fbpx

ಅಭಿವ್ಯಕ್ತಿ ಸ್ವಾತಂತ್ರಕ್ಕೆ ಗಂಡಾಂತರ-ಸನತ್ ಕುಮಾರ ಬೆಳಗಲಿ

sanatakumar-belagali-ankanaಭಾರತದಂತೆ ಇಡೀ ಕರ್ನಾಟಕ ಕಾದ ಕೆಂಡವಾಗಿದೆ. ಈ ಉರಿ ಬಿಸಿಲಲ್ಲೇ ರಾಯಚೂರಿಗೆ ಹೋಗಿ ಬಂದೆ. ಅಲ್ಲಿ ಕಂಡ ದೃಶ್ಯಗಳು ಇಂದಿಗೂ ಹೃದಯವನ್ನು ಹಿಂಡುತ್ತಿವೆ. ರಾಜ್ಯದ ಉಳಿದ ನದಿಗಳಂತೆ ಈ ಬೆಂಗಾಡಿಗೆ ಆಸರೆಯಾಗಿದ್ದ ಕೃಷ್ಣೆಯ ಮಡಿಲು ಬರಿದಾಗಿದೆ. ತುಂಗಭದ್ರೆ ಬತ್ತಿ ಹೋಗಿದೆ. ದಿಕ್ಕು ಕಾಣದ ಜನ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ದನ ಕರುಗಳು ಕುಡಿಯಲು ನೀರಿಲ್ಲದೆ ರಸ್ತೆ ನಡುವೆ ವಿಲವಿಲ ಒದ್ದಾಡಿ ಸಾಯುತ್ತಿವೆ.

ಕರಾವಳಿಯಲ್ಲಿ ದನ ಸಾಗಾಟದ ಮೇಲೆ ಹಲ್ಲೆ ಮಾಡುವ ಯಾವ ಗೋರಕ್ಷಕರು ವಿಲ ವಿಲ ಒದ್ದಾಡಿ ಸಾಯುತ್ತಿರುವ ಈ ಮೂಕಪ್ರಾಣಿಗಳ ರಕ್ಷಣೆಗೆ ಬಂದಿಲ್ಲ. ಎಂಬತ್ತು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬೀದರ್ ಜಿಲ್ಲೆಯ ಮಾಂಜ್ರಾ ನದಿ ಬತ್ತಿ ಹೋಗಿದೆ. ಮಹಾರಾಷ್ಟ್ರದ ಲಾತೂರ್‌ನಂತೆ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೊಳವೆಬಾವಿಗಳು ಒಣಗಿ ನಿಂತಿವೆ. ಕೆರೆಗಳಲ್ಲಿ ಹನಿ ನೀರಿಲ್ಲ.

ಎರಡು ವಾರಗಳ ಹಿಂದೆ ಧಾರವಾಡಕ್ಕೆ ಹೋದಾಗಲೂ ಇದೇ ಅನುಭವ. ಮಲೆನಾಡಿನ ಸೆರಗಲ್ಲಿ ಏರ್ಪಡಿಸಿರುವ ಈ ಧಾರಾನಗರಿ ಬಿಸಿಲಿನಿಂದ ಬಸವಳಿದು ಹೋಗಿದೆ. ನೀರಿಗಾಗಿ ಹಾಹಾಕಾರ ಸಾಮಾನ್ಯವಾಗಿದೆ. ಕೆರೆಗಳೆಲ್ಲ ಬತ್ತಿ ಹೋಗಿವೆ. ಈ ಜಿಲ್ಲೆಯ ಬಹುತೇಕ ಹಳ್ಳಿಗಳೂ ಟ್ಯಾಂಕರ್ ನೀರನ್ನೇ ಅವಲಂಬಿಸಿವೆ. ಹುಬ್ಬಳ್ಳಿ-ಧಾರವಾಡಗಳಿಗೆ ನೀರು ಕುಡಿಸುವ ಮಲಪ್ರಭಾ ಜಲಾಶಯದಲ್ಲೂ ನೀರಿನ ಸಂಗ್ರಹ ಮುಗಿಯುತ್ತಾ ಬಂದಿದೆ. ರಾಜ್ಯದ ಜನತೆ, ದನ ಕರುಗಳು ಈ ರೀತಿ ವಿಲವಿಲ ಒದ್ದಾಡುತ್ತಿದ್ದರೆ ಈ ದೃಶ್ಯಗಳನ್ನೆಲ್ಲ ಕಂಡು ಬೆಂಗಳೂರಿಗೆ ಬಂದರೆ ಇಲ್ಲಿ ಕೋಮುವಾದಿಗಳು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ದಾಳಿಗೆ ಮುಂದಾಗಿದ್ದಾವೆ.

