ನೋಟು ರದ್ದು:ಸಂಸತ್ತಿನಲ್ಲಿ ಆಘಾತಕಾರಿ ಅಂಕಿಅಂಶಗಳು ಬಹಿರಂಗ

parliament1ಹೊಸದಿಲ್ಲಿ,ನ.22: ನರೇಂದ್ರ ಮೋದಿ ಸರಕಾರದ ನೋಟು ನಿಷೇಧ ಕ್ರಮದ ಕುರಿತು ಪ್ರತಿಪಕ್ಷಗಳ ಆಕ್ರೋಶಕ್ಕೆ ಸಂಸತ್ತು ದಿನನಿತ್ಯ ಸಾಕ್ಷಿಯಾಗುತ್ತಿದೆ. ದೇಶದ ಆರ್ಥಿಕತೆಯ ಲ್ಲುಂಟಾಗಿರುವ ಅಲ್ಲೋಲಕಲ್ಲೋಲ ತೀವ್ರಗೊಳ್ಳುತ್ತಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸರಕಾರದ ದಯನೀಯ ವೈಫಲ್ಯದಿಂದಾಗಿ ಉಭಯ ಸದನಗಳ ಮುಂದೂಡಿಕೆಗಳು ದಿನಚರಿಯಾಗಿಬಿಟ್ಟಿದ್ದು, ಪ್ರತಿಪಕ್ಷ ಒಗ್ಗಟ್ಟು ಬಲವಾಗಿದೆ.

ಆದರೆ ಈ ಎಲ್ಲ ಗದ್ದಲ-ಗಲಾಟೆಗಳ ನಡುವೆಯೇ ಸಂಸದೀಯ ಪ್ರಶ್ನೆಗಳು ಮತ್ತು ಉತ್ತರಗಳ ಮೂಲ ಶಾಸಕಾಂಗ ಪ್ರಕ್ರಿಯೆ ನಡೆಯುತ್ತಲೇ ಇದೆ. ನೋಟು ನಿಷೇಧ ಕುರಿತು ಸಂಸದರು ಕೇಳುತ್ತಿರುವ ಪ್ರಶ್ನೆಗಳು ಮತ್ತು ಅವುಗಳಿಗೆ ವಿತ್ತ ಸಚಿವಾಲಯದ ಉತ್ತರಗಳೇನು? ಇಲ್ಲಿವೆ ವಿವರಗಳು…ಓದಿಕೊಳ್ಳಿ.

 1.54 ಲಕ್ಷ ಕೋಟಿ ರೂ: ಇದು ಜೂನ್, 2016ಕ್ಕೆ ಇದ್ದಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇದ್ದ ಬೃಹತ್ 20 ಕೆಟ್ಟ ಸಾಲಗಳು ಅಥವಾ ಅನುತ್ಪಾದಕ ಆಸ್ತಿ (ಎನ್‌ಪಿಎ)ಗಳ ಒಟ್ಟು ಮೊತ್ತ.

ಒಟ್ಟು ಸಾಲಗಳ ಎನ್‌ಪಿಎದಲ್ಲಿ ಸಿಂಹಪಾಲು ಇಂಡಿಯನ್ ಓವರ್‌ಸೀಸ್ ಬ್ಯಾಂಕ್(ಐಒಬಿ)ಗೆ ಸೇರಿದ್ದಾಗಿದೆ.

ಅತ್ಯಂತ ಹೆಚ್ಚಿನ ಎನ್‌ಪಿಎ ಮೂಲಲೋಹಗಳು ಮತ್ತು ಲೋಹ ಉತ್ಪನ್ನಗಳ ಕ್ಷೇತ್ರಕ್ಕೆ ನೀಡಲಾಗಿದ್ದು, ನಂತರದ ಸ್ಥಾನದಲ್ಲಿ ಜವಳಿ ಕ್ಷೇತ್ರವಿದೆ.

ಸಾಲ ವಸೂಲಿ ಪ್ರಯತ್ನವಾಗಿ ಕಳೆದ ಮೂರು ವರ್ಷಗಳಲ್ಲಿ ಸೆಕ್ಯುರಿಟೈಸೇಷನ್ ಆ್ಯಂಡ್ ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್‌ನಡಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಒಟ್ಟು 190,410 ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿವೆ.

