ಭಾರತದ ಪಕ್ಷಿ ಮನುಷ್ಯನ ಜನ್ಮದಿನ

ಪಕ್ಷಿತಜ್ಞ ಸಲೀಂ ಅಲಿsalim-ali salim-ali-bird-man

ವಿಶ್ವಪ್ರಸಿದ್ಧ ಪಕ್ಷಿತಜ್ಞ, ವಿಜ್ಞಾನಿ, ಪರಿಸರವಾದಿ, ಛಾಯಾಗ್ರಾಹಕ ಡಾ. ಸಲೀಂ ಅಲಿ ಅವರು ಜನಿಸಿದ ದಿನ ನವೆಂಬರ್ 12, 1896. ಸಲೀಂ ಮೊಯುಜುದ್ದೀನ್ ಅಬ್ದುಲ್ ಅಲಿ ಅವರು ‘ಭಾರತದ ಪಕ್ಷಿ ಮನುಷ್ಯ (ಬರ್ಡ್ ಮ್ಯಾನ್ ಆಫ್ ಇಂಡಿಯಾ) ‘ ಎಂದೇ ಚಿರಪರಿಚಿತರು. ಪಕ್ಷಿಗಳ ಬಗೆಗೆ ಅವರು ನಡೆಸಿದ ವೈಜ್ಞಾನಿಕ ಚಿಂತನೆಗಳು ವಿಶ್ವದೆಲ್ಲೆಡೆ ಗಮನ ಸೆಳೆದಿದ್ದು, ಪಕ್ಷಿಗಳ ಸಂಕುಲ ಮತ್ತು ನಿಸರ್ಗವನ್ನು ಅರ್ಥೈಸುವಲ್ಲಿ ಅವರ ಚಿಂತನೆ ಮತ್ತು ಬರಹಗಳು ಬಹಳ ಸಹಾಯಕಾರಿಯಾಗಿವೆ. ಅವರು ವಿಶ್ವವಿದ್ಯಾಲಯದ ಯಾವ ಪದವಿಯನ್ನೂ ತೆಗೆದುಕೊಳ್ಳಲಿಲ್ಲ, ಪ್ರಕ್ರತಿಯೇ ಅವರಿಗೆ ಪಾಠಶಾಲೆಯಾಯಿತು.

‘ಫಿನ್ ಬಯಾ’ ಎಂಬ ಪಕ್ಷಿಯ ಹೆಸರನ್ನು ಹೆಚ್ಚು ಮಂದಿ ಕೇಳಿರಲಿಲ್ಲ. ಏಕೆಂದರೆ ಇದು ಅತ್ಯಂತ ಅಪರೂಪದ ಪಕ್ಷಿ. ಸುಮಾರು ನೂರು ವರ್ಷಗಳಿಂದ ಪ್ರಾಣಿ ಶಾಸ್ತ್ರಜ್ಞರುಗಳು ಈ ಪಕ್ಷಿ ನಿರ್ವಂಶವಾಗಿ ಹೋಗಿದೆಯೆಂದೇ ಭಾವಿಸಿದ್ದರು. ಆದರೆ ಕುಮಾವೋ ಬೆಟ್ಟಗಳಲ್ಲಿ ಆ ಪಕ್ಷಿ ಅಸ್ತಿತ್ವದಲ್ಲಿದ್ದುದನ್ನು ಗುರುತಿಸಿದ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ಪಕ್ಷಿಪ್ರಿಯರನ್ನು ವಿಸ್ಮಯಗೊಳಿಸಿದರು.