modi-kanhaiya-smriti-rahul-gandhi

ರಾಷ್ಟ್ರಪ್ರೇಮವಿದ್ದರೆ, ಗೋರಕ್ಷಣೆ ಬಗ್ಗೆ ಕಾಳಜಿ ಇದ್ದರೆ ಬರಪೀಡಿತ ಜನರ ದನ ಕರುಗಳ ನೆರವಿಗೆ ಧಾವಿಸಬೇಕಾಗಿತ್ತು. ಆದರೆ ಇವರೇನು ಮಾಡುತ್ತಿದ್ದಾರೆ? ಅದೇ ಹಳೆ ಚಾಳಿ, ತಮ್ಮ ಇಷ್ಟಕ್ಕೆ ವಿರೋಧವಾದದ್ದೇನೂ ನಡೆಯಕೂಡದೆಂದು ‘ಹೂಂಕಾರ’.

ಕಳೆದ ಮಂಗಳವಾರ ಸೃಷ್ಟಿ ಜನಕಲಾ ಕೇಂದ್ರದ ಕಲಾವಿದರು ಪ್ರಗತಿಪರ ಶಶಿಕಾಂತ ಯಡಹಳ್ಳಿ ಅವರ ‘ಅಚ್ಛೇದಿನ್ ಎಲ್ಲಿ?’ ಎಂಬ ಬೀದಿ ನಾಟಕವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿಸುತ್ತಿದ್ದ ವೇಳೆ ಗೂಳಿಗಳಂತೆ ನಡುವೆ ನುಗ್ಗಿದ ಈ ಕಿಡಿಗೇಡಿಗಳು ನಾಟಕ ಪ್ರದರ್ಶಿಸಕೂಡದೆಂದು ಕೂಗಾಡಿದರು. ಪ್ರಧಾನಿ ಮೋದಿ ಅವರನ್ನು ಟೀಕಿಸಕೂಡದು ಎಂದು ಗಲಾಟೆ ಮಾಡಿದರು.

ಈ ಕರ್ನಾಟಕದಲ್ಲಿ ಮೋದಿ ಸರಕಾರದ ವೈಫಲ್ಯಗಳನ್ನು ಹಾಗೂ ಗೋಮಾಂಸ ನಿಷೇಧದಂಥ ಕೋಮುವಾದಿ ಹುನ್ನಾರಗಳ ಬಗ್ಗೆ ಲೇವಡಿ ಮಾಡಲಾಗಿತ್ತು. ಇದನ್ನು ಸಹಿಸಲಾಗದ ಈ ಅವಿವೇಕಿಗಳನ್ನು ಪ್ರೇಕ್ಷಕರೆ ಆಚೆ ಎಳೆದುಕೊಂಡು ಹೋಗಿ ದೂರ ಬಿಟ್ಟು ಬಂದರು. ಆದರೂ ನಂತರ ಇವರು ಬಂದು, ಗಲಾಟೆ ಮಾಡಿದರೆಂದು ಯಡಹಳ್ಳಿ ಹೇಳಿದರು.

ಒಂದೆಡೆ ಬೀದಿ ನಾಟಕದ ಮೇಲೆ ಈ ರೀತಿ ಗೂಂಡಾಗಿರಿ ನಡೆಸಿದರೆ ಇನ್ನೊಂದೆಡೆ ಶಿವಮೊಗ್ಗದಲ್ಲಿ ಅಂಬೇಡ್ಕರ್ ಜಯಂತಿ ದಿನ ಭಾಷಣ ಮಾಡಿದ ಹೊಸತಲೆಮಾರಿನ ಸಂಸ್ಕೃತಿ ಚಿಂತಕ ಹಾಗೂ ಭಾಷಾ ವಿಜ್ಞಾನಿ ಆಗಿರುವ ಡಾ.ಮೇಟಿ ಮಲ್ಲಿಕಾರ್ಜುನ ಅವರು ಮಾಡಿದ ಭಾಷಣ ಚಡ್ಡಿಗಳನ್ನು ಕೆರಳಿಸಿದೆ.

