ಬ್ಯಾಂಕ್‌ ವ್ಯವಹಾರದ ವಿವರ ಸಲ್ಲಿಸುವಂತೆ ಬಿಜೆಪಿ ಸಂಸದರು, ಶಾಸಕರಿಗೆ ಮೋದಿ ಸೂಚನೆ

ನೋಟು ರದ್ದತಿಯ ಬಳಿಕದ ಬ್ಯಾಂಕ್‌ ವ್ಯವಹಾರದ ವಿವರ ಸಲ್ಲಿಸುವಂತೆ ಬಿಜೆಪಿ ಸಂಸದರು, ಶಾಸಕರಿಗೆ ಮೋದಿ ಸೂಚನೆ

ಹೊಸದಿಲ್ಲಿ, ನ.29: ಐನೂರು ಹಾಗೂ ಸಾವಿರ ರೂ. ನೋಟು ರದ್ದತಿಯ  ಬಳಿಕದ ಬ್ಯಾಂಕ್‌ ವ್ಯವಹಾರದ ವಿವರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌  ಶಾ ಅವರಿಗೆ  ಸಲ್ಲಿಸುವಂತೆ ಬಿಜೆಪಿ ಸಂಸದರು ಮತ್ತು ಶಾಸಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ  ಆದೇಶ ನೀಡಿದ್ದಾರೆ.
ನ.8ರಿಂದ ಡಿ.31ರ ತನಕದ ವಿವರವನ್ನು ಜನವರಿ 1ರಂದು ಸಲ್ಲಿಸುವಂತೆ ಪ್ರಧಾನಿ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ರದ್ದಾಗಿರುವ ನೋಟುಗಳನ್ನು ಬ್ಯಾಂಕ್‌ಗಳಿಗೆ ಠೇವಣಿ ಇಡಲು ಡಿಸೆಂಬರ್‌ 31 ಕೊನೆಯ ದಿನವಾಗಿದೆ. ಈ ಕಾರಣದಿಂದಾಗಿ  ಕಾಳ ಧನ ಹೊಂದಿರುವ ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಪ್ರಧಾನಿ ಮೋದಿ ಅವರ ಸೂಚನೆ ತಲೆನೋವು ತಂದಿದೆ.
ನ.8ರಿಂದ ನೋಟು ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸುವ ಮೊದಲೇ ಈ ವಿಚಾರ ಬಿಜೆಪಿ ನಾಯಕರಿಗೆ ಮತ್ತು ಅವರ ಸ್ನೇಹಿತರಿಗೆ ತಿಳಿದಿತ್ತು ಎಂಬ ಆರೋಪ ಕೇಳಿ ಬಂದಿದೆ.
ನೋಟು ನಿಷೇಧದ ಬಗ್ಗೆ ಪಾರ್ಲಿಮೆಂಟ್ ನ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲಾಗುತ್ತಿದೆ. ವಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೋಟು ರದ್ದತಿ ವಿರುದ್ಧ ಗದ್ದಲ ಮುಂದುವರಿಸಿದೆ. ಉಭಯ ಸದನಗಳಲ್ಲಿ ಕೋಲಾಹಲ ಇಂದು 9ನೆ ದಿನಕ್ಕೆ ಕಾಲಿರಿಸಿದೆ. modi_amit-bjp
ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)  ಸುದೀಪ್‌ ಬಂಡೋಪಾಧ್ಯಾಯ (ಟಿಎಂಸಿ), ಮುಲಾಯಂ ಸಿಂಗ್‌ ಯಾದವ್‌(ಸಮಾಜವಾದಿ) ಸೋಮವಾರ ನೋಟು ನಿಷೇಧದ ವಿಚಾರದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಅನುಮತಿಗೆ ಒತ್ತಾಯಿಸಿದ್ದರು.ಆದರೆ ಸ್ಪೀಕರ್‌ ಅನುಮತಿ ನಿರಾಕರಿಸಿದ್ದರು.
ಐನೂರು ಮತ್ತು ಒಂದು ಸಾವಿರ ರೂ. ನೋಟ್‌ ನಿಷೇಧದ ಬಗ್ಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧವಿದೆ ಎಂದು ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ತಿಳಿಸಿದ್ದರು.
ಲೋಕಸಭೆಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಸದನದಲ್ಲಿ ಹೇಳಿಕೆ ನೀಡುತ್ತಾರೆ ಎಂದು ರಾಜನಾಥ್‌  ಸಿಂಗ್‌ ಹೇಳಿದರು

Please follow and like us:
error