ಬಿಹಾರ ಚುನಾವಣೆ-1 – ದಿನೇಶ್ ಅಮೀನಮಟ್ಟು


ಅಧಿಕೃತವಾಗಿ ಚುನಾವಣಾ ಆಯೋಗ ಫಲಿತಾಂಶವನ್ನು ಪ್ರಕಟಿಸಿರುವುದರಿಂದ ಬಿಹಾರ ಚುನಾವಣೆಯ ಚಿತ್ರ ಸ್ಪಷ್ಟವಾಗಿದೆ. ಚುನಾವಣಾ ಆಯೋಗಕ್ಕೆ ದೂರು, ನ್ಯಾಯಾಲಯಕ್ಕೆ ಮೊರೆ ಇವೆಲ್ಲ ಇದ್ದದ್ದೆ. ಎನ್ ಡಿ ಎ ಗೆದ್ದಿದೆ, ಮಹಾಘಟಬಂಧನ ಸೋತಿದೆ-ಇದೇ ಅಂತಿಮ ಸತ್ಯ.

ಈಗಿನ ಜ್ವಲಂತ ಪ್ರಶ್ನೆ- ಬಿಹಾರದ ಹೊಸ ಮುಖ್ಯಮಂತ್ರಿ ಯಾರೆಂಬುದು ಅಷ್ಟೆ. ನರೇಂದ್ರಮೋದಿ, ಅಮಿತ್ ಶಹಾ ಅವರಿಂದ ಹಿಡಿದು ಬಹುತೇಕ ಬಿಜೆಪಿ ನಾಯಕರು ಮುಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂದು ಚುನಾವಣಾ ಪ್ರಚಾರ ಕಾಲದಲ್ಲಿ ಘೋಷಿಸಿದ್ದರು.

ಆ ಮಾತನ್ನು ಸದ್ಯಕ್ಕೆ ಉಳಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸೋಣ. ಆದರೆ ನಿನ್ನೆ ಸಂಜೆಯಿಂದ ರಾಷ್ಟ್ರೀಯ ಟಿವಿ ಚಾನೆಲ್ ಗಳಲ್ಲಿ (ಎನ್ ಡಿಟಿವಿ,ಇಂಡಿಯಾ ಟುಡೇ ಸೇರಿದಂತೆ) ನಿತೀಶ್ ಅವರೇ ಮುಖ್ಯಮಂತ್ರಿಯಾಗಬಹುದು ಎಂದು ಹೇಳುತ್ತಲೇ , ಕಡಿಮೆ ಸ್ಥಾನ ಪಡೆದಿರುವ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದು ಎಷ್ಟು ಸರಿ? ಅವರಿಗೆ ಮುಜುಗರವಾಗುವುದಿಲ್ಲವೇ? 2015ರಲ್ಲಿ ಆರ್ ಜೆಡಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾದರೂ ಕೊನೆಗೂ ಮುಜುಗರ ತಾಳಲಾರದೆ ಆ ಮೈತ್ರಿಕೂಟದಿಂದ ಹೊರಬರಲಿಲ್ಲವೇ? ಹಿರಿಯಣ್ಣನಾಗಿದ್ದವರು ಕಿರಿಯಣ್ಣನಾದ ಮೇಲೂ ಮುಖ್ಯಮಂತ್ರಿಯಾಗುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳ ಸುತ್ತ ಈ ಮೂರ್ಖರೋ, ಅತಿಜಾಣರಾಗಿರುವವರೋ ಒಟ್ಟಿನಲ್ಲಿ ಈ ಪತ್ರಕರ್ತರು ಚರ್ಚೆ ನಡೆಸುತ್ತಿದ್ದಾರೆ. ಇದರಿಂದ ಖುಷಿಖುಷಿಯಾಗುತ್ತಿರುವುದು ಯಾರಿಗೆ ಎನ್ನುವುದು ಚರ್ಚೆಯನ್ನು ಜೀವಂತವಾಗಿಟ್ಟಿರುವ ಪತ್ರಕರ್ತರಿಗೂ ಗೊತ್ತು.

