ನೋಟು ರದ್ದತಿ ಪರಿಣಾಮ ಚರ್ಚೆಗೆ ಮಧ್ಯರಾತ್ರಿ ಬಳಿಕ ಪ್ರಧಾನಿ ಸಭೆ

modi-pm

ಹೊಸದಿಲ್ಲಿ, ನ.14: ಹಳೆಯ 500 ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದತಿಯ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ರವಿವಾರ ತಡರಾತ್ರಿ ಹಿರಿಯ ಸಚಿವರ ಸಭೆ ನಡೆಸಿದರು.
ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲೆ, ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು, ಕಲ್ಲಿದ್ದಲು ಖಾತೆ ಸಚಿವ ಪಿಯೂಶ್ ಗೋಯಲ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ನಿರ್ಧಾರದಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಮಹತ್ವದ ಅಂಶಗಳನ್ನು ಸಭೆ ಚರ್ಚಿಸಿತು. ನಗದು ಸರಬರಾಜು ವ್ಯವಸ್ಥೆ ಸರಿಪಡಿಸಲು ಮೋದಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಬ್ಯಾಂಕಿಂಗ್ ಬಾತ್ಮೀದಾರರ ನಗದು ಇಟ್ಟುಕೊಳ್ಳಬಹುದಾದ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಬೇಕು, ಒಂದೇ ದಿನ ಒಂದಕ್ಕಿಂತ ಹೆಚ್ಚು ಬಾರಿ ಹಣ ಪಡೆಯಲು ಅವಕಾಶ ನೀಡಬೇಕು, ಎಟಿಎಂಗಳಲ್ಲಿ ಹೊಸ 500 ಹಾಗೂ 2,000 ರೂಪಾಯಿ ನೋಟು ಲಭ್ಯವಾಗುವಂತೆ ಅವಕಾಶ ಮಾಡಿಕೊಡಬೇಕು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಗೆ ನಗದು ಒದಗಿಸುವ ಸಲುವಾಗಿ ಮೈಕ್ರೊ ಎಟಿಎಂಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಕೆಲ ವಹಿವಾಟಿನಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲು ನೀಡಿದ್ದ ವಿನಾಯ್ತಿಯ ಗಡುವನ್ನು ನವೆಂಬರ್ 14ರ ಮಧ್ಯರಾತ್ರಿಯ ಬದಲು ನವೆಂಬರ್ 24ರ ಮಧ್ಯರಾತ್ರಿವರೆಗೆ ವಿಸ್ತರಿಸಲೂ ಸಭೆ ನಿರ್ಧರಿಸಿತು. ಹಿರಿಯ ನಾಗರಿಕರ ವಹಿವಾಟಿಗೆ ಬ್ಯಾಂಕುಗಳಲ್ಲಿ ಪ್ರತ್ಯೇಕ ಸರದಿ ವ್ಯವಸ್ಥೆ ಮಾಡುವುದು, ಹಳೆ ನೋಟು ವಿನಿಮಯಕ್ಕೆ ಪ್ರತ್ಯೇಕ ಸಾಲು ವ್ಯವಸ್ಥೆಗೊಳಿಸುವುದು ಕೂಡಾ ಸಭೆಯಲ್ಲಿ ಚರ್ಚೆಗೆ ಬಂತು.

Please follow and like us:
error