ಟೇಲರ್ ಅಂಗಡಿಯಿಂದ 30 ಲ.ರೂ ಮತ್ತು 2.5 ಕೆ.ಜಿ. ಚಿನ್ನ ವಶ

chandigarh-new-notes-gold-seizedಚಂಡಿಗಡ,ಡಿ.17: ಮೊಹಾಲಿ ಮತ್ತು ಚಂಡಿಗಡದ ಸೆಕ್ಟರ್ 22ರಲ್ಲಿರುವ ಮಹಾರಾಜಾ ಟೇಲರ್‌ಗೆ ಸೇರಿದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು 30 ಲ.ರೂ.ನಗದುಹಣ ಮತ್ತು 2.5 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಹಣದಲ್ಲಿ 18 ಲ.ರೂ.ಗಳು 2,000 ರೂ. ನೋಟುಗಳಲ್ಲಿದ್ದು,ಉಳಿದದ್ದು 100 ಮತ್ತು 50 ರೂ.ನೋಟುಗಳಾಗಿವೆ ಎಂದು ಇಡಿ ಅಧಿಕಾರಿಯೋರ್ವರು ತಿಳಿಸಿದರು.

ಇಷ್ಟೊಂದು ಭಾರೀ ಪ್ರಮಾಣದಲ್ಲಿ 2,000 ರೂ.ಗಳು ದೊರಕಿದ್ದು ಹೇಗೆ ಮತ್ತು ಚಿನ್ನವನ್ನು ಯಾವ ಅಂಗಡಿಯಿಂದ ಖರೀದಿಸಲಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ. ಅಂಗಡಿಯಲ್ಲಿನ ಬಿಲ್ ಬುಕ್‌ಗಳನ್ನೂ ವಶಪಡಿಸಿಕೊಂಡಿರುವ ಅಧಿಕಾರಿಗಳು ಅವನ್ನು ಪರಿಶೀಲಿಸುತ್ತಿದ್ದಾರೆ.

ನೋಟು ರದ್ದತಿಯ ಬಳಿಕ ಅಂಗಡಿಯ ಮಾಲಿಕರು ಪ್ರತಿ 10 ಗ್ರಾಮ್‌ಗಳಿಗೆ 44,000 ರೂ.ದರದಲ್ಲಿ 2.5 ಕೆ.ಜಿ.ಚಿನ್ನವನ್ನು ಖರೀದಿಸಿದ್ದರೆನ್ನಲಾಗಿದೆ.

ತನ್ಮಧ್ಯೆ ಚಂಡಿಗಡ ಪೊಲೀಸರು ಬಟ್ಟೆ ವ್ಯಾಪಾರಿ ಇಂದರ್‌ಪಾಲ್ ಮಹಾಜನ ಎಂಬಾತನಿಗೆ ಕಮಿಷನ್ ಪಡೆದುಕೊಂಡು ಹೊಸ ನೋಟುಗಳನ್ನು ಒದಗಿಸಿದ್ದ ಅರೋಪದಲ್ಲಿ ಮೊಹಾಲಿಯ ಖಾಸಗಿ ಬ್ಯಾಂಕೊಂದರ ಹಿರಿಯ ಅಧಿಕಾರಿಯನ್ನು ಬಂಧಿಸಿದ್ದಾರೆ.

ಡಿ.14ರಂದು ಮಹಾಜನ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು 17.74 ಲ.ರೂ.ಗಳ ಹೊಸ 2,000 ರೂ.ನೋಟುಗಳು ಮತ್ತು 12,500 ರೂ.ಗಳ ಹೊಸ 5,00 ರೂ.ನೋಟುಗಳು ಸೇರಿದಂತೆ 2.19 ಕೋ.ರೂ.ಗಳನ್ನು ವಶಪಡಿಸಿ ಕೊಂಡಿದ್ದರು.

Related posts

Leave a Comment