ಅನ್ನ ನೀಡುವ ರೈತರ ಕೂಗಿಗೆ ಒಕ್ಕೂಟ ಸರ್ಕಾರ ಕಿವಿಗೊಡಬೇಕು- ಟಿ.ಎ.ನಾರಾಯಣಗೌಡ್ರು

ದೇಶದ ಅನ್ನದಾತ ರೈತರು ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ರೈತರ ಕೂಗಿಗೆ ಒಕ್ಕೂಟ ಸರ್ಕಾರ ಕಿವಿಗೊಡಬೇಕು. ಕಾನೂನುಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಟಿ.ಎ.ನಾರಾಯಣಗೌಡ್ರು ಒತ್ತಾಯಿಸಿದ್ದಾರೆ.

ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಶಕ್ತಿಗಳ ಕೈಗೆ ನೀಡುವ ಅಪಾಯಕಾರಿ ಅಂಶಗಳು ಹೊಸದಾಗಿ ಜಾರಿಯಾದ ಕೃಷಿ ಕಾನೂನುಗಳಲ್ಲಿ ಇವೆ ಎಂಬುದು ರೈತರ ಆರೋಪ. ರೈತರು ಯಾರ ಅಡಿಯಾಳಾಗಿರಲು ಇಷ್ಟಪಡುವುದಿಲ್ಲ. ಕಾರ್ಪೊರೇಟ್ ಶಕ್ತಿಗಳು ತಮ್ಮನ್ನು ನಿಯಂತ್ರಿಸುವುದು ಅವರಿಗೆ ಬೇಕಾಗಿಲ್ಲ.

ದೆಹಲಿ ಹೊರವಲಯ, ಗಡಿಗಳಲ್ಲಿ ಲಕ್ಷಾಂತರ ರೈತರು ಚಳಿಗೆ, ಕೋವಿಡ್ ಗೆ ಬೆದರದೇ ಬೀಡುಬಿಟ್ಟಿದ್ದಾರೆ. ಅವರ ಮೇಲೆ ಪೊಲೀಸರು ಜಲಫಿರಂಗಿಗಳನ್ನು ಬಳಸಿದ್ದಾರೆ. ಪೊಲೀಸರ ದೌರ್ಜನ್ಯಗಳನ್ನು ಸಹಿಸಿಯೂ ರೈತರು ಅಲ್ಲಿಂದ ಕದಲುತ್ತಿಲ್ಲ. ಒಕ್ಕೂಟ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಬಾರದು.

ರೈತನು ಉಳಿದರಷ್ಟೇ ದೇಶ ಉಳಿಯಲು ಸಾಧ್ಯ. ನೆರೆ, ಬರದಂಥ ಪ್ರಕೃತಿ ವಿಕೋಪಗಳಿಂದ ರೈತ ಕಂಗೆಟ್ಟಿದ್ದಾನೆ. ಹೀಗಿರುವಾಗ ರೈತರನ್ನು ಖಾಸಗಿ ಕಂಪೆನಿಗಳ ಜೀತಕ್ಕೆ ತಳ್ಳುವ ಕಾನೂನುಗಳ ಅವಶ್ಯಕತೆಯಾದರೂ ಏನಿತ್ತು? ಎರಡು ಮೂರು ಖಾಸಗಿ ಕಂಪೆನಿಗಳಿಗಾಗಿ ಕೋಟ್ಯಂತರ ರೈತರು ನರಳುವಂತಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಮುನ್ನ ಒಕ್ಕೂಟ ಸರ್ಕಾರ ಎಚ್ಚೆತ್ತುಕೊಂಡು ಅವರ ಬೇಡಿಕೆ ಈಡೇರಿಸಬೇಕು. ಇಂಥ ಚಳವಳಿಗಳು ಕಾಡ್ಗಿಚ್ಚಿನಂತೆ ಇಡೀ ದೇಶ ಆವರಿಸಿಕೊಂಡರೆ, ಸರ್ಕಾರ ಏನೂ ಮಾಡಲು ಆಗದು. ಈ ವಿವೇಕ ಆಳುವ ಜನತೆಗೆ ಬರಲಿ.

– ಟಿ.ಎ.ನಾರಾಯಣಗೌಡ

https://www.facebook.com/390996657615205/posts/3511807938867379/

Please follow and like us:
error