ತಲಾಖ್ ನಿಷೇಧ: ದೇವರು ಕೊಟ್ಟರೂ ಪೂಜಾರಿ ಕೊಡದ ವರ- ಹೆಚ್.ಎಸ್.ಅನುಪಮಾ

ಭಾರತದಲ್ಲಿ ಈಗ ಎರಡು ವಿಷಯ ಕುರಿತು ಹೆಚ್ಚು ಚರ್ಚೆಗಳಾಗುತ್ತಿವೆ: ಒಂದು ಆಹಾರ ಹಕ್ಕು; ಮತ್ತೊಂದು ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕುಗಳು. ಅದರಲ್ಲೂ ೧೬.೭ ಕೋಟಿ ಮುಸ್ಲಿಂ ಜನಸಂಖ್ಯೆಯೊಂದಿಗೆ ಪ್ರಪಂಚದ ಮೂರನೇ ಅತಿ ಹೆಚ್ಚು ಮುಸ್ಲಿಂ ಧರ್ಮಾನುಯಾಯಿಗಳಿರುವ ಭಾರತದಲ್ಲಿ (ಇಂಡೋನೇಷ್ಯಾ ೨೧ ಕೋಟಿ, ಪಾಕಿಸ್ತಾನ ೧೮ ಕೋಟಿ) ತ್ರಿವಳಿ ತಲಾಖ್ ಕುರಿತು ಹೆಚ್ಚೆಚ್ಚು ಚರ್ಚೆಗಳಾಗುತ್ತಿವೆ. ಸಾರಾ, ಬಾನು, ತೆಹಮಿನಾ ದುರಾನಿಯಂತಹ ಲೇಖಕರ ಬರಹಗಳಲ್ಲಿ, ತಮ್ಮ ಗೋಳು ಹೇಳುತ್ತಾ ಬುರ್ಖಾದೊಳಗೇ ಬಿಕ್ಕುತ್ತಿದ್ದ ಸೋದರಿಯರ ನೋವಿನಲ್ಲಿ ಅರಿವಿಗೆ ಬರುತ್ತಿದ್ದ ತಲಾಖ್ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಅದಕ್ಕೆ ಕಾರಣ ಅಧಿಕಾರದಲ್ಲಿರುವ ಬಲಪಂಥೀಯ ಸರ್ಕಾರ ಎಂದು ನೀವು ಮೊದಲ ಸಾಲು ಓದುವುದರಲ್ಲಿ ನಿರ್ಧರಿಸಿದರೆ ಅದು ಅರ್ಧಸತ್ಯ. ಯಾಕೆಂದರೆ ಆ ಹೆಣ್ಮಕ್ಕಳ ಒಳಸಂಕಟಗಳು ಪ್ರತಿಬಾರಿಯೂ ಸಮುದಾಯದ ಮಹಾಸಂಕಟದ ನೆಪದಲ್ಲಿ ಕೊಚ್ಚಿಹೋಗುತ್ತಿವೆ. ಕೆಲವರು ತಲಾಖ್ ಮುಸ್ಲಿಂ ಸಮುದಾಯದೊಳಗಿನ ಆಂತರಿಕ ಬಿಕ್ಕಟ್ಟು. ಅವರೇ ಅದನ್ನು ಸರಿಪಡಿಸಿಕೊಳ್ಳಲಿ ಎಂದರೆ; ಮತ್ತೆ ಕೆಲವರು ಧಾರ್ಮಿಕ ಸುಧಾರಣೆಯ ಪ್ರಯತ್ನಗಳು ಮುಸ್ಲಿಂ ವಿರೋಧಿ ಕೋಮುವಾದಿಗಳ ಕೈಯ ಹತ್ಯಾರವಾಗಬಹುದೇ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಉಳಿದ ಲೆಕ್ಕಾಚಾರಗಳ ಮಾತು ಏನಾದರೂ ಇರಲಿ, ಮಹಿಳೆಯರಾದರೂ ತ್ರಿವಳಿ ತಲಾಖ್ ಕುರಿತ ಚರ್ಚೆ ಈಗ ಶುರುವಾದದ್ದು ಏಕೆಂಬುದರ ಹಿನ್ನೆಲೆಯನ್ನು, ವಿಷಯದ ಒಳಹೊರಗನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

