ಜಾತಿ ಭೇದಗಳನ್ನು ತೊಡೆದುಹಾಕಲು ದಾಸ ಸಾಹಿತ್ಯ ಕೊಡುಗೆ ಮಹತ್ವದ್ದು- ಬಸವರಾಜ ರಾಯರಡ್ಡಿ

 ಸಮಾಜದಲ್ಲಿ ಮನೆ ಮಾಡಿರುವ ಅಸಮಾನತೆ, ಮೂಢನಂಬಿಕೆ, ಜಾತಿ, ಲಿಂಗ ಭೇದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕನಕದಾಸರು ಮನುಕುಲಕ್ಕೆ ದಾಸ ಸಾಹಿತ್ಯದ ಮಹತ್ವದ ಕಾಣಿಕೆ ನೀಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು


ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಭಕ್ತ ಕನಕದಾಸರ ಜಯಂತಿ ಆಚರಣೆ ಸಮಾಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕನಕದಾಸರು ಈ ನಾಡು ಕಂಡ ಶ್ರೇಷ್ಠ ಕವಿಗಳು.  ಅವರ ವಿಚಾರಗಳು ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತವೆ.  ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ದಾಸ ಸಾಹಿತ್ಯ, ಭಕ್ತಿ ಪಂಥದ ಮೂಲಕ ಮನುಕುಲಕ್ಕೆ ಅತ್ಯುತ್ತಮ ಸಂದೇಶವನ್ನು ಕನಕದಾಸರು ಕೊಟ್ಟಿದ್ದಾರೆ.  ಮಾನವನ ಒಳಿತಿಗಾಗಿ ಅವರ ಕೊಡುಗೆಯನ್ನು ನಾವು ಸ್ಮರಿಸಲೇಬೇಕು.  ಕೆಲ ಪಟ್ಟಭದ್ರ ಹಿತಾಸಕ್ತಿಗಳು ಧರ್ಮವನ್ನು ಹಿಡಿದುಕೊಂಡು ಮೆರೆದ ಪರಿಣಾಮವಾಗಿ, ಸಮಾಜದಲ್ಲಿ ಜಾತಿ ಭೇದ, ಲಿಂಗ ಭೇದಕ್ಕೆ ದಾರಿಯಾಯಿತಲ್ಲದೆ, ಪುರುಷ ಪ್ರಧಾನ ಸಮಾಜ ಸೃಷ್ಟಿಯಾಯಿತು.  ಶರಣರು, ಸಂತರು, ದಾಸ ಶ್ರೇಷ್ಠರುಗಳು ಎಲ್ಲ ಭೇದಗಳನ್ನು ಮೆಟ್ಟಿ ನಿಂತವರು.  ಸಮಾಜದಲ್ಲಿ ಸಮಾನತೆಯ ಹೋರಾಟಕ್ಕಾಗಿ ದಾಸ ಸಾಹಿತ್ಯ ಹಲವು ವಿಚಾರಗಳನ್ನು ಮನುಕುಲಕ್ಕೆ ಕೊಟ್ಟಿದೆ.  ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿವೆ.  ಮನುಷ್ಯರಲ್ಲಿನ ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆಗೊಂಡು, ಸಮಾನತೆಯ ಬದುಕು ಸಮಾಜದಲ್ಲಿ ನೆಲಗೊಳ್ಳಬೇಕಿದೆ.  ಶರಣರನ್ನು, ಸಂತರನ್ನು, ಮಹನೀಯರನ್ನು ಪೂಜಿಸುತ್ತೇವೆ, ಅವರ ಭಾವಚಿತ್ರಗಳ ಮೆರವಣಿಗೆಯನ್ನೂ ವಿಜೃಂಭಣೆಯಿಂದ ಮಾಡುತ್ತೇವೆ.  ಆದರೆ ಅವರ ತತ್ವಗಳನ್ನು ಯಾರೂ ಪಾಲಿಸುವುದಿಲ್ಲ.  ನಿಜಕ್ಕೂ ಇದು ವಿಪರ್ಯಾಸದ ಸಂಗತಿಯಾಗಿದೆ.  ಹೀಗಾದಲ್ಲಿ ಜಯಂತಿಗಳ ಆಚರಣೆಯ ಉದ್ದೇಶ ಈಡೇರುವುದಿಲ್ಲ.   ಯಾವುದೇ ಮಹನೀಯರ ಜಯಂತಿ ಆಚರಣೆಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು.  ಎಲ್ಲ ಮಹನೀಯರು, ಸಂತರು, ಶರಣರು ಸಮಾಜದ ಒಳಿತಿಗಾಗಿಯೇ ತಮ್ಮ ಸಂದೇಶಗಳನ್ನು ನೀಡಿರುವುದರಿಂದ, ಇವರೆಲ್ಲರ ಜಯಂತಿಗಳಿಗೆ ಎಲ್ಲ ಧರ್ಮ, ಸಮಾಜದವರೂ ಪಾಲ್ಗೊಂಡಾಗ ಮಾತ್ರ ಮಹನೀಯರ ಜಯಂತಿಗಳ ಆಚರಣೆಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

ಭಕ್ತ ಕನಕದಾಸರ ಬದುಕು ಹಾಗೂ ತತ್ವಗಳ ಕುರಿತಂತೆ ಕೊಪ್ಪಳದ ಶಂಕ್ರಯ್ಯ ಅಬ್ಬಿಗೇರಿ ಮಠ ಅವರು ವಿಶೇಷ ಉಪನ್ಯಾಸ ನೀಡಿದರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಲಾದ ಸಂತ ಕವಿ ಕನಕದಾಸರು- ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಗಣ್ಯರಾದ ಹನುಮಂತಪ್ಪ ಅಂಗಡಿ, ಕರಿಯಣ್ಣ ಸಂಗಟಿ, ಅಮ್ಜದ್ ಪಟೇಲ್, ನಾಗರಾಜ ಜುಮ್ಮನ್ನವರ್ ಮುಂತಾದವರು ಪಾಲ್ಗೊಂಡಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು. ಸಿ.ವಿ. ಜಡಿಯವರ್ ನಿರೂಪಿಸಿ, ವಂದಿಸಿದರು.
ಸಮಾರಂಭಕ್ಕೂ ಪೂರ್ವದಲ್ಲಿ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ನಗರದ ಸಿರಸಪ್ಪಯ್ಯನ ಮಠ ಆವರಣದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು.  ಮೆರವಣಿಗೆಯಲ್ಲಿ ಹಲವು ಸಾಂಸ್ಕøತಿಕ ಕಲಾತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕವನ್ನಾಗಿಸಿದವು.  ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.  ಮೆರವಣಿಗೆಯು ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.
Please follow and like us:
error