You are here
Home > ಕ್ರೀಡೆ > ಇಂದು ಭಾರತಕ್ಕೆ 900ನೆ ಏಕದಿನ ಪಂದ್ಯ

ಇಂದು ಭಾರತಕ್ಕೆ 900ನೆ ಏಕದಿನ ಪಂದ್ಯ

ಧರ್ಮಶಾಲಾ, ಅ.15: ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ ರವಿವಾರ ಇಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡುವ ಯೋಜನೆಯಲ್ಲಿದೆ.
ms-dhoni-kane-williamson-900-test-match
ಮೂರು ಟೆಸ್ಟ್ ಪಂದ್ಯಗಳಲ್ಲಿ 3-0 ಅಂತರದಲ್ಲಿ ಸರಣಿ ಜಯಿಸಿದ್ದ ಭಾರತ ಐದು ಪಂದ್ಯಗಳ ಸರಣಿಯಲ್ಲೂ ಅದೇ ಪ್ರದರ್ಶನ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಭಾರತ ಟೆಸ್ಟ್‌ನಲ್ಲಿ ನಂ.1 ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಆದರೆ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.3 ಸ್ಥಾನ ಪಡೆಯಲು 5 ಪಂದ್ಯಗಳ ಏಕದಿನ ಸರಣಿಯನ್ನು 4-1 ಅಂತರದಲ್ಲಿ ಗೆಲ್ಲಬೇಕಾಗಿದೆ. ಭಾರತ ಪ್ರಸ್ತುತ ನಂ.4 ಸ್ಥಾನದಲ್ಲಿದೆ. ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದವರು ವಿರಾಟ್ ಕೊಹ್ಲಿ. ಆದರೆ ಏಕದಿನ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ.
ನ್ಯೂಝಿಲೆಂಡ್ ಇಷ್ಟರ ತನಕ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿಲ್ಲ. ಹೀಗಿದ್ದರೂ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ನ್ಯೂಝಿಲೆಂಡ್ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರಯತ್ನ ನಡೆಸಲಿದೆ.
ಭಾರತದ ನೆಲದಲ್ಲಿ ನ್ಯೂಝಿಲೆಂಡ್ ವಿವಿಧ ತಂಡಗಳ ವಿರುದ್ಧ ಆಡಿರುವ 29ಪಂದ್ಯಗಳಲ್ಲಿ 18ರಲ್ಲಿ ಜಯ ಗಳಿಸಿದೆ. 11ರಲ್ಲಿ ಸೋಲು ಅನುಭವಿಸಿದೆ.
ನ್ಯೂಝಿಲೆಂಡ್ ಮತ್ತು ಭಾರತ ತಂಡ 1988, 1995, 1999 ಮತ್ತು 2010ರಲ್ಲಿ ಭಾರತದಲ್ಲಿ ಸರಣಿ ಆಡಿತ್ತು. ಆದರೆ ನ್ಯೂಝಿಲೆಂಡ್ ಎಲ್ಲ ಸರಣಿಗಳನ್ನು ಕಳೆದುಕೊಂಡಿದೆ. 2010ರ ಸರಣಿಯಲ್ಲಿ ಖಾಯಂ ಆಟಗಾರರು ತಂಡದಲ್ಲಿಲ್ಲದಿದ್ದರೂ, ಗೌತಮ್ ಗಂಭೀರ್ ನಾಯಕತ್ವದ ಟೀಮ್ ಇಂಡಿಯಾ 5-0 ಅಂತದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿತ್ತು.
ಭಾರತ ಮತ್ತು ನ್ಯೂಝಿಲೆಂಡ್ ಈ ತನಕ 93 ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತ 46ರಲ್ಲಿ ಮತ್ತು ನ್ಯೂಝಿಲೆಂಡ್ 41ರಲ್ಲಿ ಜಯ ಗಳಿಸಿವೆ. ಐದು ಪಂದ್ಯಗಳು ರದ್ದಾಗಿವೆೆ. 1 ಪಂದ್ಯ ಟೈ ಆಗಿದೆ.
ಮೂವರು ಪ್ರಮುಖ ಆಟಗಾರರ ಅನುಪಸ್ಥಿತಿ: ಭಾರತ ಮೂವರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಮತ್ತು ಮುಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಅಪೂರ್ವ ಫಾರ್ಮ್‌ನಲ್ಲಿ ರುವ ಅಶ್ವಿನ್ ಕಳೆದ ಟೆಸ್ಟ್ ಸರಣಿಯಲ್ಲಿ 27 ವಿಕೆಟ್ ಉಡಾಯಿಸಿ ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 39 ಟೆಸ್ಟ್ ಪಂದ್ಯಗಳಲ್ಲಿ ಪಡೆದಿರುವ ವಿಕೆಟ್ 220.
ಮೂವರು ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಮೂವರು ಯುವ ಬೌಲರ್‌ಗಳಿಗೆ ತಂಡದಲ್ಲಿ ಅವಕಾಶ ಪಡೆಯಲು ಹಾದಿ ಸುಗಮವಾಗಿದೆ. ಆಫ್ ಸ್ಪಿನ್ನರ್ ಜಯಂತ್ ಯಾದವ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಧವಳ್ ಕುಲಕರ್ಣಿಗೆ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ದೊರೆಯಲಿದೆ.
ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸಾಗಿದ್ದಾರೆ. ಅವರು ಝಿಂಬಾಬ್ಬೆ ಮತ್ತು ಅಮೆರಿಕ ದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಿರಲಿಲ್ಲ.ಭುವನೇಶ್ವರ ಕುಮಾರ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇಶಾಂತ್ ಶರ್ಮ ತಂಡದ ಸೇವೆಗೆ ಲಭ್ಯರಿಲ್ಲ. ಅವರು ಚಿಕುನ್‌ಗುನ್ಯ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.
ಸ್ಟಾರ್ ಆಟಗಾರ ಹಾಗೂ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಿಮ ಟೆಸ್ಟ್‌ನಲ್ಲಿ 211 ರನ್ ಗಳಿಸಿದ್ದರು. ಇದೇ ಪ್ರದರ್ಶನವನ್ನು ಏಕದಿನ ಸರಣಿಯಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ನಾಯಕ ಧೋನಿ ದಕ್ಷಿಣ ಆಫ್ರಿಕ ವಿರುದ್ಧ ಔಟಾಗದೆ 92 ರನ್ ಗಳಿಸಿದ್ದರು. ಆ ಬಳಿಕ ಅವರಿಂದ ಅಂತಹ ಪ್ರದರ್ಶನ ಕಂಡು ಬಂದಿಲ್ಲ. ಸುರೇಶ್ ರೈನಾ ಅವರಿಗೆ ಜ್ವರ ಮತ್ತು ಆರಂಭಿಕ ದಾಂಡಿಗ ಶಿಖರ್ ಧವನ್‌ಗೆ ಕೈ ಬೆರಳಿಗೆ ಗಾಯವಾಗಿದೆ.ಈ ಕಾರಣದಿಂದಾಗಿ ಇವರು ಮೊದಲ ಪಂದ್ಯಕ್ಕಿಲ್ಲ.
ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಏಕದಿನ ಸರಣಿಯಲ್ಲಿ ತಿರುಗೇಟು ನೀಡುವ ಪ್ರಯತ್ನವನ್ನು ನಾಯಕ ಕೇನ್ ವಿಲಿಯಮ್ಸ್ ನೇತೃತ್ವದ ನ್ಯೂಝಿಲೆಂಡ್ ನಡೆಸಲಿದೆ.

