​ನಮ್ಮ ಅಂಬಿಯ ಮೊದಲ ಪ್ರೇಮಪ್ರಸಂಗ….. ಮಲ್ಲಿಕಾರ್ಜುನ ಕೊತಬಾಳ

ನಮ್ಮಣ್ಣನ ಗಂಗಾ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದಿನಾಲೂ ನೀರು ಒಯ್ಯಲು ಬರುತ್ತಿದ್ದ ಯುವ ಮೇಷ್ಟ್ರು ಒಬ್ಬರು ವಾರದ ಹಿಂದೆ ಘಟಕಕ್ಕೆ ಹೊಂದಿಕೊಂಡೇ ಇರುವ ನಮ್ಮ ಮನೆ ಬಾಗಿಲಿಗೆ ಬಂದು
“ಚಿನ್ನದಂತ ಹುಡುಗಿಗೆ ಮುತ್ತಿನಂತ ಹುಡುಗ ಬೇಕು..

ನಮ್ಮ ಬೀಗರಾಗಲು.. ಒಪ್ಪಿಗೆಯೇ.. ಒಪ್ಪಿಗೆಯೇ..”

ಎನ್ನುತ್ತಾ ಒಳಗೆ ಬಂದರು.
ಅವರ ಮನೆಯ ರಾಣಿಗೆ ನಮ್ಮ ಅಂಬಿಯ ಜೊತೆ ಸಂಬಂಧದ ಪ್ರಸ್ತಾವ ಇಟ್ಟರು.

ನಾವು ಎಷ್ಟಾದರೂ ಗಂಡಿನ ಕಡೆಯವರಲ್ಲವೇ, ಸ್ವಲ್ಪ ಬಿಗುಮಾನದಿಂದಲೇ ನಾವು ಹುಡುಗಿಯನ್ನ ನೋಡಬೇಕು, ನಮ್ಮ ಹುಡುಗನ ಕುಲ ಲ್ಯಾಬ್ರಾಡರ್ ರಿಟ್ರೈವರ್. ಅವಳ ಕುಲಗೋತ್ರ ಯಾವುದು? ಆರೋಗ್ಯ ಹೇಗಿದೆ? ಎಲ್ಲ ಅಗತ್ಯ ಲಸಿಕೆಗಳನ್ನು ನಿಯಮಾನುಸಾರ ಹಾಕಿಸಿದ್ದೀರಾ? ಎಂದೆಲ್ಲ ಕೇಳಿದೆ. ಅವರು ಸ್ವಲ್ಪ ಸಂಕೋಚ ಮತ್ತು ಅಷ್ಟೇ ಸಮಾಧಾನದಿಂದ ಹೌದೆಂದೂ, ನಾನು ನಿಮ್ಮ ಅಂಬಿಯನ್ನು ಅದರ ಬಾಲ್ಯದಿಂದಲೂ ನೋಡಿದ್ದೇನೆ. ನೀರು ಒಯ್ಯಲು ಬಂದಾಗೊಮ್ಮೆ ಮಾತಾನಾಡಿಸುತ್ತಿದ್ದೆ. ಅಗಿನಿಂದಲೂ ನಮ್ಮ ರಾಣಿಗೆ ನಿಮ್ಮ ಅಂಬಿಯೇ ಸೂಕ್ತ ಜೋಡಿ ಎಂದು ಮನದಲ್ಲೇ ಅಂದುಕೊಂಡಿದ್ದೆ. ಮತ್ತು ನಮ್ಮ ರಾಣಿ ನಿಮ್ಮ ಅಂಬಿಗಿಂತ ಎರಡು ತಿಂಗಳು ಚಿಕ್ಕವಳೆಂದು ನೋಡಲು ಅಂಬಿಯ ಬಣ್ಣದವಳೇ ಎಂದು ಹೇಳಿದರು. ವರದಕ್ಷಿಣೆ ಎಷ್ಟು ಕೊಡಬೇಕು ಎಂದು ಕೇಳಿದರು.

ನಾವು, ಸರಿ ಹಾಗಿದ್ದರೆ ವರದಕ್ಷಿಣೆಯಾಗಿ ಏನೂ ಕೊಡುವುದು ಬೇಡ. ಮುಂದೆ ಅವಳಿಗೆ ಜನಿಸುವ ಮಕ್ಕಳಲ್ಲಿ ಒಂದು ಅಥವಾ ಎರಡನ್ನು ನಮಗೆ ಕೊಡಬೇಕು ಎನ್ನುವ ಒಪ್ಪಂದ ಮಾಡಿಕೊಂಡು, ಆಗಲಿ ಕರೆದುಕೊಂಡು ಬನ್ನಿ, ನಾಳೆಗೆ ಮುಹೂರ್ತ ಇಟ್ಟುಕೊಂಡುಬಿಡೋಣ ಎಂದೆ. 