೨೦೧೫ರ ಅಕ್ಟೋಬರಿನಲ್ಲಿ ಹಿಂದೂ ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣದ ವಾದ ಆಲಿಸುವಾಗ ಸುಪ್ರೀಂ ಕೋರ್ಟು ಮುಸ್ಲಿಂ ಹೆಣ್ಮಕ್ಕಳೂ ತಾರತಮ್ಯ ಎದುರಿಸುತ್ತಾರೆ ಎಂಬ ವಾದ ಕೇಳಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಸೂಚಿಸಿತು. ಡಿಸೆಂಬರ್ ೨೦೧೫ರಲ್ಲಿ ಬಿಜೆಪಿಯ ವಕೀಲರೊಬ್ಬರು ತ್ರಿವಳಿ ತಲಾಖ್ ಮತ್ತದರಂತಹ ರೂಢಿಗಳಿಂದ ಮುಸ್ಲಿಂ ಮಹಿಳೆಯರ ಹಕ್ಕು ಉಲ್ಲಂಘನೆಯಾಗುತ್ತಿದ್ದು ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಸೂಕ್ತವೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಆಗ ನ್ಯಾಯಾಧೀಶರು, ಸಮಾನ ನಾಗರಿಕ ಸಂಹಿತೆ ಜಾರಿ ಕೋರ್ಟಿನ ಕೆಲಸವಲ್ಲ. ತ್ರಿವಳಿ ತಲಾಖ್‌ನಿಂದ ತನ್ನ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಚ್ಛೇದಿತೆಯೊಬ್ಬರು ಹೇಳಿದರೆ ಆಗ ಮೂಲಭೂತ ಹಕ್ಕು ವಂಚನೆ ಆಗುತ್ತಿದೆಯೆ ಎಂದು ನೋಡಬಹುದೆಂದರು. ಫೆಬ್ರವರಿ ೨೦೧೬ರಲ್ಲಿ ‘ಸಮಾನತೆಗಾಗಿ ಮುಸ್ಲಿಂ ಮಹಿಳೆಯರ ಹುಡುಕಾಟ’ ಹೆಸರಿನ ಪಿಐಎಲ್ ದಾಖಲಾಯಿತು. ಜಮಾಅತ್ ಉಲೇಮಾ ಇ ಹಿಂದ್ ತಾನೂ ಕೂಡಾ ಪಾರ್ಟಿಯಾಗುವೆನೆಂದು ಅರ್ಜಿ ಸಲ್ಲಿಸಿ, ಅಫಿಡವಿಟ್‌ನಲ್ಲಿ ‘ಮೂಲಭೂತ ಹಕ್ಕುಗಳ ನೆಪದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಪ್ರಶ್ನಿಸಲಾಗದು. ಅವು ಶಾಸನಸಭೆಯಲ್ಲಿ ರೂಪಿಸಲ್ಪಟ್ಟವಲ್ಲ, ಕುರಾನಿನಲ್ಲಿ ನಿರ್ದೇಶಿಸಲ್ಪಟ್ಟವು’ ಎಂದು ಅಭಿಪ್ರಾಯಪಟ್ಟಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ಇದೇ ವಾದ ಹಿಡಿದು ವಿಷಯ ಇನ್ನಷ್ಟು ಜಟಿಲವಾಯಿತು.

ಈ ಕೇಸಿನ ಜೊತೆ ಮತ್ತಷ್ಟು ಪ್ರಕರಣಗಳು ದಾಖಲಾಗುತ್ತ ಹೋದವು.