ಸಲೀಂ ಅಲಿ ಅವರಿಗೆ ಬಾಲ್ಯದಿಂದಲೇ ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಪ್ರೀತಿಗಳು ಮೊಳೆತವು. ಅವರು ಹತ್ತು ವರ್ಷದವರಾಗಿದ್ದಾಗ ಗುಬ್ಬಚ್ಚಿಯೊಂದನ್ನು ಹಿಡಿದಿದ್ದರು. ಅದರ ಕೊರಳಲ್ಲಿ ಹಳದಿ ಬಣ್ಣದ ಗುರುತಿತ್ತು. ಬೇರೆ ಗುಬ್ಬಚ್ಚಿಗಳಿಗೆ ಇಲ್ಲದ್ದು ಇದಕ್ಕೇಕಿದೆ ಎಂದು ಅವರಿಗೆ ತೋಚಲಿಲ್ಲ. ಬೇಟೆಯ ನಿಪುಣನಾಗಿದ್ದ ತನ್ನ ಮಾಮನಿಗೆ ಕೇಳಿದರು. ಆತನಿಗೂ ಅದರ ಗುರುತು ಸಿಕ್ಕಲಿಲ್ಲ. ಆತ ಸಲೀಮನನ್ನು ಮುಂಬೈಯಲ್ಲಿದ್ದ ‘ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯ ಗೌರವ ಕಾರ್ಯದರ್ಶಿ ಡಬ್ಲ್ಯೂ.ಎಸ್. ಮಿಲ್ಲಾರ್ಡ್ ಅವರ ಕಚೇರಿಗೆ ಕರೆದುಕೊಂಡು ಹೋದರು. ಪಕ್ಷಿಗಳ ವಿಷಯ ತಿಳಿಯುವಲ್ಲಿ ಹುಡುಗನ ಉತ್ಸುಕತೆಯನ್ನು ಕಂಡ ಅವರು ತಮ್ಮ ಬಳಿ ಇದ್ದ ಅಂಥ ಗುಬ್ಬಚ್ಚಿಯ ಮಾದರಿಯೊಂದನ್ನು ಆತನಿಗೆ ತೋರಿಸಿದರು. ಅಲ್ಲದೆ ಆತನಿಗೆ ಪ್ರೋತ್ಸಾಹವನ್ನೂ ನೀಡಿದರು.

ಬರ್ಮಾದಲ್ಲಿ ಕೆಲಸದಲ್ಲಿದ್ದ ತನ್ನ ಸೋದರನಿಗೆ ಸಹಾಯವಾಗಲೆಂದು ಅಲ್ಲಿಗೆ ಹೋದ ಸಲೀಂ ಅಲಿ, ಸುತ್ತಾಡಿದ್ದೆಲ್ಲಾ ಅಲ್ಲಿನ ಕಾಡುಮೇಡುಗಳಲ್ಲಿ. ಅಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನ ಕೇಳುತ್ತಾ ಅವುಗಳ ಬಣ್ಣ, ಹಾರಾಟ ನೋಡುತ್ತಾ ಅವರಿಗೆ ಸಮಯ ಹೋಗಿದ್ದೇ ತಿಳಿಯುತ್ತಿರಲಿಲ್ಲವಂತೆ. ಬರ್ಮಾದಿಂದ ಹಿಂತಿರುಗಿದ ಬಳಿಕ ಸಲೀಂ ಅಲಿ ಪ್ರಾಣಿಶಾಸ್ತ್ರವನ್ನಭ್ಯಸಿಸಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಿ ಗೈಡ್ ಆಗಿ ಕೆಲಸಕ್ಕೆ ಸೇರಿದರು. ಹೆಚ್ಚಿನ ತರಬೇತಿ ಪಡೆಯಲು ಜರ್ಮನಿಗೆ ಹೋಗಿ ಬಂದರು. ಆದರೆ ಭಾರತಕ್ಕೆ ಮರಳಿದಾಗ ಅವರಿಗಿದ್ದ ಕೆಲಸ ಕೈ ಬಿಟ್ಟು ಹೋಗಿತ್ತು. ಅವರಿಗೆ ಹೆಂಡತಿಯ ಸಂಪಾದನೆಯೇ ಜೀವನಾಧಾರವಾಗಿತ್ತು.

ಮೊದಲಿನಿಂದಲೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದ ಅಲಿಯವರು ಗೀಜಗ ಹಕ್ಕಿಯ ಬಗ್ಗೆ ಅದ್ಯಯನ ನಡೆಸಿ ವಿಶ್ವದಾದ್ಯಂತ ಹೆಸರಾದರು. ಪಕ್ಷಿಗಳ ವಿಷಯವಾಗಿ ಅಧ್ಯಯನ ಮಾಡಲು ದೇಶಾದ್ಯಂತ ತಿರುಗಾಡಿದ ಸಲೀಂ ಅಲಿ ‘ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಎಂಬ ಉತ್ಕೃಷ್ಟವಾದ ಸಚಿತ್ರ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯ ಮೂಲಕ ಪಕ್ಷಿಗಳ ಜೀವನದ ಬಗೆಗಿನ ಅನೇಕ ರೋಚಕ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ.

1948ರಲ್ಲಿ ಅಲಿ ಅಂತರಾಷ್ತ್ರೀಯ ಮನ್ನಣೆ ಗಳಿಸಿದ ಮತ್ತೊಬ್ಬ ಪಕ್ಷಿ ವಿಜ್ನಾನಿ ಎಸ್. ದಿಲಾನಿ ರಿಪ್ಲೆಯವರೊಂದಿಗೆ ಜೊತೆಗೂಡಿ ಹತ್ತು ಸಂಪುಟಗಳಲ್ಲಿ ‘ಹ್ಯಾಂಡ್ ಬುಕ್ ಆಫ್ ದ ಬರ್ಡ್ಸ್ ಆಫ್ ಇಂಡಿಯಾ ಆಂಡ್ ಪಾಕಿಸ್ತಾನ’ ಎಂಬ ವಿಶಿಷ್ಟ ಗ್ರಂಥವನ್ನು ಹೊರತಂದರು. ಸಲೀಂ ಅಲಿ ತಮ್ಮ ಇಳಿವಯಸ್ಸಿನಲ್ಲೂ ಪಕ್ಷಿಗಳಿಗಾಗಿ ಹಂಬಲಿಸುತ್ತಿದ್ದ ಪರಿ ಎಂಥವರನ್ನು ಬೆರಗುಗೊಳಿಸುತ್ತಿತ್ತು

ಸಲೀಂ ಅಲಿ ಅವರ ಪಕ್ಷಿ ಕಾಳಜಿಗಳಿಂದಾಗಿ ಭರತ್ಪುರ ಪಕ್ಷಿಧಾಮ ನಿರ್ಮಾಣಗೊಂಡಿತು. ಸೈಲೆಂಟ್ ವ್ಯಾಲಿ ರಾಷ್ಟೀಯ ಉದ್ಯಾನವನವು ವಿನಾಶದ ಹಾದಿಯಿಂದ ಪುನರ್ಜನ್ಮ ಪಡೆಯಿತು.

ಅಲಿಯವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಸಂದವು. ಭಾರತ ಸರ್ಕಾರವು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಯೂ ನೇಮಿಸಿ ಗೌರವಿಸಿತ್ತು. ತಾವು ಪಕ್ಷಿಗಳ ಮಡಿಲಿನಲ್ಲಿ ಕಳೆದ ಜೀವನದ ಆತ್ಮಕಥೆಯನ್ನು ಅಲಿಯವರು ‘ಫಾಲ್ ಆಫ್ ಎ ಸ್ಪ್ಯಾರೋ’ ಎಂಬ ಕೃತಿಯಾಗಿ ಮೂಡಿಸಿದ್ದಾರೆ. ಸಲೀಂ ಅಲಿಯವರು 1987ರ ವರ್ಷದಲ್ಲಿ ಮುಂಬೈಯಲ್ಲಿ ನಿಧನರಾದಾಗ ಪಕ್ಷಿಲೋಕದ ಅದ್ಬುತ ಇಂಚರವೊಂದು ಅಸ್ತಮಿಸಿದಂತಾಯಿತು.

ಈ ಮಹಾನ್ ಪಕ್ಷಿಪ್ರಿಯ ವಿಜ್ಞಾನಿ ಪರಿಸರವಾದಿಗೆ ನಮ್ಮ ನಮನ.

Please follow and like us:
error