ನೀತಿ ಆಯೋಗ : ಸೌರವಿದ್ಯುತ್ ಘಟಕ ಸ್ಥಾಪಿಸಲು ಸಂಸದ ಸಂಗಣ್ಣ ಕರಡಿ ಪ್ರಸ್ತಾವನೆ

ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ 2,960 ಹೆಕ್ಟೇರ್ ಲಭ್ಯ | ನೀತಿ ಆಯೋಗಕ್ಕೆ ಪ್ರಸ್ತಾವನೆ ಸೌರ ವಿದ್ಯುತ್ ಘಟಕಕ್ಕೆ ಸಂಸದ ಸಂಗಣ್ಣ ಮನವಿ ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜಾರಿಗೊಳಿಸಿದ ಸೌಭಾಗ್ಯ ಯೋಜನೆ ಅಂಗವಾಗಿ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೌರವಿದ್ಯುತ್ ಘಟಕ

ಸ್ಥಾಪಿಸಬೇಕೆಂದು ಸಂಸದ ಸಂಗಣ್ಣ ಕರಡಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ನೀತಿ ಆಯೋಗದ ಉಪಾಧ್ಯಕ್ಷರೂ ಆಗಿರುವ ಅರ್ಥಶಾಸ್ತ್ರಜ್ಞ ಡಾ. ರಾಜೀವ್‍ಕುಮಾರ್ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿಯಾದ ಸಂಸದ ಸಂಗಣ್ಣ ಕರಡಿ, ಉದ್ದೇಶಿತ ಸ್ಥಳದ ವಿವರಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಿದರು. ಸದರಿ ಘಟಕ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿದೆ. ಈ ಪ್ರದೇಶ ಕೃಷಿಯೇತರ ಭೂಮಿಯಾಗಿದ್ದು, ಇಲ್ಲಿ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಕೊಪ್ಪಳ ಕ್ಷೇತ್ರದ ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‍ವರೆಗೆ ತಲುಪುವುದರಿಂದ, ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಎಲ್ಲಾ ರೀತಿಯಿಂದ ಸೂಕ್ತವಾಗಿದೆ. ಅಗತ್ಯ ಭೂಮಿ ಕೂಡಾ ಲಭ್ಯವಿದೆ. ಈ ಪ್ರದೇಶ ಸಂವಿಧಾನದ 371-ಜೆ ವ್ಯಾಪ್ತಿಯಲ್ಲಿದ್ದು, ಹಿಂದುಳಿದ ಪ್ರದೇಶ ಎಂದು ಪರಿಗಣಿತವಾಗಿದೆ. ಆದ್ದರಿಂದ, ಆದ್ಯತೆಯ ಮೇರೆಗೆ ಈ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡು, ಸೌರವಿದ್ಯುತ್ ಘಟಕ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಪ್ರಸ್ತಾವನೆ ಸ್ವೀಕರಿಸಿದ ಡಾ. ರಾಜೀವ್‍ಕುಮಾರ್, ಭೂಮಿ ಲಭ್ಯವಿರುವ ಹಿನ್ನೆಲೆಯಲ್ಲಿ ಹಾಗೂ 371-ಜೆ ವ್ಯಾಪ್ತಿಯಲ್ಲಿರುವ ಪ್ರದೇಶವಾದ್ದರಿಂದ, ಆದ್ಯತೆಯ ಮೇರೆಗೆ ಪರಿಗಣಿಸುವುದಾಗಿ ಭರವಸೆ ನೀಡಿದರು.