ಟಿಮ್ ಸೌಥಿ ಮತ್ತು ಕೋರಿ ಆ್ಯಂಡರ್ಸನ್ ತಂಡಕ್ಕೆ ವಾಪಸಾಗಿದ್ದಾರೆ. ಸೌಥಿ ಏಕದಿನ ಕ್ರಿಕೆಟ್‌ನಲ್ಲಿ 135 ವಿಕೆಟ್ ಪಡೆದವರು. ಗಾಯದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.ಅವರು ಈ ವರ್ಷ ಒಂದು ಏಕದಿನ ಪಂದ್ಯವನ್ನು ಆಡಿಲ್ಲ.

ಭಾರತ ತಂಡ:ಎಂ.ಎಸ್.ಧೋನಿ(ನಾಯಕ/ವಿಕೆಟ್ ಕೀಪರ್), ಜಸ್‌ಪ್ರೀತ್ ಬುಮ್ರಾ, ಕೇದಾರ್ ಜಾಧವ್, ವಿರಾಟ್ ಕೊಹ್ಲಿ, ಧವಳ್ ಕುಲಕರ್ಣಿ, ಮನ್‌ದೀಪ್ ಸಿಂಗ್, ಅಮಿತ್ ಮಿಶ್ರಾ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ರೋಹಿತ್ ಶರ್ಮ, ಜಯಂತ್ ಯಾದವ್, ಉಮೇಶ್ ಯಾದವ್.
ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ಕೋರಿ ಆ್ಯಂಡರ್ಸನ್, ಟ್ರೆಂಟ್ ಬೌಲ್ಟ್, ಡಗ್ ಬ್ರಾಸ್‌ವೆಲ್, ಆ್ಯಂಟನಿ ಡೇವಿಚ್,ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಜೇಮ್ಸ್ ನಿಶಮ್, ಲೂಕ್ ರೊಂಚಿ(ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನೆರ್, ಐಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬಿ.ಜೆ. ವಾಟ್ಲಿಂಗ್.
ಹೈಲೈಟ್ಸ್
*ಭಾರತ (110 ಪಾಯಿಂಟ್) ಏಕದಿನ ರ್ಯಾಂಕಿಂಗ್‌ನಲ್ಲಿ ನಂ.4ನೆ ಸ್ಥಾನದಲ್ಲಿದ್ದು, 4-1 ಅಂತರದಲ್ಲಿ ಸರಣಿ ಜಯಿಸಿದರೆ ಮೂರನೆ ಸ್ಥಾನದಲ್ಲಿರುವ ನ್ಯೂಝಿಲೆಂಡ್(113 ಅಂಕ) ಹಿಂದಿಕ್ಕಲಿದೆ.
*2003ರಲ್ಲಿ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭಾರತವನ್ನು ಮಣಿಸಿತ್ತು.
*ಟಿಮ್ ಸೌಥಿ ಅಂತಿಮ ಹನ್ನೊಂದರ ತಂಡದಲ್ಲಿ ಅವಕಾಶ ಪಡೆದರೆ ಅವರಿಗೆ ಇದು 100ನೆ ಏಕದಿನ ಪಂದ್ಯವಾಗಲಿದೆ.
*ರೋಹಿತ್ ಶರ್ಮ ನ್ಯೂಝಿಲೆಂಡ್ ವಿರುದ್ಧ 33.71 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 10 ಪಂದ್ಯಗಳಲ್ಲಿ 50ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ.
*ನಾಯಕರಾಗಿ ಧೋನಿ ಭಾರತವನ್ನು 195ನೆ ಪಂದ್ಯದಲ್ಲಿ ಮುನ್ನಡೆಸಲಿದ್ದಾರೆ.
,,,,,,,,,,
 ಏಕದಿನ ಪಂದ್ಯಗಳಲ್ಲಿ ಭಾರತದ ಯಶಸ್ಸು
ಒಟ್ಟು ಪಂದ್ಯ 899, ಗೆಲುವು 454, ಸೋಲು 399, ಟೈ 7, ಫಲಿತಾಂಶ ರಹಿತ 39.
  *ಮೊದಲ ಪಂದ್ಯ: ಜುಲೈ 13, 1974: ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆಯಲ್ಲಿ-ಭಾರತಕ್ಕೆ 4 ವಿಕೆಟ್‌ಗಳ ಸೋಲು.
*ಗರಿಷ್ಠ ರನ್ ದಾಖಲಿಸಿದ ಆಟಗಾರರು:
ಸಚಿನ್ ತೆಂಡುಲ್ಕರ್ -18,426
ಸೌರವ್ ಗಂಗುಲಿ -11,363
ರಾಹುಲ್ ದ್ರಾವಿಡ್-10,768
ಅಝರುದ್ದೀನ್09,378
ಎಂಎಸ್ ಧೋನಿ08,918
*ಗರಿಷ್ಠ ವೈಯಕ್ತಿಕ ಸ್ಕೋರ್
ರೋಹಿತ್ ಶರ್ಮ -264
ವೀರೇಂದ್ರ ಸೆಹ್ವಾಗ್-219

 *ಗರಿಷ್ಠ ಶತಕ

ಸಚಿನ್ ತೆಂಡುಲ್ಕರ್ 463 ಪಂದ್ಯಗಳಲ್ಲಿ 49
ವಿರಾಟ್ ಕೊಹ್ಲಿ 162 ಪಂದ್ಯಗಳಲ್ಲಿ 25
,,,,,,,,,,,,,,,,

ಭಾರತ -ನ್ಯೂಝಿಲೆಂಡ್

ಆಡಿದ ಪಂದ್ಯಗಳು 93, ಗೆಲುವು : ಭಾರತ 46, ನ್ಯೂಝಿಲೆಂಡ್ 41, 5 ಪಂದ್ಯರದ್ದು, 1 ಪಂದ್ಯ ಟೈ

Leave a Reply

Top