ಅನಿಷ್ಟ, ಅಮಾನವೀಯ ಪದ್ದತಿ ಕೊಪ್ಪಳದಲ್ಲಿ ಇನ್ನೂ ಜೀವಂತ !

ಹಕ್ಕಿ ಪಿಕ್ಕಿ ಜನಾಂಗದ ಜಾಗೃತಿಗೆ ಸಂಚಲನ ಸಮಿತಿ ಸಮೀಕ್ಷೆ
ಕೊಪ್ಪಳ, ಫೆ. 06: ಕೊಪ್ಪಳ ನಗರದ ಐತಿಹಾಸಿಕ ಗವಿಮಠಕ್ಕೆ ಹೊಂದಿಕೊಂಡಿರುವ ಇಪ್ಪತ್ತು ಮನೆಗಳಿರುವ ಒಂದು ಸಣ್ಣ ಗುಂಪು, ಹಕ್ಕಿ ಪಿಕ್ಕಿ ಸಮುದಾಯದ ಜನರಿರುವ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಭೇಟಿ ನೀಡಿ ಅಲ್ಲಿನ ಜನರ ಬದಲಾವಣೆಗೆ, ಜಾಗೃತಿಗೆ ಸಮೀಕ್ಷೆ ಕೈಗೊಂಡಿದ್ದು, ಸರಕಾರ ಮಟ್ಟದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ.
ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಮಂಜುನಾಥ ಗೊಂಡಬಾಳ ನೇತೃತ್ವದಲ್ಲಿ, ಸರೋಜಾ ಬಾಕಳೆ, ಶಿವಲೀಲಾ ಹಿರೇಮಠ, ಸಲೀಮಾ ಜಾನ್, ಮಲ್ಲಪ್ಪ ಇತರರು ಭೇಟಿ ನೀಡಿ ಅಲ್ಲಿನ ಸಾಂಪ್ರದಾಯಕ ಬದುಕು, ಸಾಮಾನ್ಯ ಜನಜೀವನದ ಅಸಹನೀಯ ಬದುಕು, ಶಾಲೆಯಲ್ಲಿ ಹೆಸರಿದ್ದರೂ ಶಾಲೆಗೆ ಹೋಗದ ಮಕ್ಕಳು, ಅನಾರೋಗ್ಯಕ್ಕೆ ಅವರು ತಾವೇ ಔಷಧಿಯನ್ನು ತಯಾರಿಸಿಕೊಳ್ಳುವದು ಹೀಗೆ ಅನೇಕ ವಿಷಯಗಳಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಜನ ಅದ್ಹೇಗೆ ಸಾಮಾನ್ಯ ಜನರ ಬದುಕನ್ನು ಮೀರಿ ಮೂಢನಂಬಿಕೆಯಲ್ಲಿ ಬದುಕುತ್ತಿದ್ದಾರೆ ಎಂಬುದು ಸೋಜಿಗವೆನಿಸುತ್ತದೆ ಎಂದು ತಿಳಿಸಿದ್ದಾರೆ.
ಹಕ್ಕಿಪಿಕ್ಕಿ ಏರಿಯಾ ಹೇಗಿದೆ? :
ಕೊಪ್ಪಳ ನಗರದಲ್ಲಿರುವ ವಿಚಿತ್ರ ಹಾಗೂ ಅವಮಾನೀಯ ಪ್ರದೇಶವನ್ನು ತಮಗೆ ಪರಿಚಯಿಸುತ್ತಿದ್ದೇವೆ.
ಇಲ್ಲಿ ಮಹಿಳೆಯರು ಮುಟ್ಟಾದರೆ ಅದು ಮೈಲಿಗೆಯ ಸಂಗತಿ. ಮಗು ಹೆರಲು ಕೂಡಾ ಆಕೆ ಮನೆಯಿಂದ ಪ್ರತ್ಯೇಕವಾಗಿ ಹೋಗಬೇಕು. ಮೂಲಸೌಕರ್ಯಗಳೂ ಇಲ್ಲದ ಗುಡಿಸಲಲ್ಲಿ ಇದ್ದುಕೊಂಡು ಮಗುವಿಗೆ ಜನ್ಮ ನೀಡಬೇಕು. ಈ ಮಕ್ಕಳು ಮಾತ್ರ ಶಾಲೆಗೆ ಹೋಗದೇ ಇದ್ದರೆ ಈ ಮೌಢ್ಯ ಹೀಗೆಯೇ ಮುಂದುವರೆಯುತ್ತದೆ ಎಂಬ ಕಾಳಜಿಯೊಂದಿಗೆ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಜಾಗೃತಿ ಮೂಡಿಸಿದೆ.
