ಮದುವೆ ಸಮಾರಂಭದಲ್ಲಿ ಕುರ್ಚಿಯಲ್ಲಿ ಕುಳಿತು ಊಟ ಮಾಡಿದ ದಲಿತನ ಥಳಿಸಿ ಹತ್ಯೆ

ಡೆಹ್ರಾಡೂನ್,ಮೇ.5: ಮದುವೆ ಸಮಾರಂಭದಲ್ಲಿ ಮೇಲ್ಜಾತಿಯವರ ಮುಂದೆ ಕುರ್ಚಿಯಲ್ಲಿ ಕುಳಿತು ಊಟ ಮಾಡಿದ 21ರ ಹರೆಯದ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಉತ್ತರಾಖಂಡದ ತೆಹ್ರಿ ಗಡ್ವಲ್ ಜಿಲ್ಲೆಯ ಶ್ರೀಕೊಟ ಎಂಬ ಪ್ರದೇಶದಿಂದ ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಎಪ್ರಿಲ್ 26ರಂದು ಈ ಘಟನೆ ನಡೆದಿದೆ. ಮರುದಿನ ಯುವಕ ಅನಾರೋಗ್ಯಕ್ಕೀಡಾದಾಗ ಆತನನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಆತ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ಮೃತನನ್ನು ತೆಹ್ರಿ ಗಡ್ವಲ್‌ನ ಬಾಸನ್ ಗ್ರಾಮದ ಜಿತೇಂದ್ರ ದಾಸ್ ಎಂದು ಗುರುತಿಸಲಾಗಿದೆ.

ಅದೇ ಪ್ರದೇಶಕ್ಕೆ ಸೇರಿದ ಏಳು ಆರೋಪಿಗಳ ವಿರುದ್ಧ ಎಪ್ರಿಲ್ 29ರಂದು ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆ ನಡೆದ ರಾತ್ರಿ ದಾಸ್ ಸೇರಿದಂತೆ ಮನೆಮಂದಿಯೆಲ್ಲ ದೂರದ ಸಂಬಂಧಿಯ ವಿವಾಹ ಸಮಾರಂಭಕ್ಕೆ ತೆರಳಿದ್ದರು. ಮನೆಯ ಉಳಿದ ಸದಸ್ಯರು ಒಂದು ಕಡೆ ಸೇರಿದ್ದಾಗ ಜಿತೇಂದ್ರ ದಾಸ್ ಮಾತ್ರ ಊಟ ಮಾಡಲು ತೆರಳಿದ್ದ. ನಾವೆಲ್ಲ ಊಟದ ಬಳಿಕ ಪ್ರತ್ಯೇಕವಾಗಿ ಮನೆಗೆ ವಾಪಸಾಗಿದ್ದೆವು. ಘಟನೆಯ ಬಗ್ಗೆ ನಮಗೆ ಮರುದಿನ ಬೆಳಗ್ಗೆಯಷ್ಟೇ ತಿಳಿಯಿತು. ದಾಸ್ ಮರುದಿನ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಆತನ ತಾಯಿ ಗಮನಿಸಿ ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ದಾಸ್‌ನ ಚಿಕ್ಕಪ್ಪ ಏಲಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮದುವೆ ಸಮಾರಂಭದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ ದಾಸ್‌ನ ಗೆಳೆಯ, ತಾನು ಹಲ್ಲೆಕೋರರಿಂದ ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ದಾಸ್‌ಗೆ ದಾರಿಯುದ್ದಕ್ಕೂ ಹಲ್ಲೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯನ್ನು ದೃಢಪಡಿಸಿರುವ ದಾಸ್‌ನ ಸೋದರ ಸಂಬಂಧಿ, ಹಲ್ಲೆಕೋರರು ದಾಸ್‌ನ ತಲೆ ಹಾಗೂ ಗುಪ್ತಾಂಗಕ್ಕೂ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಘಟನೆಯನ್ನು ಗಂಭೀರ ಎಂದು ವ್ಯಾಖ್ಯಾನಿಸಿರುವ ಪೊಲೀಸ್ ಪ್ರಧಾನ ನಿರ್ದೇಶಕ ಅಶೋಕ್ ಕುಮಾರ್, ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
Hindustantimes

Please follow and like us:
error