ಈ ಮೇಟಿ ಮಲ್ಲಿಕಾರ್ಜುನ ಅವರನ್ನು ಅವರು ಕೆಲಸ ಮಾಡುವ ಸಹ್ಯಾದ್ರಿ ಕಾಲೇಜಿನಿಂದ ವಜಾ ಮಾಡಬೇಕೆಂದು ಶಿವಮೊಗ್ಗದ ಬಿಜೆಪಿ ಯುವ ಮೋರ್ಚಾದ ಅವಿವೇಕಿಗಳು ಚಳವಳಿ ನಡೆಸಿದ್ದಾರೆ. ರೋಹಿತ್ ಆತ್ಮಹತ್ಯೆ ಹಾಗೂ ಕನ್ಹಯ್ಯೆ ಕುಮಾರ್ ಬಂಧನದ ಬಗ್ಗೆ ಮೇಟಿ ಪ್ರಸ್ತಾಪಿಸಿದ್ದು ಚಡ್ಡಿಗಳ ತಲೆ ಮೇಲೆ ಮೆಣಸು ಅರೆದಂತಾಗಿದೆ.

ಡಾ.ಮೇಟಿ ಮಲ್ಲಿಕಾರ್ಜುನ ಮಾಡಿದ ಭಾಷಣದ ವಿವರಗಳನ್ನೆಲ್ಲ ಕೇಳಿದ್ದೇನೆ. ‘ಜನ ಹೋರಾಟ’ ಪತ್ರಿಕೆ ಈ ಬಗ್ಗೆ ವರದಿ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಈಡೇರದೆ ತಳಸಮುದಾಯದ ಪರಿಸ್ಥಿತಿ ಅಧೋಗತಿಯತ್ತ ಸಾಗಿರುವಾಗ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಹಾಕಿದರೆ ಪ್ರಯೋಜನವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಇಂಥ ಮೇಟಿ ಅವರನ್ನು ವಜಾ ಮಾಡುವುದು ಮಾತ್ರವಲ್ಲ ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಬೇಕು. ಈ ಗಾಂಧಿ ಹಂತಕ ಪರಿವಾರದ ರಾಷ್ಟ್ರವಿರೋಧಿಗಳು ಶಿವಮೊಗ್ಗದ ಪೊಲೀಸ್ ಠಾಣೆ ಮತ್ತು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಚಳವಳಿ ಎಂಬ ಪ್ರಹಸನ ನಡೆಸುತ್ತಿದ್ದಾರೆ.

ಮಂಡ್ಯದಲ್ಲಿ ಅಶಿತಾ-ಶಕೀಲ್ ಮದುವೆ ತಡೆಯಲು ಹೋಗಿ ವಿಫಲಗೊಂಡ ಈ ಭಾರತ ವಿರೋಧಿಗಳಿಗೆ ಈ ರಾಷ್ಟ್ರವನ್ನು, ದೇಶವನ್ನು ಆವರಿಸಿರುವ ಬರಗಾಲ ಕಣ್ಣಿಗೆ ಕಾಣಿಸುತ್ತಿಲ್ಲ. ನೀರಿಗಾಗಿ ಜನರ ಹಾಹಾಕಾರ ಹೃದಯಕ್ಕೆ ತಟ್ಟುತ್ತಿಲ್ಲ. ವಿಲ ವಿಲ ಒದ್ದಾಡಿ ಸಾಯುತ್ತಿರುವ, ಮೂಕ ಪ್ರಾಣಿಗಳ ಪ್ರಾಣಸಂಕಟ ಅರ್ಥವಾಗುತ್ತಿಲ್ಲ. ಬರೀ ಗೂಂಡಾಗಿರಿ ಅಲ್ಲದೆ ಇವರಿಗೆ ಇನ್ನೇನೂ ಗೊತ್ತಿಲ್ಲ.