೨೦೧೬ ಫೆಬ್ರುವರಿಯಲ್ಲಿ ಉತ್ತರಾಖಂಡದ ಶಾಯರಾ ಬಾನು ತ್ರಿವಳಿ ತಲಾಖ್, ಹಲಾಲಾ, ಬಹುಪತ್ನಿತ್ವ ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಹೋದರು. ೧೩ ವರ್ಷಗಳ ಕೌಟುಂಬಿಕ ಹಿಂಸೆಯ ನಂತರ ಒಮ್ಮೆಲೆ ಮೂರು ಬಾರಿ ತಲಾಖ್ ಎಂದು ಸ್ಪೀಡ್‌ಪೋಸ್ಟಿನಲ್ಲಿ ಗಂಡನ ಪತ್ರ ಬಂದಾಗ ಮಕ್ಕಳೊಂದಿಗೆ ಅವರು ಅತಂತ್ರೆಯಾಗಿದ್ದರು. ಅವರನ್ನು ಬೆಂಬಲಿಸಿ ತ್ರಿವಳಿ ತಲಾಖ್ ನಿಷೇಧಗೊಳ್ಳಲೇಬೇಕೆಂದು ಪಟ್ಟುಹಿಡಿದ ಬೀಬಾಕ್ ಕಲೆಕ್ಟಿವ್ (ಮಹಿಳಾ ಸಂಘಟನೆಗಳ ಗುಂಪು) ಹಾಗೂ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ (ಬಿಎಂಎಂಎ) ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದವು. ಬಿಎಂಎಂಎ ತನ್ನನ್ನೂ ಒಂದು ಪಾರ್ಟಿಯನ್ನಾಗಿ ಮಾಡುವಂತೆ ಕೇಳಿತು. ಹಾಗೆಯೇ ೨೦೦೪ರಲ್ಲಿ ತಮಿಳು ನಾಡಿನ ಮೊದಲ ಮಹಿಳಾ ಅಡಿಷನಲ್ ಅಡ್ವೊಕೇಟ್ ಜನರಲ್ ಆಗಿದ್ದ ಚೆನ್ನೈನ ಮಾಜಿ ಎಂಎಲ್‌ಎ, ವಕೀಲೆ ಬದರ್ ಸಯೀದ್ ತಮ್ಮನ್ನೂ ಪ್ರಕರಣದ ಪಾರ್ಟಿಯನ್ನಾಗಿ ಮಾಡುವಂತೆ ಕೇಳಿದರು. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ, ಕೇಂದ್ರ ಸರ್ಕಾರವೂ ಪಾರ್ಟಿಗಳಾದವು.

೨೦೧೬ರ ಮಾರ್ಚಿಯಲ್ಲಿ ಕೇರಳದ ವಿ. ಪಿ. ಜುಹಾರಾ ಅವರ ಮಹಿಳಾ ಸಂಘಟನೆ ‘ನಿಸಾ’ ಇದೇ ವಿಷಯಕ್ಕೆ ಸುಪ್ರೀಂಕೋರ್ಟಿಗೆ ಹೋಯಿತು. ಮೇ ತಿಂಗಳಲ್ಲಿ ಜೈಪುರದ ಆಫ್ರೀನ್ ರೆಹಮಾನ್ (೨೮) ದುಬೈ ಗಂಡನಿಂದ ಸ್ಪೀಡ್ ಪೋಸ್ಟಿನಲ್ಲಿ ತಲಾಖ್ ಪಡೆದ ನಂತರ ಬಿಎಂಎಂಎ ಮೂಲಕ ಸುಪ್ರೀಂ ಕೋರ್ಟಿಗೆ ಹೋದರು. ಜೂನಿನಲ್ಲಿ ಆರೆಸ್ಸೆಸ್‌ನ ರಾಷ್ಟ್ರೀಯ ಮುಸ್ಲಿಂ ಮಹಿಳಾ ಸಂಘಟನ್‌ನ ಫರಾ ಫೈಜ್ (ಲಕ್ನೋ) ಮುಸ್ಲಿಂ ವೈಯಕ್ತಿಕ ಕಾನೂನನ್ನು ಕಾಯ್ದೆಯನ್ನಾಗಿ (ಕೋಡಿಫೈ) ಮಾಡಬೇಕೆಂದು ಅರ್ಜಿ ಸಲ್ಲಿಸಿದರು. ಆಗಸ್ಟಿನಲ್ಲಿ ಕಲಕತ್ತಾದ ಇಷ್ರತ್ ಜಹಾನ್ ತ್ರಿವಳಿ ತಲಾಖಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ವಿಚ್ಛೇದನದ ನಂತರ ಗಂಡನ ಮನೆಯಲ್ಲಿ ತನ್ನ ಹಕ್ಕುಗಳೇನು ಹಾಗೂ ಮಕ್ಕಳ ಕಸ್ಟಡಿಯ ಹಕ್ಕು ಏನಾಗುತ್ತದೆಂದು ತಿಳಿಯಬಯಸಿದರು. ಅವರು ದುಬೈ ಗಂಡನಿಂದ ಫೋನ್ ಮೂಲಕ ೧೫ ವರ್ಷದ ಮದುವೆಗೆ ವಿಚ್ಛೇದನೆ ಪಡೆದಿದ್ದರು.

