ಇಂದು ವಿಶ್ವಪತ್ರಿಕಾ ಸ್ವಾತಂತ್ರ್ಯ ದಿನ

ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ಪತ್ರಿಕಾ ಸ್ವಾತಂತ್ರದ ಮೂಲಭೂತ ತತ್ವ ಗಳ ಅರಿವು ಮೂಡಿಸಲು, ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಹುಟ್ಟಿಕೊಂಡ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ದಿನದ ಹಿನ್ನೆಲೆ :

ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸವಾರಿ ನಿನ್ನೆ ಮೊನ್ನೆಯದಲ್ಲ. ಜತೆಗೆ ಪತ್ರಕರ್ತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದಕ್ಕೆ ದಶಕಗಳ ಇತಿಹಾಸವೇ ಇದೆ. ಇದರ ಪರಿಣಾಮವಾಗಿ 1991ರಲ್ಲಿ ನಡೆದ ಯುನೆಸ್ಕೋದ 26ನೇ ಸಮೇಳನದಲ್ಲಿ ಪತ್ರಿಕಾ ಸ್ವಾತಂತ್ರದ ಕುರಿತು ಆಫ್ರಿಕನ್ ಜರ್ನಲಿಸ್ಟ್ ಗಳ ಒತ್ತಾಸೆಯಂತೆ ಮೇ 3ರಂದು ವಿಶ್ವ ಪತ್ರಿಕಾ ದಿನಾಚರಣೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. 1993ರಲ್ಲಿ ಇದು ಅಂಗೀಕಾರವಾಯಿತು.

ಉದ್ದೇಶ :
ವಿಶ್ವಾದಾದ್ಯಂತ ಪತ್ರಿಕಾ ಸ್ವಾತಂತ್ರ್ಯ ವನ್ನು ಮೌಲ್ಯಮಾಪನ ಮಾಡುವುದು, ತಮ್ಮ ಸ್ವಾತಂತ್ರ್ಯ ಕ್ಕಾಗಿ ಮಾಧ್ಯಮದ ಮೇಲೆ ನಡೆಯುತ್ತಿರುವ ದಾಳಿಯಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳ ಬಗೆಅರಿವು ಮೂಡಿಸುವುದು , ವೃತ್ತಿ ನಿರತರಾಗಿದ್ದಾಗ ಮೃತಪಟ್ಟ ಪತ್ರಕರ್ತರಿಗೆ ಶ್ರದ್ದಾಂಜಲಿ ಸಲ್ಲಿಸುವುದು ಜತೆಗೆ ವಿಶ್ವದ ಹಲವೆಡೆಗಳಲ್ಲಿ ಇಂದಿಗೂ ಪತ್ರಿಕೆಗಳಿಗೆ ಹೇರುವ, ಪತ್ರಕರ್ತರು, ಸಂಪಾದಕರು ಹಾಗೂ ಪ್ರಕಾಶಕರಿಗೆ ಕಿರುಕುಳ ನೀಡುವ, ಬಂಧಿಸುವ ಹಾಗೂ ಕೊಲೆ ಮಾಡಿದ ನಿದರ್ಶನಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಪತ್ರಿಕಾ ಸ್ವಾತಂತ್ರ್ಯ ಕಾಪಾಡುವ ಸಲುವಾಗಿ ಸರಕಾರಗಳಿಗೆ ಮನವರಿಕೆ ಮಾಡಿಕೊಡುವುದು ಈ ದಿನದ ಉದ್ದೇಶವಾಗಿದೆ.

ಈ ವರ್ಷದ ಥೀಮ್

ಪ್ರತಿ ವರ್ಷ ಧೈಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಥೀಮ್ ಕೀಪಿಂಗ್ ಪವರ್ ಇನ್ ಚೆಕ್ : ಮೀಡಿಯಾ, ಜಸ್ಟಿಸ್ ಆ್ಯಂಡ್ ದಿ ರೂಲ್ ಆಫ್ ಲಾ, ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಕಾನೂನು ಪರಿಸರವನ್ನು ಶಕ್ತಗೊಳಿಸುವುದು ಈ ವರ್ಷದ ಆಚರಣೆಯ ಮಹತ್ವವಾಗಿದೆ.

ನಿಲ್ಲದ ದೌರ್ಜನ್ಯ

ಪತ್ರಿಕಾ ಸ್ವಾತಂತ್ರ ಕುರಿತಾಗಿ ಯುನೆಸ್ಕೋ ಎಷ್ಟೇ ರಾಯಭಾರ ವಹಿಸಿ ಕಾರ್ಯ ನಿರ್ವಹಿಸಿದ್ದರೂ ಪತ್ರಕರ್ತರ ಹತ್ಯೆಯ ಗ್ರಾಫ್ ಏರುಗತಿಯಲ್ಲಿ ಸಾಗುತ್ತಿದೆ. ಭಾರತ ಕೂಡ ಪತ್ರಕರ್ತರ ಪಾಲಿಗೆ ಏಷ್ಯಾದ ಅತಿ ಡೇಡ್ಲಿಯಸ್ಟ್ ದೇಶವಾಗಿ ಪರಿಣಮಿಸಿದೆ. ಬೃಹತ್ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕೋಮಾ ಸ್ಥಿತಿ ತಲುಪಿದೆ. ಈವರೆಗೆ ನಡೆದಿರುವ ಪತ್ರಕರ್ತರ ಹತ್ಯೆಗಳಲ್ಲಿ ಶೇ.96ರಷ್ಟು ಪ್ರಕರಣಗಳಲ್ಲಿ ಆರೋಪಿಗಳ ಬಂಧನವೇ ಆಗಿಲ್ಲ.

ಕುಸಿದ ಭಾರತದ ಸ್ಥಾನ

ವಿಶ್ವ ಪತ್ರಿಕಾ ಸ್ವಾತಂತ್ರ ಸೂಚಿಯಲ್ಲಿ ಭಾರತವು 179 ರಾಷ್ಟ್ರಗಳ ಪೈಕಿ 140ನೇ ಸ್ಥಾನ ಪಡೆದಿದ್ದು, 9 ಸ್ಥಾನ ಕೆಳಗೆ ಕುಸಿದಿದೆ. 2002ರಿಂದೀಚೆಗೆ ಭಾರತದಲ್ಲಿ ಪತ್ರಕರ್ತರ ವಿರುದ್ಧದ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ನೆರೆಯ ಚೀನಾ ದೇಶವು 173ನೇ ಸ್ಥಾನದಲ್ಲಿದೆ.

Please follow and like us:
error