ಇನ್ನೊಂದೆಡೆ ದಲಿತ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ಮುಂಬೈಗೆ ಬಂದ ಕನ್ಹಯ್ಯೊ ಕುಮಾರ್ ಪ್ರವೇಶ ನಿರ್ಬಂಧಿಸಲು ಕೋಮುವಾದಿಗಳು ವಿಫಲ ಯತ್ನ ನಡೆಸಿದ್ದರು. ಕನ್ಹಯ್ಯೊ ಭಾಷಣಕ್ಕೆ ಎಲ್ಲೂ ಸಭಾಂಗಣ ಸಿಗದಂತೆ ಮಾಡಿದರು. ಬಾಡಿಗೆ ಗೊತ್ತು ಪಡಿಸಿದ ಸಭಾಂಗಣವನ್ನು ರದ್ದುಗೊಳಿಸಿದರು. ಕಳೆದ ತಿಂಗಳು ಆಂಧ್ರಪ್ರದೇಶಕ್ಕೆ ಕನ್ಹಯ್ಯೆ ಹೋದಾಗಲೂ ಅವರ ಸಭೆಗೆ ಸಭಾಂಗಣ ಸಿಗದಂತೆ ಇವರು ಮಸಲತ್ತು ನಡೆಸಿದರು. ಸ್ವತಃ ಕೇಂದ್ರ ಸಚಿವ ವೆಂಕಯ್ಯನಾಯ್ಡು ಸಭಾಂಗಣದ ವ್ಯವಸ್ಥಾಪಕರಿಗೆ ಫೋನ್ ಮಾಡಿ ಬೆದರಿಕೆ ಹಾಕಿದರು.

ಆದರೂ ಕನ್ಹಯ್ಯ ಕಾರ್ಯಕ್ರಮ ಹೈದರಾಬಾದ್ ಮತ್ತು ವಿಜಯವಾಡಗಳಲ್ಲಿ ಯಶಸ್ವಿಯಾಗಿ ನಡೆಯಿತು. ಶನಿವಾರ ಮುಂಬಯಿ-ಪುಣೆಯಲ್ಲೂ ಯಶಸ್ವಿಯಾಗಿ ನಡೆದಿದೆ. ಈ ಎಲ್ಲ ಘಟನೆಗಳನ್ನು ನೋಡಿದಾಗ ಹದಿನಾಲ್ಕು ವರ್ಷಗಳ ಹಿಂದಿನ ಘಟನೆಯೊಂದು ನೆನಪಿಗೆ ಬಂತು. ಆಗ ಚಿಕ್ಕಮಗಳೂರಿನಲ್ಲಿ ಬಾಬಾ ಬುಡನ್‌ಗಿರಿಯಲ್ಲಿ ಕೋಮುವಾದಿಗಳ ಹುನ್ನಾರದ ವಿರುದ್ಧ ಕೋಮು ಸೌಹಾರ್ದ ವೇದಿಕೆ ಬೃಹತ್ ಸಮಾವೇಶ ಸಂಘಟಿಸಿತ್ತು. ಆಗಳು ಚಡ್ಡಿಗಳು ಇಂಥದ್ದೇ ಕುಚೇಷ್ಟೆ ಮಾಡಿದ್ದರು.

ಕೋಮು ಸೌಹಾರ್ದ ವೇದಿಕೆ ಸಮಾವೇಶಕ್ಕೆ ಅತಿಥಿಯಾಗಿ ಬಂದಿದ್ದು ನಿಡುಮಾಮಿಡಿ ಸ್ವಾಮೀಜಿ. ಅವರ ವಾಸ್ತವ್ಯಕ್ಕೆ ಸ್ಥಳೀಯ ಸರಕಾರಿ ಪ್ರವಾಸಿ ಗೃಹದಲ್ಲಿ ಕೋಣೆಯನ್ನು ಕಾದಿರಿಸಿದ್ದೆವು. ಆಗ ಸ್ಥಳಿಯ ಬಿಜೆಪಿ ನಾಯಕ (ಬಹುಶಃ ಸಿ.ಟಿ.ರವಿ ಎಂದು ನೆನಪು) ಅಲ್ಲಿ ಬಂದು ಗಲಾಟೆ ಮಾಡಿ ಇಲ್ಲಿಯ ಎಲ್ಲ ಕೋಣೆಗಳನ್ನು ತಾನು ಕಾಯ್ದಿರಿಸಿದ್ದಾಗಿ ಕೂಗಾಡಿದ ಪರಿಣಾಮವಾಗಿ ಸ್ವಾಮೀಜಿಗಳು ಹೊಟೇಲ್‌ನಲ್ಲಿ ಹೋಗಿ ತಂಗಬೇಕಾಯಿತು. ನಮ್ಮ ಊರಿಗೆ ಬಂದ ಅತಿಥಿಗಳನ್ನು ಸತ್ಕರಿಸುವ ಸೌಭಾಗ್ಯವೂ ಇವರಿಗೆ ಇಲ್ಲ. ಇದು ಇವರ ಸಂಸ್ಕೃತಿ.