ಇದು ಕಾಂಗ್ರೆಸ್‌ನ ಕಮಲನಾಥ್ ಮತ್ತು ಜೆಡಿಎಸ್‌ನ ಸಿ.ಪುಟ್ಟರಾಜು ಅವರು ಕೇಳಿದ್ದ ಪ್ರಶ್ನೆಗಳಿಗೆ ಲಭಿಸಿದ್ದ ಉತ್ತರ.

 152 ಕೋಟಿ ರೂ.:ಇದು 2013ರಿಂದ 2016,ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ದೇಶಾದ್ಯಂತ ಅಧಿಕಾರಿಗಳು ವಶಪಡಿಸಿಕೊಂಡಿರುವ ನಕಲಿ ನೋಟುಗಳ ಒಟ್ಟೂ ವೌಲ್ಯ. ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು ಸರಕಾರದ ನೋಟು ನಿಷೇಧ ಕ್ರಮದ ಮುಖ್ಯ ಉದ್ದೇಶವಾಗಿದೆ.

ಸರಾಸರಿ ಲೆಕ್ಕದಲ್ಲಿ ಪ್ರತಿವರ್ಷ ಭಾರತದಲ್ಲಿ 40 ಕೋ.ರೂ.ವೌಲ್ಯದ ನಕಲಿ ನೋಟುಗಳನ್ನು ವಶಪಡಿಸಕೊಳ್ಳಲಾಗಿದೆ.

ಸರಾಸರಿ ಲೆಕ್ಕದಲ್ಲಿ ಪ್ರತಿವರ್ಷ ದೇಶದಲ್ಲಿ ವಿವಿಧ ಮುಖಬೆಲೆಗಳ ಎಂಟು ಕೋಟಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

2007ರಲ್ಲಿ ಭಾರತದ ಸಮಾನಾಂತರ ಆರ್ಥಿಕತೆಯು ಜಿಡಿಪಿಯ ಶೇ.23ರಷ್ಟಿತ್ತು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ನಕಲಿ ನೋಟುಗಳ ಕುರಿತು ಬಿಜೆಪಿಯ ರೇಖಾ ವರ್ಮಾ ಮತ್ತು ಪಂಕಜ್ ಚೌಧರಿ ಅವರು ಪ್ರಶ್ನೆಗಳನ್ನು ಕೇಳಿದ್ದರು.

628:ಇದು ತೆರಿಗೆಯನ್ನು ತಪ್ಪಿಸಲು ಸ್ವಿಟ್ಝರ್‌ಲ್ಯಾಂಡ್‌ನ ಹಾಂಗ್‌ಕಾಂಗ್ ಶಾಂೈ ಬ್ಯಾಂಕಿಂಗ್ ಕಾರ್ಪೊರೇಷನ್‌ನಲ್ಲಿ ಖಾತೆಗಳನ್ನು ಹೊಂದಿದ್ದಕ್ಕಾಗಿ ಆದಾಯ ತೆರಿಗೆ ಕಾಯ್ದೆ 1961ರಡಿ ಸರಕಾರದ ಕ್ರಮವನ್ನು ಎದುರಿಸುತ್ತಿರುವ ಭಾರತೀಯರ ಸಂಖ್ಯೆ.

ಭಾರತೀಯ ಮೂಲದ 26 ಜನರು ಭಾಗಿಯಾಗಿರುವ 12 ಟ್ರಸ್ಟ್‌ಗಳ ವಿರುದ್ಧವೂ ಇಂತಹುದೇ ಕ್ರಮವನ್ನು ಜರುಗಿಲಾಗಿದೆ.

