಿಸಿ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ.

*ಟೂಲ್ ಕಿಟ್ ವಿತರಣೆಗೆ ಅನುಮೋದನೆ*: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‍ಗಳನ್ನು ವಿತರಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅದೇ ವರ್ಗದ ವಿದ್ಯಾರ್ಥಿಗಳಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ಸ್ ಮೂಲಕ ಟೂಲ್ ಕಿಟ್‍ಗಳನ್ನು ಉಚಿತವಾಗಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

*ಮೆಕ್ಯಾನಿಕಲ್ ಉಪಕರಣಗಳನ್ನು ಖರೀದಿಸಲು ಒಪ್ಪಿಗೆ*: ರಾಜ್ಯದ 46 ಸರ್ಕಾರಿ ಐ ಟಿ ಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು 20.27 ಕೋಟಿ ರೂ. ಅಂದಾಜು ವೆಚ್ಚದಲ್ಲಿ 26 ವಿವಿಧ ಮೆಕ್ಯಾನಿಕಲ್ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. 46 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 16.30 ಕೋಟಿ ರೂ. ಅಂದಾಜು ವೆಚ್ಚದಲ್ಲಿ 127 ವಿವಿಧ ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟ ಸಮ್ಮತಿಸಿದೆ.

*ಗುತ್ತಿಗೆ ದರದಲ್ಲಿ ಕಡಿತ* : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ದಾವಣಗೆರೆ ಡೆಂಟಲ್ ಚಾರೀಟಬಲ್ ಟ್ರಸ್ಟ್‍ಗೆ ದಾವಣಗೆರೆಯ ಜೆ ಹೆಚ್ ಪಟೇಲ್ ಬಡಾವಣೆಯಲ್ಲಿ 15,000 ಚದರಡಿ ವಿಸ್ತೀರ್ಣದ ಜಾಗವನ್ನು ನೀಡುವ ಗುತ್ತಿಗೆ ದರವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

*ರಿಯಾಯಿತಿ ಗುತ್ತಿಗೆ ದರದಲ್ಲಿ ಜಾಗ*: ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಡಿವಾಳ ಮಾಚಿದೇವ ಸಂಘಕ್ಕೆ ಖಾಸಗೀ ವಸತಿ ಬಡಾವಣೆಯಲ್ಲಿನ 4465 ಚದರಡಿ ವಿಸ್ತೀರ್ಣದ ಜಾಗವನ್ನು ಚದರ ಅಡಿಗೆ 10 ರೂ ರಿಯಾಯಿತಿ ಗುತ್ತಿಗೆ ದರದಂತೆ ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ದಾವಣಗೆರೆ ಜಿಲ್ಲಾ ಒಕ್ಕಲಿಗರ ಸಂಘಕ್ಕೂ ದಾವಣಗೆರೆಯ ಆವರೆಗೆರೆ ಗ್ರಾಮದ ಖಾಸಗೀ ಬಡಾವಣೆಯಲ್ಲಿನ 21,418 ಚದರಡಿ ವಿಸ್ತೀರ್ಣದ ನಾಗರೀಕ ಸೌಲಭ್ಯ ನಿವೇಶನವನ್ನು ಶೇಕಡಾ 10 ರ ರಿಯಾಯತಿ ದರದಲ್ಲಿ ನೀಡಲು ಸಚಿವ ಸಂಪುಟ ಅನುಮತಿ ನೀಡಿದೆ.

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ರೈತ ಉತ್ಪಾದಕರ ಸಂಸ್ಥೆಗಳ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲ್ಲೂಕಿನ ಹಿರೆಕೆರೂರು ಪಟ್ಟಣದ ದುರ್ಗಾದೇವಿ ಕೆರೆ ಹಾಗೂ ಬಹುಗ್ರಾಮ ಕೆರೆಗಳಿಗೆ ಕುಮದ್ವತಿ ನದಿಯಿಂದ ಅಂದಾಜು 24 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸುವ ಯೋಜನಾ ವರದಿಗೆ ಸಂಪುಟ ಆಡಳಿತಾತ್ಮಕ ಅನುಮತಿ ನೀಡಿದೆ.

ಹಿರೆಕೆರೂರು ತಾಲ್ಲೂಕಿನ 13 ಕೆರೆ ಹಾಗೂ ಬ್ಯಾಡಗಿ ತಾಲ್ಲೂಕಿನ 2 ಕೆರೆಗಳಿಗೆ ವರದಾ ನದಿಯಿಂದ ನೀರನ್ನು ಎತ್ತಿ ತುಂಬಿಸುವ 38 ಕೋಟಿ ರೂ ಅಂದಾಜು ವೆಚ್ಚದಲ್ಲಿ ಗುಡ್ಡದ ಮಲ್ಲಾಪುರ್ ಜೊತೆ ನೀರಾವರಿ ಯೋಜನೆ ವಿವರವಾದ ಕ್ರಿಯಾ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

*ಮಾಸ್ಟರ್ ಪ್ಲಾನ್‍ಗೆ ಸಮ್ಮತಿ*: ವಿಜಯಪುರ ಮಹಾನಗರ ಪಾಲಿಕೆಯ ಮಾಸ್ಟರ್ ಪ್ಲಾನ್ ಅನ್ವಯ ಅದರ ವ್ಯಾಪ್ತಿಯಲ್ಲಿ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಮಾಲೀಕರಿಗೆ ನೂತನ ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಸಂಪುಟ ಸಮ್ಮತಿಸಿ ಸೂಚಿಸಿದೆ.

*ಹೊಸ ತಾಲ್ಲೂಕಾಗಿ ಮೂಡಲಗಿ*: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮೂಡಲಗಿ ಪಟ್ಟಣವನ್ನು ಹೊಸ ತಾಲ್ಲೂಕನ್ನಾಗಿ ರಚಿಸಲು ಸಂಪುಟವು ತೀರ್ಮಾನಿಸಿದೆ.

ರಾಮನಗರ ಜಿಲ್ಲೆ ಮತ್ತು ತಾಲ್ಲೂಕು, ಬಿಡದಿ ಹೋಬಳಿಯ ಕಾಕರಾಮನ ಹಳ್ಳಿ, ಬೋರೆ ಹಳ್ಳಿ ಮತ್ತು ಕರೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ ವಸತಿ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿನ ಮಾಲಿಕರಿಗೆ ಸಾಂತ್ವನ ನಿವೇಶನ ನೀಡುವ ಯೋಜನೆಗೆ ಸಚಿವ ಸಂಪುಟ ಸಮ್ಮತಿಸಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.

Please follow and like us:
error