ಅದು ಹೋಗಲಿ ಕನ್ಹಯ್ಯ ಕುಮಾರ್‌ನಂತಹ ಇನ್ನೂ ಇಪ್ಪತ್ತೆಂಟು ತುಂಬದ ಯುವಕನಿಗೆ ಈ ದೇಶವನ್ನಾಳುವ ಪಕ್ಷ ಯಾಕೆ ಇಷ್ಟೊಂದು ಹೆದರಿದೆ. 56 ಇಂಚಿನ ಎದೆಯ ಪ್ರದಾನಿಗೆ ಕನ್ಹಯ್ಯೊ ಕಂಡರೆ ಭಯವೇಕೆ? ಇದು ಭಿನ್ನಮತ ಹತ್ತಿಕ್ಕುವ ಸರ್ವಾಧಿಕಾರಿ ಫ್ಯಾಶಿಷ್ಟ್ ಸಂಸ್ಕೃತಿ ಅಲ್ಲವೇ?

ಮೋದಿ ಆಡಳಿತವನ್ನು ಅನೇಕರು ಅಘೋಷಿತ ತುರ್ತು ಸ್ಥಿತಿಗೆ ಹೋಲಿಸುತ್ತಾರೆ. ಆದರೆ ಇದು ತುರ್ತು ಸ್ಥಿತಿರಹಿತ ಕೆಟ್ಟದಾದ ನಾಝಿ, ಜರ್ಮನಿಯನ್ನೂ ಮುಸಲೋನಿಯ ಇಟಲಿಯನ್ನೂ ನೆನೆಪಿಸುವ ಆಡಳಿತ, ತುರ್ತು ಸ್ಥಿತಿ ಬಗ್ಗೆ ನನಗೆ ಗೊತ್ತಿದೆ. ಆಗ ಸಾಮಾನ್ಯ ಜನರಿಗೆ ಅಂಥ ತೊಂದರೆಯಾಗಿರಲಿಲ್ಲ. ದಾದ್ರಿಯಂಥ ಘಟನೆಗಳು ನಡೆದಿರಲಿಲ್ಲ. ಈಗ ಅದಕ್ಕಿಂತ ಅಪಾಯಕಾರಿ ಸ್ಥಿತಿ ಬಂದಿದೆ.

ಈಗ ನಾಟಕ ಪ್ರದರ್ಶಿಸುವುದು, ಭಾಷಣ ಮಾಡುವುದು, ಹಾಡು ಹಾಡುವುದು, ಅಷ್ಟು ಸುಲಭವಲ್ಲ. ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಗಲಭೆಕೋರರು ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ. ಎಮರ್ಜೆನ್ಸಿಯನ್ನು ಎದುರಿಸಿ ನಿಂತ ರಂಗಭೂಮಿಗೂ ಇವರು ಗಂಟು ಬಿದ್ದಿದ್ದಾರೆ. ಅತ್ಯಂತ ನೋವಿನ ಸಂಗತಿಯೆಂದರೆ ಇಡೀ ದೇಶವನ್ನು ಫ್ಯಾಶಿಸಂನ ಕರಾಳ ಛಾಯೆ ಆವರಿಸುತ್ತಿರುವಾಗ ಪ್ರಗತಿಪರರಿಂದ ತೀಕ್ಷ್ಣ ಪ್ರತಿರೋಧ ಕಂಡು ಬರುತ್ತಿಲ್ಲ. ಬದಲಾಗಿ ಒಡಕಿನ ಧ್ವನಿ ಅಲ್ಲಲ್ಲಿ ಕೇಳಿ ಬರುತ್ತಿದೆ. ನಮ್ಮ ನಡುವಿನ ಒಡಕು ಮನುವಾದಿ-ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಶಕ್ತಿಯನ್ನು ಇಮ್ಮಡಿಗೊಳಿಸುತ್ತಿದೆ ಎಂಬುದನ್ನು ಮರೆಯಬಾರದು.

ನಾವೆಲ್ಲ ಸಣ್ಣಪುಟ್ಟ ಭಿನ್ನಾಭಿಪ್ರಾಯ ವ್ಯಕ್ತಿ ಪ್ರತಿಷ್ಠೆಯನ್ನು ಬದಿಗಿಟ್ಟು ನಾಝಿವಾದದ ಗಂಡಾಂತರದಿಂದ ಈ ದೇಶವನ್ನು ಪಾರು ಮಾಡಬೇಕಾಗಿದೆ. ನಮ್ಮ ಸಂಘಟನೆಗಳಿಗಿಂತ ನಂಬಿದ್ದ ಸಿದ್ಧಾಂತ ತಲುಪುವ ಗುರಿ ಮುಖ್ಯವಾಗಬೇಕಾಗಿದೆ.

