ಜೈಪುರ, ಸೆ.1: ಈಗ ದುಡ್ಡಿದ್ದವರು ದುಬಾರಿ ಕಾರುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ, ರಾಜಸ್ಥಾನದ ಉದ್ಯಮಿಯೋರ್ವ 1.11 ಕೋಟಿ ರೂ. ನೀಡಿ ಕುದುರೆಯೊಂದನ್ನು ಖರೀದಿಸಿ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆೆ.
ಈ ಕುದುರೆ ರಸ್ತೆಗಳಲ್ಲಿ ಓಡಾಡುವ ಪ್ರತಿಷ್ಠಿತ ಆಟೋಮೊಬೈಲ್ ಕಂಪೆನಿಗಳಾದ ಬಿಎಂಡಬ್ಲು ಹಾಗೂ ಆಡಿ ಕಾರುಗಳಿಗಿಂತಲೂ ದುಬಾರಿ ಬೆಲೆಗೆ ಮಾರಾಟವಾಗಿದೆ.
ಪ್ರಭಾತ್ ಹೆಸರಿನ ಈ ಕುದುರೆ ಮಾರ್ವಾಡಿ ತಳಿಗೆ ಸೇರಿದೆ. ಮಾರ್ವಾಡಿ ತಳಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಸಂಶೋಧಿಸಲ್ಪಟ್ಟ ಕುದುರೆ ತಳಿಯಾಗಿದೆ. ಈ ಕುದುರೆಗಳು ಬುದ್ದಿವಂತಿಕೆ ಹಾಗೂ ತಾಕತ್ತಿಗೆ ಹೆಸರುವಾಸಿಯಾಗಿದೆ. ಮಹಾರಾಣಾ ಪ್ರತಾಪ್, ಚೇತಕ್ ಕುದುರೆಗಳೂ ಕೂಡ ಮಾರ್ವಾಡಿ ತಳಿಗೆ ಸೇರಿವೆ.
ರಾಜಸ್ಥಾನದ ಉದ್ಯಮಿ ನಾರಾಯಣ್ ಸಿನ್ಹಾ ಎಂಬಾತ ಮತ್ತೊಬ್ಬ ಕುದುರೆ ಪ್ರೇಮಿ ಭವರ್ಸಿನ್ಹಾ ರಾಥೋರ್ರಿಂದ ಪ್ರಭಾತ್ ಹೆಸರಿನ ಮಾರ್ವಾಡಿ ತಳಿಯ ಕುದುರೆಯನ್ನು ಖರೀದಿಸಿದ್ದಾನೆ. ನಾರಾಯಣ್ ಬಳಿ ಒಂದೇ ಜಾತಿಯ ಎರಡು ಹೆಣ್ಣು ಕುದುರೆಗಳಿವೆ. ನಾರಾಯಣ್ ಕುದುರೆಗಳಿಗಾಗಿ ಈಜುಕೊಳಗಳನ್ನು ನಿರ್ಮಿಸಿದ್ದಾರೆ. ಕುದುರೆಯನ್ನು ಸಾಕಲು ಮೂರು ಕೆಲಸಗಾರರು ಇದ್ದಾರೆ.
ಫ್ರಾನ್ಸ್ನ ಮಹಿಳೆಯೊಬ್ಬರಿಂದ ಪ್ರಭಾತ್ ಕುದುರೆಗೆ ತರಬೇತಿ ನೀಡಲು ಬಯಸಿರುವ ನಾರಾಯಣ್ ಮಾರ್ವಾಡಿ ತಳಿಯ ಕುದುರೆಯನ್ನು ಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ.