68 ವರ್ಷಗಳ ಬಳಿಕ ಬೃಹತ್, ಪ್ರಕಾಶಮಾನ ಚಂದ್ರ

full-moon_super_moonಪ್ಯಾರಿಸ್, ನ. 10: ಬರುವ ಸೋಮವಾರ ರಾತ್ರಿಯ ಆಕಾಶದಲ್ಲಿ ಸಾಮಾನ್ಯಕ್ಕಿಂತ ದೊಡ್ಡ ಹಾಗೂ ಪ್ರಕಾಶಮಾನ ಚಂದ್ರ ರಾರಾಜಿಸಲಿದೆ. ಈ ‘ಸೂಪರ್‌ಮೂನ್’ 68 ವರ್ಷಗಳಲ್ಲೇ ಮೊದಲ ಬಾರಿಗೆ ಭೂಮಿಯ ಅತ್ಯಂತ ಸಮೀಪದಲ್ಲಿ ಕಾಣಿಸಿಕೊಳ್ಳಲಿದೆ.
ಆಕಾಶ ಶುಭ್ರವಾಗಿದ್ದರೆ, ಈ ಆಕಾಶದ ವಿದ್ಯಮಾನವು ಏಶ್ಯಾದಲ್ಲಿ ಕತ್ತಲು ಆವರಿಸುವಾಗ ಭಾರತೀಯ ಕಾಲಮಾನ ಸಂಜೆ 7:22ಕ್ಕೆ ಅತ್ಯಂತ ಸ್ಫುಟವಾಗಿ ಗೋಚರಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಆಕಾಶದಲ್ಲಿ ಮೋಡಗಳಿಲ್ಲದಿದ್ದರೆ ಹಾಗೂ ಪ್ರಖರ ಬೆಳಕು ಮಾಲಿನ್ಯ ಇಲ್ಲದಿದ್ದರೆ, ಸೂರ್ಯಾಸ್ತದ ಸ್ವಲ್ಪ ಹೊತ್ತಿನ ಬಳಿಕ ದಿಗಂತದಲ್ಲಿ ಚಂದ್ರನನ್ನು ನೋಡಲು ಜನರಿಗೆ ಸಾಧ್ಯವಾಗುತ್ತದೆ.

ಚಂದ್ರ ಭೂಮಿಯನ್ನು ಸುತ್ತುವ ಅಂಡಾಕಾರದ ಕಕ್ಷೆಯಲ್ಲಿ, ಪೂರ್ಣ ಚಂದ್ರನು ಭೂಮಿಯ ಅತ್ಯಂತ ಸಮೀಪಕ್ಕೆ ಬಂದಾಗ ‘ಸೂಪರ್‌ಮೂನ್’ ಸಂಭವಿಸುತ್ತದೆ.
‘‘ಚಂದ್ರನ ಕಕ್ಷೆ ಬದಲಾಗುತ್ತಾ ಇರುತ್ತದೆ. ಅಂದರೆ ಭೂಮಿಯಿಂದ ಚಂದ್ರನ ಅತ್ಯಂತ ಸಮೀಪದ ಅಂತರ (ಪೆರಿಜಿ)ವೂ ಬದಲಾಗುತ್ತಾ ಇರುತ್ತದೆ. 1948ರ ಬಳಿಕ ಈ ಬಾರಿ ಚಂದ್ರ ಭೂಮಿಯ ಅತ್ಯಂತ ಹತ್ತಿರಕ್ಕೆ ಬರಲಿದ್ದು, ಭೂಮಿ ಮತ್ತು ಚಂದ್ರನ ಅಂತರ 3,56,509 ಕಿ.ಮೀ. ಆಗಿರುತ್ತದೆ’’ ಎಂದು ‘ನಾಸಾ’ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಾಗಾಗಿ, ಸೋಮವಾರ ಚಂದ್ರ, ಭೂಮಿಯಿಂದ ಅತ್ಯಂತ ದೂರದ ಅಂತರದಿಂದ ಕಾಣುವುದಕ್ಕಿಂತ 14 ಶೇಕಡ ಹೆಚ್ಚು ದೊಡ್ಡದಾಗಿ ಹಾಗೂ 30 ಶೇಕಡ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುತ್ತಾನೆ.

Please follow and like us:
error