ಆದರೆ ಇವರೆಲ್ಲ ಒಂದು ಪ್ರಮುಖ ವಿಷಯವನ್ನು ಚರ್ಚಿಸುವುದೇ ಇಲ್ಲ. ಚುನಾವಣಾ ಕಣದಲ್ಲಿರುವ ಎರಡು ಮೈತ್ರಿಕೂಟಕ್ಕೆ ಮತಹಾಕಿರುವ ಮತದಾರರು ಕೇವಲ ತಮ್ಮ ಆಯ್ಕೆಯ ಪಕ್ಷಕ್ಕೆ ಮಾತ್ರವಲ್ಲ, ಆ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಗೂ ಮತಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದವರು ಆ ಪಕ್ಷಕ್ಕೆ ಮಾತ್ರವಲ್ಲ, ತೇಜಸ್ವಿಯಾದವ್ ಮುಖ್ಯಮಂತ್ರಿಯಾಗಬೇಕೆಂದೂ ಮತಹಾಕಿದ್ದಾರೆ. ಅದೇ ರೀತಿ ಬಿಜೆಪಿ ಅಭ್ಯರ್ಥಿಗೆ ಮತಹಾಕಿದವರೆಲ್ಲರೂ ಆ ಪಕ್ಷಕ್ಕೆ ಮಾತ್ರ ಮತ ಹಾಕಿಲ್ಲ, ಅವರು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಬೇಕೆಂದೂ ಮತಹಾಕಿದ್ದಾರೆ. ತನ್ನ ಮತಬ್ಯಾಂಕ್ ನಿಂದ ಮತವರ್ಗಾವಣೆ ಮಾಡುವ ಶಕ್ತಿ ನಿತೀಶ್ ಅವರಿಗಿದೆ ಎನ್ನುವುದನ್ನು ಈ ಜಾಣ ಪತ್ರಕರ್ತರು ಮರೆತಿದ್ದಾರೆ.

ಒಂದೊಮ್ಮೆ ಎನ್ ಡಿ ಎ, ಸಾಮೂಹಿಕ ನಾಯಕತ್ವದಲ್ಲಿ,, ಇಲ್ಲವೇ ಸುಶೀಲ್ ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಈಗ ಗೆದ್ದಿರುವಷ್ಟು ಸ್ಥಾನಗಳನ್ನು ಅದಕ್ಕೆ ಗೆಲ್ಲಲಾಗುತ್ತಿತ್ತೇ? ಖಂಡಿತ ಇಲ್ಲ.

ಬಿಜೆಪಿಯ ನಿಷ್ಠ ಮತದಾರರಲ್ಲಿ ಬಹು ಮುಖ್ಯ ಗುಂಪಾಗಿರುವ ಭೂಮಿಹಾರ್ ಜಾತಿಯವರು ಖಂಡಿತ ಬಿಜೆಪಿ ಅಭ್ಯರ್ಥಿಗಳಿಗೆ ಮತಹಾಕಿರುತ್ತಾರೆ ಆದರೆ ಜೆಡಿಯುನ ಎಲ್ಲ ಅಭ್ಯರ್ಥಿಗಳಿಗೆ ಮತಹಾಕಿದ್ದಾರೆಂದು ಹೇಳಲಾಗುವುದಿಲ್ಲ. ಈ ಸಮುದಾಯ ನಿತೀಶ್ ಕುಮಾರ್ ಅವರನ್ನು ಎಂದೂ ಒಪ್ಪಿಕೊಂಡಿಲ್ಲ. ನಿತೀಶ್ ಅವರು ಮೂರನೇ ಅವಧಿಯಲ್ಲಿ ಭೂಸುಧಾರಣೆ ಕಾಯ್ದೆಯನ್ನು ಶತಾಯಗತಾಯ ಜಾರಿಗೆ ತರಲು ತಯಾರಿ ನಡೆಸಿದ್ದರಂತೆ. ಇದಕ್ಕಾಗಿ ರಚಿಸಲಾಗಿರುವ ಬಂಡೋಪಾಧ್ಯಾಯ ಸಮಿತಿ ವರದಿ ನಿತೀಶ್ ಮೇಜಿನ ಮೇಲಿತ್ತು. ಆದರೆ ಎನ್ ಡಿಎನಲ್ಲಿರುವ ಎಲ್ಲ ಭೂಮಿಹಾರ ಶಾಸಕರು ಆ ವರದಿಯನ್ನು ಅನುಷ್ಠಾನ ಮಾಡಲು ಬಿಡಲೇ ಇಲ್ಲ.

ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿಯಿಂದ ಇದ್ದರೂ, ಹಿಂದುಳಿದ ಜಾತಿಗೆ ಸೇರಿರುವ ಸುಶೀಲ್ ಮೋದಿಯವರ ಜೊತೆ ಸೌಹಾರ್ದ ಸಂಬಂಧ ಹೊಂದಿದ್ದರೂ ಆ ಪಕ್ಷದಲ್ಲಿರುವ ಮೇಲ್ಜಾತಿ ನಾಯಕರು ಅವರನ್ನು ಮಾತ್ರವಲ್ಲ, ಸುಶೀಲ್ ಮೋದಿಯವರನ್ನೂ ಒಪ್ಪಿರಲಿಲ್ಲ.
ಇದಕ್ಕೆ ಕಾರಣಗಳೂ ಇವೆ. ಮೊನ್ನೆ ಅನಿಲ್ ಹೆಗ್ಡೆ ಎಂಬ ಜಾರ್ಜ್ ಫರ್ನಾಂಡಿಸ್ ಅವರಿಗೆ ದತ್ತುಪುತ್ರನಂತಿದ್ದ, ಈಗ ನಿತೀಶ್ ಕುಮಾರ್ ಅವರ ಆಪ್ತರೊಬ್ಬರಾಗಿ ಅಲ್ಲಿಯೇ ಇರುವ ನನ್ನ ಹಳೆಯ ಗೆಳೆಯನ ಜೊತೆ ಮಾತನಾಡುತ್ತಿದ್ದೆ. (ಈ ಎಲೆಮರೆ ಕಾಯಿಯ ಬಗ್ಗೆ ಇನ್ನೊಮ್ಮೆ ದೀರ್ಘವಾಗಿ ಬರೆಯುತ್ತೇನೆ)