ಮರುದಿನ ಹೇಳಿದಂತೆ ಅವರು ರಾಣಿಯನ್ನು ಕರೆ ತಂದರು. ಸ್ವಲ್ಪ ಕುಳ್ಳಿಯಾಗಿದ್ದರೂ ಅತ್ಯಂತ ಮುದ್ದಾಗಿದ್ದಳು. 

ನಮ್ಮ ಅಂಬಿಯ ಮೊದಲ ನೋಟ ಅವಳೆಡೆಗೆ ತಾಗಿದಾಗ ನೋಡಬೇಕಿತ್ತು ಅವಳ ವೈಯ್ಯಾರ! ಇವನೂ ತನ್ನ ಕಪ್ಪು ಮೂತಿಯಲ್ಲಿಯೂ ಗಲ್ಲ ಕೆಂಪಗೆ ಮಾಡಿಕೊಂಡು ಅವಳ ಬಳಿ ಮೆಲ್ಲ ಮೆಲ್ಲನೆ ಬಳಿಸಾರಿ ಉಸುರಿದ. ಅವಳು ನಾಚಿ ನೀರಾದಳು. ಇಬ್ಬರಿಗೂ ಇದು ಮೊದಲ ಪ್ರೇಮ. ಸಾಕಷ್ಟು ಸರಸ ಸಲ್ಲಾಪ ಆಟ ನಡೆದವು. ರಾಣಿಯ ಕರೆತಂದಿದ್ದ ಮೇಷ್ಟ್ರು ಅವರಿಬ್ಬರ ಮಿಲನಕ್ಕೆ ತವಕದಿಂದ ಕಾಯುತ್ತಿದ್ದರು. ನಾನು ಹೇಳಿದೆ, ನೋಡಿ ಇವರೇ, ಮೊದಲ ಬಾರಿಗೇ ಮಿಲನ ಆಗುವುದು ಕಷ್ಟಸಾಧ್ಯ. ಅವೂ ಜೀವಗಳಲ್ಲವೇ? ಅವಕ್ಕೂ ಭಾವನೆಗಳಿವೆ. ಇನ್ನೂ ಕನಿಷ್ಠ ನಾಲ್ಕಾರು ಬಾರಿ ಭೇಟಿಗೆ ನಿಯಮಿತವಾಗಿ ಕರೆತನ್ನಿ. ಈಗಷ್ಟೇ ಅವರಿಬ್ಬರೂ ಪರಿಚಯಿಸಿಕೊಂಡಿದ್ದಾರೆ. ಇನ್ನೊಂದರೆಡು ಭೇಟಿಯಲ್ಲಿ ಅವರ ಈಗಿನ ಸ್ನೇಹ ಪ್ರೇಮವಾಗಿ ಮಿಲನದೊಂದಿಗೆ ಒಂದಕ್ಕೊಂದು ಆಪ್ತವಾಗುತ್ತವೆ ಎಂದು ಸಮಾಧಾನಪಡಿಸಿ ಹೇಳಿದೆ. ಆಯ್ತು ಸರ್, ಎಂದ ಅವರು ರಾಣಿಯನ್ನು ಕರೆದೊಯ್ಯಲು ಮುಂದಾದಾಗ ಅವಳು ಹೋಗಲೊಲ್ಲೆ ಎನ್ನುವಳು, ಇವನೂ ಬಿಡಲೊಲ್ಲ. 

***

ಮೊನ್ನೆ ನಾಲ್ಕಾರು ಭೇಟಿಯ ನಂತರ (ನನ್ನ ಅನುಪಸ್ಥಿತಿಯಲ್ಲಿ) ಮಿಲನ ಫಲಪ್ರದವಾಗಿದೆ ಎಂದು ಮನೆಯಲ್ಲಿ ಹೇಳಿದರು. 

***

ಈಗ ಆ ಮೇಷ್ಟ್ರು ಮತ್ತೆ ನೀರು ಒಯ್ಯಲು ಬಂದಾಗೊಮ್ಮೆ ನಮ್ಮ ಅಂಬಿ ಗೇಟ್ ವರೆಗೆ ಬಂದು ಮೇಷ್ಟ್ರಿಗೆ ನನ್ನ ರಾಣಿಯನ್ನು ಕರೆತನ್ನಿ ಎಂದು ಬೊಬ್ಬೆ ಹಾಕುತ್ತಾನಂತೆ! 😂

Please follow and like us:
error