ಇದರ ನಡುವೆ ಮುಸ್ಲಿಂ ಮಹಿಳೆಯರಿಂದ ತ್ರಿವಳಿ ತಲಾಖ್ ಪರ-ವಿರೋಧ ವಾದ ಹೇಳಿಕೆಗಳು ಬರುತ್ತಲೇ ಹೋದವು. ಕೆಲ ಮಹಿಳೆಯರು ನಿಷೇಧಕ್ಕೆ ಶತಾಯಗತಾಯ ಪಟ್ಟು ಹಿಡಿದಿದ್ದರೆ, ಮತ್ತೆ ಕೆಲವು ವೈಯಕ್ತಿಕ ಕಾನೂನು ಮಂಡಳಿಯ ಮಹಿಳೆಯರು ‘ನಿಷೇಧ ಅಗತ್ಯವಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು. ಅದಕ್ಕೆ ವ್ಯತಿರಿಕ್ತವಾಗಿ ಇಬ್ಬರು ಪುರುಷರು ಮಹಿಳೆಯರ ಬೆಂಬಲಕ್ಕೆ ನಿಂತರು. ಅವರಿಬ್ಬರೂ ಕಟ್ಟಾ ಮುಸ್ಲಿಂ ಧರ್ಮಾನುಯಾಯಿಗಳು. ಆಂಧ್ರ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬಿದ್ ರಸೂಲ್ ಖಾನ್ ಸೆಪ್ಟೆಂಬರ್ ೨೦೧೬ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆದು ತ್ರಿವಳಿ ತಲಾಖ್ ನಿಷೇಧಿಸಬೇಕೆಂದೂ, ಇಲ್ಲದಿದ್ದರೆ ಮುಸ್ಲಿಂ ವೈಯಕ್ತಿಕ ಕಾನೂನು ರದ್ದಾಗಿ ಸಮಾನ ನಾಗರಿಕ ಸಂಹಿತೆ ಜಾರಿಯಾದಲ್ಲಿ ಅದಕ್ಕೆ ಮಂಡಳಿಯೇ ಹೊಣೆಹೊರಬೇಕೆಂದೂ ಹೇಳಿದರು. ಮುಂಬಯಿಯ ಅಬ್ದುಲ್ ರಜಾಕ್ ಮಣಿಯಾರ್ ಎಂಬ ಸಾರ್ವಜನಿಕ ದೂರು ಕೇಂದ್ರವೊಂದರ ಮುಖ್ಯಸ್ಥರು ಮಸೀದಿಗಳ ಹೊರಗೆ ಪೋಸ್ಟರು ಅಂಟಿಸಿ, ‘ತ್ರಿವಳಿ ತಲಾಖ್ ನೀಡಿದವರು ಕೋರ್ಟುಕಟ್ಟೆ ಹತ್ತಲು, ಜೈಲಿಗೆ ಹೋಗಲು, ಪತ್ನಿಯರಿಗೆ ದೊಡ್ಡ ಮೊತ್ತದ ಪರಿಹಾರ ತೆರಲು ಸಿದ್ಧರಾಗಿ’ ಎಂದು ಎಚ್ಚರಿಸಿದರು.

ಈಗ ಈ ಎಲ್ಲ ಅರ್ಜಿಗಳೂ ಒಟ್ಟಿಗೇ ವಿಚಾರಣೆಗೆ ಬರಲಿವೆ. ಇದರ ನಡುವೆ ಕೇಂದ್ರಸರ್ಕಾರ ಒಂದು ಅಫಿಡವಿಟ್ ಸಲ್ಲಿಸಿ ತಲಾಖ್ ಇಸ್ಲಾಮಿನ ಮೂಲತತ್ವ ಅಲ್ಲದ್ದರಿಂದ, ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದರಿಂದ ಅದನ್ನು ನಿಷೇಧಿಸಬೇಕು ಎಂದಿದೆ. ಒಟ್ಟಾರೆ ಹೇಳುವುದಾದರೆ ಹೇಗೆ ಬಾಲ್ಯವಿವಾಹ, ವಧುದಹನ, ಸ್ತ್ರೀಭ್ರೂಣ ಹತ್ಯೆ, ಮರ್ಯಾದಾಹತ್ಯೆ, ವರದಕ್ಷಿಣೆಗಳು ಸಮಾಜದ ಕಪ್ಪುಚುಕ್ಕೆಗಳೋ ಹಾಗೆಯೇ ಮುಸ್ಲಿಂ ಅಕ್ಕತಂಗಿಯರ ಬಾಧಿಸುವ ತ್ರಿವಳಿ ತಲಾಖ್ ಪದ್ಧತಿಯೂ ಭಾರತೀಯ ಸಮಾಜದ ಕಪ್ಪುಚುಕ್ಕೆ. ಈ ಪದ್ಧತಿ ಭಾರತದಲ್ಲಷ್ಟೇ, ಅದೂ ಸುನ್ನಿ ಮುಸ್ಲಿಮರಲ್ಲಷ್ಟೇ ಉಳಿದುಬಂದಿದೆ. ಅದನ್ನು ನಿಷೇಧಿಸುವ ನ್ಯಾಯಯುತ ಮಹಿಳಾಪರ ಕಾನೂನು ಜಾರಿಗಾಗಿ ಧರ್ಮ ಮರೆತು ಪ್ರಯತ್ನಿಸುವುದು ಎಲ್ಲರ ಕರ್ತವ್ಯವಾಗಿದೆ.

