ಕಲಬುರಗಿ, ಅ.15: ಪ್ರಧಾನಿ ಮೋದಿ ಬಡ ಕುಟುಂಬದಿಂದ ಬಂದ ವ್ಯಕ್ತಿ ಎಂಬುದನ್ನು ಬಿಂಬಿಸಲು ಬಿಜೆಪಿ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ದಾರ್ ವಲ್ಲಭಬಾಯಿ ಪಟೇಲ್ ತಮಗಾಗಿ ಒಂದು ಮನೆ ನಿರ್ಮಿಸಿಕೊಳ್ಳಲಿಲ್ಲ. ತಾವು ಮನೆ ನಿರ್ಮಿಸಿಕೊಂಡರೆ ಇನ್ನೆಲ್ಲಿ ಜನರ ಮನೆಗಳ ನಿರ್ಮಾಣಕ್ಕೆ ಹಣದ ಕೊರತೆ ಕಾಡುತ್ತದೋ ಎಂಬ ಆತಂಕ ಅವರಿಗಿತ್ತು. ಈಗ ನೋಡಿದರೆ ಸರ್ದಾರ್ ಹೆಸರಿನಲ್ಲಿ 3000 ಕೋಟಿ ಖರ್ಚು ಮಾಡಿ ಸ್ಮಾರಕ ನಿರ್ಮಿಸಲಾಗಿದೆ. ಈಗ ಸರ್ದಾರ್ ಇದ್ದಿದ್ದರೆ ಅವರ ಗತಿ ಹೇಗಿರುತ್ತಿತ್ತೊ ಗೊತ್ತಿಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ಪ್ರತಿಮೆಗಳನ್ನು ಸ್ಥಾಪಿಸುವ ಬದಲಿಗೆ ಕೇವಲ 300 ಕೋಟಿ ರೂ. ಖರ್ಚು ಮಾಡಿ ಒಂದು ಮೆಡಿಕಲ್ ಕಾಲೇಜು ನಿರ್ಮಿಸಿದ್ದರೆ ಸಾವಿರಾರು ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದರಲ್ಲವೆ. ಕೇಂದ್ರ ಸರಕಾರ ಯಾವುದನ್ನೂ ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿಲ್ಲ. ಕರ್ನಾಟಕದಲ್ಲೂ ಅಂಥದ್ದೇ ಸರಕಾರವಿದೆ. ಬಿಜೆಪಿ ತನ್ನ ಸರಕಾರ ರಚನೆಗೆ ವಿರೋಧ ಪಕ್ಷಗಳ ಶಾಸಕರನ್ನೇ ಖರೀದಿಸಲಾಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.
Please follow and like us: