ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ ಪ್ರತಿಭಟನೆ

ಗೌರಿ ಲಂಕೇಶ ಮತ್ತು ಕಲಬುರ್ಗಿ ಹತ್ಯೆಗಳ ಹಿನ್ನೆಲೆಯಲ್ಲಿ ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ ಪ್ರತಿಭಟನೆ ಇಂದು ಸಂಜೆ ಗದಗದಲ್ಲಿ ನಡೆಯಿತು.

ವಿಚಾರವಾದಿ ಚಿಂತಕರಾದ ಡಾ.ಕಲಬುರ್ಗಿ, ದಾಬೋಲ್ಕರ, ಪನ್ಸಾರೆ ಹಾಗೂ ಖ್ಯಾತ ಪತ್ರಕರ್ತೆ, ಪ್ರಖರ ವಿಚಾರಧಾರೆಗಳ ಚಿಂತಕಿ, ಗೌರಿ ಲಂಕೇಶ್ ಅವರನ್ನು ಕೋಮುವಾದಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವುದನ್ನು ಖಂಡಿಸಿ ಹತ್ಯಾಕೋರರನ್ನು ಬಂಧಿಸಲು ಒತ್ತಾಯಿಸಿ ಹತ್ಯಾಕೋರರನ್ನು ಬಂಧಿಸುವ ತನಕ ಗದುಗಿನಲ್ಲಿ ಪ್ರತಿ ತಿಂಗಳ 15 ತಾರೀಖು ಮತ್ತು 30 ತಾರೀಖಗಳಂದು ನಿರಂತರ ಪ್ರತಿಭಟನೆ ಗದಗ ಜಿಲ್ಲೆಯ ಗೌರಿ ಲಂಕೇಶ್ ಕಲಬುರ್ಗಿ ದಾಭೋಲ್ಕರ್ ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗದುಗಿನಲ್ಲಿ ನಡೆಯುತ್ತಿದೆ.

ಈ ಬಾರಿ ಈ ಹತ್ಯೆಗಳನ್ನು ಖಂಡಿಸಿ ಲೇಖಕರು, ಪ್ರಜ್ಞಾವಂತ ಚಿಂತಕರು ಹೋರಾಟಗಾರರು ‘ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ’ ಎಂಬ’ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಸೇರಿದ ಲೇಖಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮ್ಮ ಪೆನ್ನು ಕೊಟ್ಟು ಪ್ರತಿಭಟನೆ ವ್ಯಕ್ತ ಮಾಡಿದರು.

ಖ್ಯಾತ ಕಥೆಗಾರ್ತಿ ಸುನಂದಾ ಕಡಮೆ, ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಜಿಲ್ಲಾ ಅಧ್ಯಕ್ಷರಾಗಿದ್ದ ಎ. ಬಿ. ಹಿರೇಮಠ, ಕವಿಗಳಾದ ಎಚ್ ಬಿ ಪೂಜಾರ, ಐ ಕೆ ಕಮ್ಮಾರ, ಪ್ರಕಾಶ ಕಡಮೆ ಮೊದಲಾದವರೆಲ್ಲ ಪಾಲ್ಗೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ನಮ್ಮ ಬದ್ಧತೆ ಪ್ರದರ್ಶಿಸಿದರು ಮತ್ತು ಪ್ರಜಾಪ್ರಭುತ್ವವನ್ನೇ ಹತ್ಯೆ ಮಾಡುವ ಈ ವಿದ್ವಂಸಕ ಕೃತ್ಯವನ್ನು ಖಂಡಿಸಿದರು.

ಸಂಜೆ 6 ರಿಂದ 7.30 ರವರೆಗೆ ಗಾಂಧಿ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹಂತಕರನ್ನು ಬಂಧಿಸಲು ಎರಡೂ ಸರ್ಕಾರಗಳ ಮೇಲೆ ಒತ್ತಡ ಹಾಕಲಾಯಿತು…

ಇವತ್ತಿನ ಪ್ರತಿಭಟನೆಯನ್ನು ಗದಗ ಜಿಲ್ಲೆಯ ವಕೀಲರ ಸಂಘ ಬೆಂಬಲಿಸಿತು. ಅಧ್ಯಕ್ಷ ಒಡಕಣ್ಣವರ, ಪ್ರಧಾನ ಕಾರ್ಯದರ್ಶಿ ಕೋಟೆಗೌಡರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘವೂ ಪ್ರತಿಭಟನೆಯನ್ನು ಬೆಂಬಲಿಸಿ ಭಾಗವಹಿಸಿತ್ತು. ಸಂಘದ ಶೇಖರ ಕವಳಿಕಾಯಿ ಮತ್ತು ವೀರಣ್ಣ ಬೇವಿನಮರದ ಮಾತನಾಡಿದರು. ದಲಿತ ಕಲಾ ಬಳಗದ ಸಂಗಾತಿಗಳು ಹೋರಾಟದುದ್ದಕ್ಕೂ ಕ್ರಾಂತಿಗೀತೆ ಹಾಡಿದರು.

ಶರೀಫ್ ಬಿಳೇಯಲಿ, ಡಾ. ರಾಮಚಂದ್ರ ಹಂಸನೂರ, ರಮೇಶ ಕೋಳುರು, ಮುತ್ತು ಬಿಳೇಯಲಿ ನೇತೃತ್ವ ವಹಿಸಿದ್ದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಬಿ. ಕೆ. ಪೂಜಾರ, ಶಾಂತಕುಮಾರ ಭಜಂತ್ರಿ, ಸಿಐಟಿಯು ನ ಮಹೇಶ್ ಹಿರೇಮಠ, ಗಂಟಿಚೋರ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Please follow and like us:
error