ಗರ್ಭಿಣಿ ಪತ್ನಿಯನ್ನು ಮಹಡಿಯಿಂದ ದೂಡಿ “ದೆವ್ವ”ದ ಮೇಲೆ ಆರೋಪ ಹೊರಿಸಿದ ಪತಿ!

pregnant-women: ಗರ್ಭಿಣಿ ಮಹಿಳೆಯೊಬ್ಬರನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ಪತಿಯೇ ದೂಡಿಹಾಕಿದ ಘಟನೆ ಘರಿ ಚೌಕಂಡಿ ಎಂಬಲ್ಲಿ ನಡೆದಿದೆ. ಘಟನೆಯಿಂದ ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮರ್ ಸಿಂಗ್ ಎಂಬಾತ ತನ್ನ ಪತ್ನಿ ಬಬಿತಾರನ್ನು ಮನೆಯ ಮಹಡಿಗೆ ಕರೆದೊಯ್ದು ದೂಡಿಹಾಕಿದ್ದಾನೆ. ನಂತರ ಆತನೇ ಬಬಿತಾರ ಪೋಷಕರಿಗೂ ವಿಷಯ ತಿಳಿಸಿದ್ದಾನೆ. 2016ರ ಫೆಬ್ರವರಿಯಲ್ಲಿ ವಿವಾಹವಾದ ಬಬಿತಾ ಹಾಗೂ ಅಮರ್ ಸಿಂಗ್ ಗೆ 8 ತಿಂಗಳ ಮಗುವೊಂದಿದೆ.

“4 ಗಂಟೆಯ ಸುಮಾರಿಗೆ ನನಗೆ ಕರೆ ಮಾಡಿದ್ದ ಅಮರ್ ಬಬಿತಾಳನ್ನು “ದೆವ್ವ” ಕಟ್ಟಡದಿಂದ ದೂಡಿ ಹಾಕಿದೆ ಎಂದು ತಿಳಿಸಿದ್ದ. ತಕ್ಷಣವೇ ಆಕೆಯನ್ನು ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. “ದೆವ್ವ” ದೂಡಿಹಾಕಿದೆ ಎಂಬ ಆತನ ಹೇಳಿಕೆಯ ಬಗ್ಗೆ ನಾವು ಪದೇ ಪದೇ ಪ್ರಶ್ನಿಸಿದಾಗ ಆತ ಬೇರೆಯದೇ ಕಥೆ ಹೇಳತೊಡಗಿದ” ಬಬಿತಾರ ಸಹೋದರ ಸತೀಂದರ್ ಹೇಳಿದ್ದಾರೆ.

ನಂತರ ಪೊಲೀಸ್ ಠಾಣೆಗೆ ತೆರಳಿದ ಸತೀಂದರ್ ಅಮರ್ ವಿರುದ್ಧ ದೂರು ನೀಡಿದ್ದಾರೆ. ಇಷ್ಟೇ ಅಲ್ಲದೆ ಅಮರ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಬಬಿತಾರ ಸಹೋದರ ನೀಡಿದ ದೂರಿನನ್ವಯ ಅಮರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಝಹೀರ್ ಖಾನ್ ತಿಳಿಸಿದ್ದಾರೆ.

Leave a Reply