ಇತ್ತೀಚೆಗೆ ಮಾಯಾವತಿ ಅವರು ಕನ್ಹಯ್ಯ ಕುಮಾರ್ ಬಗ್ಗೆ ಮಾತನಾಡುತ್ತಾ ‘ಕನ್ಹಯ್ಯಾ ಜಾತಿ ಭೂಮಿಹಾರ ಆಗಿದ್ದು ಆತನ ಜಾತಿಯ ಜನರು ಈ ಹಿಂದೆ ದಲಿತರು ಹತ್ಯೆ ಮಾಡಿದ್ದಾರೆ. ಅದಕ್ಕಾಗಿ ಕನ್ಹಯ್ಯಾ ಕ್ಷಮೆ ಕೇಳಿ ಜೈ ಭೀಮ್ ಎಂದು ಹೇಳಲಿ’ ಎಂದು ಹೇಳಿದ್ದಾರೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

ಮಾಯಾವತಿ ಹಾಗೆ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದು ಮಾತು ನಿಜ. ಹುಟ್ಟು ಆಕಸ್ಮಿಕ. ಇಂಥ ಜಾತಿಯಲ್ಲೇ ಜನಿಸಬೇಕೆಂದು ಯಾರೂ ಅರ್ಜಿ ಹಾಕಿಕೊಂಡು ಜನಿಸುವುದಿಲ್ಲ. ಕನ್ಹಯ್ಯಿ ಭೂಮಿಹಾರ ಜಾತಿಯಲ್ಲಿ ಜನಿಸಿರಬಹುದು. ಆದರೆ ಅವರ ಇದೇ ಕುಟುಂಬ ‘ಕೆಂಬಾವುಟ’ ಹಿಡಿದು ತಮ್ಮದೇ ಜಾತಿಯ ಭೂಮಾಲಕರ ವಿರುದ್ಧ ಹೋರಾಡುತ್ತಾ ಬಂದಿದೆ. ಅವರದು ಅತ್ಯಂತ ಬಡ ಕುಟುಂಬ. ಅಂಗನವಾಡಿ ಕಾರ್ಯಕರ್ತೆಯಾದ ತಾಯಿಯ ಸಂಬಳವೇ ಈ ಕುಟುಂಬಕ್ಕೆ ಆಧಾರ.

ಕನ್ಹಯ್ಯ ಮಾತ್ರವಲ್ಲ ಭೂಮಿಹಾರ್ ಸಮುದಾಯದ ಚಂದ್ರಶೇಖರ ಸಿಂಗ್, ಇಂದ್ರದೀಪ್ ಸಿಂಹ ಅವರಂಥ ಕಮ್ಯೂನಿಸ್ಟ್ ನಾಯಕರು ವಿದ್ಯಾರ್ಥಿ ಚಳವಳಿಯಲ್ಲೇ ಕಮ್ಯೂನಿಸ್ಟ್ ಚಳವಳಿಗೆ ಧುಮುಕಿ ತಮ್ಮ ಜಾತಿಯ ಭೂಮಾಲಕರನ್ನು ಎದುರು ಹಾಕಿಕೊಂಡು ಹೋರಾಡಿದ ಅನೇಕ ಉದಾಹರಣೆಗಳಿವೆ. ಬಿಹಾರದ ನಕ್ಸಲ್ ಚಳವಳಿಯಲ್ಲೂ ಕೂಡ ವಿದ್ಯಾವಂತ ಭೂಮಿಹಾರದವರಿದ್ದರು.