ಆದಾಯ ತೆರಿಗೆ ಕಾಯ್ದೆ,1961ರ ಕಲಂ 138ರಡಿ ಉಲ್ಲೇಖಿಸಿರುವವರನ್ನು ಹೊರತು ಪಡಿಸಿ ನಿರ್ದಿಷ್ಟ ತೆರಿಗೆದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗ ಗೊಳಿಸುವಂತಿಲ್ಲ. ಅಲ್ಲದೆ ಇಮ್ಮಡಿ ತೆರಿಗೆ ನಿವಾರಣೆ ಒಪ್ಪಂದಗಳು ಮತ್ತು ಇಮ್ಮಡಿ ತೆರಿಗೆ ನಿವಾರಣೆ ನಿರ್ಣಯದ ನಿಬಂಧನೆಗಳಡಿ ಸ್ವೀಕರಿಸಲಾದ ಮಾಹಿತಿಯು ಇಂತಹ ಒಪ್ಪಂದಗಳ ಗೌಪ್ಯ ರಕ್ಷಣೆ ಉಪನಿಯಮದ ವ್ಯಾಪ್ತಿಗೊಳಪಟ್ಟಿರುತ್ತದೆ ಎಂದು ಸರಕಾರವು ಖಾತೆದಾರರ ವಿವರಗಳನ್ನು ಕೋರಿದ್ದ ಪ್ರಶ್ನೆಗೆ ಉತ್ತರಿಸಿದೆ.

ಬಿಜೆಡಿಯ ವೈಜಯಂತ್ ಪಾಂಡಾ ಅವರು ಈ ಪ್ರಶ್ನೆಯನ್ನು ಕೇಳಿದ್ದರು.

551:ಇದು ಜಾರಿ ನಿರ್ದೇಶನಾಲಯವು 2013ರಿಂದ 2016,ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ.

2016,ಅಕ್ಟೋಬರ್‌ಗೆ ಇದ್ದಂತೆ ಸರಕಾರವು ಈ ಕಾಯ್ದೆಯಡಿ ಒಟ್ಟು 18,866 ಕೋ.ರೂ.ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದೆ.

ಶಿವಸೇನೆಯ ಪ್ರತಾಪರಾವ್ ಜಾಧವ್ ಮತ್ತು ಬಿಜೆಪಿಯ ಹರಿಶ್ಚಂದ್ರ ಚವಾಣ್ ಅವರು ಈ ಪ್ರಶ್ನೆಯನ್ನು ಕೇಳಿದ್ದರು.

4,164 ಕೋ.ರೂ.

ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ತಮ್ಮ ಕಪ್ಪುಹಣವನ್ನು ಬಹಿರಂಗಗೊಳಿಸಲು ನೀಡಲಾಗಿದ್ದ ನಾಲ್ಕು ತಿಂಗಳ ಗಡುವಿನಲ್ಲಿ ಘೋಷಣೆಯಾಗಿರುವ ವಿದೇಶಿ ಆಸ್ತಿಗಳ ಮೌಲ್ಯ.

ಒಟ್ಟು 648 ಘೋಷಣೆಗಳನ್ನು ಮಾಡಲಾಗಿದ್ದು, ತೆರಿಗೆ ಮತ್ತು ದಂಡ ರೂಪದಲ್ಲಿ 2,476 ಕೋ.ರೂ.ಗಳನ್ನು ಸಂಗ್ರಹಿಸಲಾಗಿದೆ.

ಈ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು 1,514 ದೂರುಗಳನ್ನು ಸಲ್ಲಿಸಿದೆ, 1,242 ಗುಂಪುಗಳಲ್ಲಿ ದಾಳಿಗಳನ್ನು ನಡೆಸಿದೆ ಮತ್ತು 2,029 ಕೋ.ರೂ.ವೌಲ್ಯದ ಅಘೋಷಿತ ಆಸ್ತಿಗಳನ್ನು ವಶಪಡಿಸಿಕೊಂಡಿದೆ.

ಆದಾಯ ಘೋಷಣೆ ಯೋಜನೆ ಕುರಿತು ಈ ಪ್ರಶ್ನೆಯನ್ನು ಆತಿಷ್‌ಚಂದ್ರ ದುಬೆ(ಬಿಜೆಪಿ),ಉದಯಪ್ರತಾಪ್ ಸಿಂಗ್(ಬಿಜೆಪಿ), ಕೌಶಲೇಂದ್ರ ಕುಮಾರ(ಜೆಡಿಯು), ಶರದ್ ತ್ರಿಪಾಠಿ(ಬಿಜೆಪಿ) ಮತ್ತು ರಾಕೇಶ ಸಿಂಗ್(ಬಿಜೆಪಿ) ಅವರು ಕೇಳಿದ್ದರು.

Varthabharati

Please follow and like us:
error