ಆಧುನಿಕ ಕಂಪ್ಯೂಟರ್ ಯುಗದಲ್ಲಿರುವ ನಮ್ಮಗಳ ನಡುವೆ ಈ ದುಃಸ್ಥಿತಿ ಕಂಡು ಬರುತ್ತಿರುವುದು ನಗರದ ಸಜ್ಜಿ ಹೊಲ ಎಂಬ ಪ್ರದೇಶದಲ್ಲಿ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಸತ್ತೂರಿನಿಂದ ಎರಡು ಕಿ.ಮೀ. ದೂರವಿರುವ ಜುಂಜಪ್ಪನ ಗೊಲ್ಲರ ಹಟ್ಟಿಯಲ್ಲಿ ಇಂತಹ ಅಮಾನವೀಯ ಪದ್ಧತಿ ಇರುವುದನ್ನು ಕೇಳಿದ್ದೆವು.
ಅಂತಹುದೇ, ಅಮಾನವೀಯ ಪದ್ಧತಿ ನಮ್ಮ ಕೊಪ್ಪಳ ನಗರದಲ್ಲಿಯೇ ಇದೆ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
ಇಂತಹ ಇನ್ನೂ ಹಲವಾರು ಅನಾರೋಗ್ಯಕರ ಮತ್ತು ಅಮಾನವೀಯ ಪದ್ಧತಿಗಳು ನಗರದಲ್ಲಿರುವ ಈ ಪುಟ್ಟ ಪುಟ್ಟ ಪ್ರದೇಶದಲ್ಲಿ ಹರಡಿಕೊಂಡಿವೆ ಎಂಬುವುದನ್ನು ಸಾಮಾಜಿಕ ಕಾರ್ಯಕರ್ತೆ ಸರೋಜ ಬಾಕಳೆಯವರ ಕಳಕಳಿಯಿಂದ ವ್ಯಕ್ತಪಡಿಸಿದ್ದಾರೆ. ಸದ್ಯ ಅಲ್ಲಿನ ಮಹಿಳೆಯರ ಮನ ಪರಿವರ್ತನೆಗಾಗಿ ಸಾಮಾಜಿಕ ಕಾರ್ಯಕರ್ತೆಯರ ಪ್ರಯತ್ನವು ಶುರುವಾಗಿದೆ. ಈ ಜನರಿಗೆ ಮನೆ, ಶೌಚಾಲಯ, ವಿದ್ಯುತ್ ಸೌಲಭ್ಯ ಮತ್ತು ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳು ನೇರವಾಗಿ ದೊರಕುವಂತಾಗಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.
ಆದರೆ, ಇಲ್ಲೆಯೇ ಅವರೊಂದಿಗೆ ವಾಸಿಸುವ ಜೊತೆಗೆ ಅವರಿಂದ ಮತ ಪಡೆದು, ವಿರಾಜಮಾನರಾಗಿ ಜೀವನ ಕಳೆಯುವ ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದ್ದು ಅತ್ಯವಶ್ಯಕವಾಗಿದೆ.
ಲಿಂಗ ಸಮಾನತೆ ಜೊತೆಗೆ ಮನುಷ್ಯನೊಬ್ಬನಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಕೊಪ್ಪಳ ನಗರದ ಈ ಹಿಂದುಳಿದ ಪ್ರದೇಶಕ್ಕೆ ಸಲ್ಲುವಂತೆ ನೋಡಿಕೊಳ್ಳಬೇಕಾದ ಮತ್ತು ಈ ಅಮಾನವೀಯ ಪದ್ಧತಿಯನ್ನು ಇಲ್ಲಿಗೇ ನಿಲ್ಲಿಸುವ ಪ್ರಾಮಾಣಿಕ ಕೆಲಸಕ್ಕೆ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಜಿಲ್ಲಾಡಳಿತದ ಮುಂದಿದೆ. ಈ ಅವಶ್ಯಕತೆಗಳನ್ನು ಪೂರೈಸಿದಾಗ ಮಾತ್ರ ಮನುಷ್ಯರಾಗಿ ಬಾಳುತ್ತಿರುವ ನಮ್ಮಗಳ ಜೀವನ ಸಾರ್ಥಕವಾಗುತ್ತದೆ ಎಂದು ಜ್ಯೋತಿ ಗೊಂಡಬಾಳ ತಿಳಿಸಿದ್ದಾರೆ.

Please follow and like us:
error