ಅವರು ಹೇಳಿದ್ದ ಒಂದು ಸಂಗತಿ ನನಗೂ ಆಶ್ಚರ್ಯ ಉಂಟುಮಾಡಿತ್ತು. ದಲಿತ ಹತ್ಯಾಕಾಂಡ ನಡೆದಿದ್ದ ಜೆಹನಾಬಾದ್ ಲೋಕಸಭಾ ಕ್ಷೇತ್ರವನ್ನು ನಿರಂತರವಾಗಿ ಭೂಮಿಹಾರ ಸಮುದಾಯಕ್ಕೆ ಸೇರಿದವರೇ ಪ್ರತಿನಿಧಿಸುತ್ತಿದ್ದರು. ( ಈ ಕ್ಷೇತ್ರವನ್ನು ಸಿಪಿಐ ನಿಂದ ನಾಲ್ಕು ಬಾರಿ ಗೆದ್ದಿದ್ದ ರಾಮಾಶ್ರೇಯ ಸಿಂಗ್ ಅವರೂ ಭೂಮಿಹಾರರು) ಕಳೆದ ಚುನಾವಣೆಯಲ್ಲಿ ಆ ಕ್ಷೇತ್ರದಿಂದ ಮೊದಲ ಬಾರಿ ದಲಿತ ಸಮುದಾಯಕ್ಕೆ ಸೇರಿರುವ ಚಂದ್ರವಂಶಿ ಪಂಗಡಕ್ಕೆ ಸೇರಿರುವ ಚಂದ್ರೇಶ್ವರ ಪ್ರಸಾದ್ ಜೆಡಿಯುನಿಂದ ಆಯ್ಕೆಯಾಗಿದ್ದಾರೆ. ಇದರಿಂದ ಭೂಮಿಹಾರ ಸಮುದಾಯ ಕಿಡಿಕಿಡಿಯಾಗಿತ್ತಂತೆ.

ನಿತೀಶ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಬಾರದೆಂದು ನಡೆಯುತ್ತಿರುವ ಅಭಿಯಾನ ಮತ್ತು ನಿತೀಶ್ ಬಲ ಕುಂದಿಸಲು ಎಲ್ ಜೆಪಿಯನ್ನು ಎದುರು ನಿಲ್ಲಿಸಿದ ಕುತಂತ್ರಿ ರಾಜಕಾರಣದ ಹಿಂದೆ ಈ ಭೂಮಿಹಾರ ನಾಯಕರಿದ್ದಾರೆ.

ಆದರೆ, ಬಿಹಾರದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನಿರಾಕರಿಸುವುದು ಅಷ್ಟೊಂದು ಸುಲಭವಲ್ಲ, ಅವರಿಗೆ ಬೇರೆ ಆಯ್ಕೆ ಇದೆ. 2015ರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ದೆಹಲಿ ಚಾಣಾಕ್ಯರು ಮೈಮುರಿದು ಏಳುವಷ್ಟರಲ್ಲಿ ಲಾಲುಪ್ರಸಾದ್ ಅವರು ಒಂದು ಕ್ಷಣವೂ ವ್ಯರ್ಥಮಾಡದೆ ನಮ್ಮ ನಾಯಕ ನಿತೀಶ್ ಕುಮಾರ್ ಎಂದು ಹೇಳಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಬಿಟ್ಟಿದ್ದರು. ಈ ಚುನಾವಣೆಯಲ್ಲಿ ನೋಡಿದ ಹಾಗೆ ಮಗ ತೇಜಸ್ವಿಯಾದವ್ ಅಪ್ಪನನ್ನು ಮೀರಿ ಬೆಳೆಯಬಲ್ಲ ನಾಯಕ. ಬಿಜೆಪಿನಾಯಕರೇನಾದರೂ ದುಷ್ಟ ಆಲೋಚನೆ ಮಾಡಿದರೆ ಅವರು ಖಂಡಿತ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಕಣ್ಣುಮುಚ್ಚಿ ಒಪ್ಪಿಕೊಳ್ಳಬಹುದು.

ನಮ್ಮಂತಹವರಿಗೆ ಗೊತ್ತಾಗುವ ಈ ಸಂಗತಿ ಚಾಣಾಕ್ಯ ಬಿರುದಾಂಕಿತರಾಗಿರುವವರಿಗೆ ಗೊತ್ತಾಗುವುದಿಲ್ಲವೇ?
(ಮುಂದುವರಿಯುವುದು)

Please follow and like us:
error