ಉಳುವ ಎಮ್ಮೆಲ್ಲೆಯ ನೋಡಿಲ್ಲಿ!

ಒಳ್ಳೆಯ ಮಳೆಯಾಗಿ ದೇಶದೆಲ್ಲೆಡೆ ಕೃಷಿ ಚಟುವಟಿಕೆ ಹುರುಪಿನಿಂದ ಸಾಗುತ್ತಿದೆ. ಅಂತೆಯೇ ಒಡಿಶಾದ ನವರಂಗಪುರ ಜಿಲ್ಲೆಯ ಪೂಜಾರಿಪಾಡಾ ಏಂಬ ಹಳ್ಳಿಯಲ್ಲೂ ಕೃಷಿಕೂಲಿಕಾರರ ಒಂದು ಗುಂಪು ಭತ್ತದ ನಾಟಿ ಕೆಲಸವನ್ನು ಬಿರುಸಿನಿಂದ ನಡೆಸುತ್ತಿದ್ದಾರೆ. ಒಡಿಶಾ ವಿಧಾನಸಭೆಯ ಸ್ಪೀಕರ್ ಮುಂಗಾರು ಅಧಿವೇಶನ ಕರೆಯುವ ಮೊದಲು ಅವರು ಭತ್ತದ ನಾಟಿ ಕಾರ್ಯವನ್ನು ಮುಗಿಸಬೇಕು. ಏಕೆಂದರೆ, ಭತ್ತದ ನಾಟಿ ಮಾಡುತ್ತಿರುವವ ಅವರಲ್ಲೊಬ್ಬರು ವಿಧಾನಸಭೆಯ ಸದಸ್ಯರು!
45 ವರ್ಷ ಪ್ರಾಯದ ಮನೋಹರ್ ರಾಂಧಾರಿ ಬಿಜು ಜನತಾದಳದಿಂದ ದಾಬುಗಾಂವ್ ಕ್ಷೇತ್ರವನ್ನು ಮೂರನೇ ಬಾರಿ ಪ್ರತಿನಿಧಿಸುತ್ತಿರುವ ಹಾಲಿ ಎಮ್ಮೆಲ್ಲೆ. ಅವರು ಭತ್ತದ ನಾಟಿ ಕೆಲಸವನ್ನು ಶೋಕಿ ಅಥವಾ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಕೃಷಿಯೇ ಅವರ ಉದ್ಯೋಗ. ಒಬ್ಬನೇ ಮಗನಾದ ಇವರು ಸಣ್ಣ ಪ್ರಾಯದಿಂದಲೇ ತನ್ನ ತಂದೆಗೆ ಸಹಾಯಕರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಕಳೆದ ವರ್ಷ ತಂದೆ ತೀರಿಕೊಂಡ ನಂತರ ಮನೆಯ 25 ಎಕರೆ ಕೃಷಿ ಕಾರ್ಯವನ್ನು ಇವರೇ ಸ್ವತಃ ನಡೆಸುತ್ತಿದ್ದಾರೆ. ಕೃಷಿಯಿಂದ ಇವರಿಗೆ ವಾರ್ಷಿಕ 7-8 ಲಕ್ಷ ರುಪಾಯಿ ವರಮಾನ ಬರುತ್ತದೆ. ಪ್ರತೀ ವರ್ಷ 10 ಕ್ವಿಂಟಾಲಿನಷ್ಟು ಅಕ್ಕಿಯನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡುತ್ತಾರೆ. ಉಳಿದಂತೆ, ಎಮ್ಮೆಲ್ಲೆ ಕೆಲಸವನ್ನು ಜನರ ಸೇವೆಯ ರೂಪದಲ್ಲಿ ನಿರ್ವಹಿಸುತ್ತಾರೆ.

ಇವರ ಸಹೋದರಿ ಪದ್ಮಿನಿ ದಿಯಾನ್ ಕೂಡಾ ರಾಜಕಾರಣಿಯಾಗಿದ್ದು ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಜವುಳಿ ಮತ್ತು ಕೈಮಗ್ಗ ಮಂತ್ರಿಯಾಗಿದ್ದಾರೆ. ತಾನು ಹೀಗೆ ಕೃಷಿಯಲ್ಲಿ ತೊಡಗಿರುವುದು ಇತರರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುವ ಮನೋಹರ್ ರಾಂಧಾರಿಯವರ ಮಾತು ಎಂಪಿ, ಎಮ್ಮೆಲ್ಲೆಗಿರಿ ಹಣ ಮಾಡುವ ಹೆದ್ದಾರಿ ಎಂದು ತಿಳಿದ ಜನಪ್ರತಿನಿಧಿಗಳಿಗೆ ಕೇಳಿಸಲು ಸಾಧ್ಯವೇ?

Panju Gangolli

Please follow and like us:
error