ಅದೇನೇ ಇರಲಿ. ಬಾಬಾಸಾಹೇಬರು ಬೆಳಕಿನತ್ತ ತಂದ ಈ ಭಾರತವನ್ನು ಮತ್ತೆ ಮನುವಾದದ ಕಗ್ಗತ್ತಲ ಲೋಕಕ್ಕೆ ಹಿಂದಕ್ಕೆ ಎಳೆದುಕೊಂಡು ಹೋಗುವ ಮಸಲತ್ತುಗಳು ಹಿಂದೆಂದಿಗಿಂತಲೂ ತೀವ್ರವಾಗಿ ನಡೆದಿವೆ. ಮೋದಿ ಅಧಿಕಾರಕ್ಕೆ ಬಂದ ನಂತರ ಈ ಜಾತಿವಾದಿ ಶಕ್ತಿಗಳು ಎಲ್ಲೆಡೆ ಪುಂಡಾಟಿಕೆ ನಡೆಸಿದೆ. ಇಂಥ ಸಂದರ್ಭದಲ್ಲಿ ಸಮಾನಡತೆಯನ್ನು ಬಯಸುವವರು ಒಂದಾಗಿ ಇರಬೇಕಾಗಿದೆ.

ಮಾಯಾವತಿ ಅವರಿಗೆ ಇವೆಲ್ಲ ಗೊತ್ತಿಲ್ಲವೆಂದಲ್ಲ. ಮನುವಾದಿಗಳ ಹುನ್ನಾರ ಅವರಿಗೆ ಗೊತ್ತಿದೆ. ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಪೆರಿಯಾರ್, ಶಾಹು ಮಹಾರಾಜ, ಜೋತಿಬಾ ಫುಲೆ ಪ್ರತಿಮೆ ಅನಾವರಣಗೊಳಿಸಲು ಮುಂದಾದಾಗ ಇದೇ ಸಂಘಪರಿವಾರದ ಕರಾಳ ಶಕ್ತಿಗಳು ಅವರಿಗೆ ಸಾಕಷ್ಟು ತೊಂದರೆ ನೀಡಿದ್ದವು.

ಅಂತಲೇ ಮಾಯಾವತಿಯವರು ಸಂಸತ್ತಿನಲ್ಲಿ ರೋಹಿತ್ ವೇಮುಲಾ ಹಾಗೂ ಜೆಎನ್‌ಯು ಪ್ರಕರಣದಲ್ಲಿ ಎಡಪಕ್ಷಗಳೂ ಹಾಗೂ ಇತರ ಜಾತ್ಯತೀತ ಪಕ್ಷಗಳ ಜೊತೆ ಸೇರಿ ಉಳಿದವರಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಮೋದಿ ಸರಕಾರವನ್ನು ಹಾಗೂ ಸ್ಮತಿ ಇರಾನಿಯನ್ನು ತರಾಟೆಗೆ ತೆಗೆದುಕೊಂಡರು.

ಕನ್ಹಯ್ಯ ವಿಷಯದಲ್ಲಿ ಯಾರೋ ಚಡ್ಡಿ ಮಾಧ್ಯದವರು ಏನೋ ಕುಚೇಷ್ಟೆಯ ಪ್ರಶ್ನೆ ಕೇಳಿ ತಪ್ಪು ಕಲ್ಪನೆ ಉಂಟಾಗುವಂತಹ ಉತ್ತರ ಹೊರತರಬಹುದು. ಅದು ಮುಖ್ಯವಲ್ಲ. ನಾವೆಲ್ಲ ಒಂದಾಗಿ ಮನುವಾದಿಗಳನ್ನು ಹಿಮ್ಮೆಟ್ಟಿಸಿ ಪ್ರಬುದ್ಧ ಭಾರತ ನಿರ್ಮಿಸಬೇಕಾಗಿದೆ.

 

ಅತ್ಯಂತ ನೋವಿನ ಸಂಗತಿಯೆಂದರೆ ಇಡೀ ದೇಶವನ್ನು ಫ್ಯಾಶಿಸಂನ ಕರಾಳ ಛಾಯೆ ಆವರಿಸುತ್ತಿರುವಾಗ ಪ್ರಗತಿಪರರಿಂದ ತೀಕ್ಷ್ಣ ಪ್ರತಿರೋಧ ಕಂಡು ಬರುತ್ತಿಲ್ಲ. ಬದಲಾಗಿ ಒಡಕಿನ ಧ್ವನಿ ಅಲ್ಲಲ್ಲಿ ಕೇಳಿ ಬರುತ್ತಿದೆ. ನಮ್ಮ ನಡುವಿನ ಒಡಕು ಮನುವಾದಿ-ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಶಕ್ತಿಯನ್ನು ಇಮ್ಮಡಿಗೊಳಿಸುತ್ತಿದೆ ಎಂಬುದನ್ನು ಮರೆಯಬಾರದು.

Please follow and like us:
error

Leave a Reply

error: Content is protected !!