ತಲಾಖ್-ಖುಲಾ: ವಾಸ್ತವವೇನು?  

ಇಸ್ಲಾಮಿನಲ್ಲಿ ಮದುವೆ ಎನ್ನುವುದು ಒಂದು ಲಿಖಿತ ಸಾಮಾಜಿಕ ಒಪ್ಪಂದ. ಅದನ್ನು ಕೊನೆಗೊಳಿಸುವ ವಿಚ್ಛೇದನಕ್ಕೆ ಆರಂಭದಿಂದಲೂ ಅವಕಾಶ ನೀಡಿರುವ ಇಸ್ಲಾಂ ಧರ್ಮವು ಹಲವು ಸ್ತರಗಳ ತಲಾಖ್ ಪದ್ಧತಿಯನ್ನು ಸೂಚಿಸಿದೆ. ಸೂಕ್ತ ಕಾರಣವಿದ್ದರೆ, ಗಂಡುಹೆಣ್ಣು ಒಟ್ಟು ಬದುಕಲಾಗದಿದ್ದರೆ ವಿಚ್ಛೇದನೆ ಪಡೆಯಲು ಹಾಗೂ ಮರುಮದುವೆಯಾಗಲು ಇಬ್ಬರಿಗೂ ಆ ಧರ್ಮವು ಅವಕಾಶವಿತ್ತಿದೆ.

ಒಟ್ಟಿಗಿರಲು ಅಸಾಧ್ಯವಾದಂತಹ ಬಲವಾದ ಕಾರಣಗಳು ದೊರೆತಾಗ ಗಂಡ ಹೆಂಡತಿಗೆ ತಲಾಖ್ ನೀಡಬಹುದು. ಮುಟ್ಟಿನ ಸ್ರಾವ ನಿಂತ ದಿನಗಳಲ್ಲಿ, ಗರ್ಭಿಣಿಯಲ್ಲದ ಹೆಂಡತಿಗೆ ಮೊದಲ ತಲಾಖ್ ಹೇಳಬೇಕು. ನಂತರ ಮೂರು ತಿಂಗಳು (ಇದ್ದತ್ ಅವಧಿ) ಕಾಯಬೇಕು. ಈ ಅವಧಿಯಲ್ಲಿ ಮನಃಪರಿವರ್ತನೆಯಾಗಿ ತಲಾಖ್ ಹಿಂತೆಗೆದುಕೊಂಡು ಮದುವೆ ಮುಂದುವರೆಸಬಹುದು. ವಿಚ್ಛೇದನವೇ ಸೂಕ್ತ ಅನಿಸಿದಲ್ಲಿ ಗಂಡ ಎರಡನೆಯ ಬಾರಿ ತಲಾಖ್ ಹೇಳಬೇಕು. ಆಗಲೂ ಕಾಯುವ ಮೂರು ತಿಂಗಳ ಅವಧಿ, ರಾಜಿ ಅವಕಾಶ ಇರುತ್ತದೆ. ಎರಡೂ ಕಡೆಯವರ ಪ್ರಯತ್ನದಿಂದ ಸಂಧಾನವಾದರೆ ತಲಾಖ್ ಬಿದ್ದುಹೋಗುತ್ತದೆ. ಅದಾವುದೂ ಸಂಭವಿಸದಿದ್ದಲ್ಲಿ ಮೂರನೆಯ ತಲಾಖ್ ಹೇಳಬೇಕು. ಅಲ್ಲಿಗೆ ಮದುವೆ ಒಪ್ಪಂದ ಮುಗಿಯುತ್ತದೆ. ‘ಮೆಹ್ರ್’ ಹಣವನ್ನು ಹೆಂಡತಿಗೆ ಕೊಟ್ಟರೆ ಮದುವೆ ಕೊನೆಗೊಂಡಂತೆ. ಕೆಲವೊಮ್ಮೆ ಬಲವಂತದ ‘ಮೆಹ್ರ್ ಮಾಫ್’ ನಡೆಯುವುದೂ ಇದೆ. ಮೂರು ಬಾರಿ ತಲಾಖ್ ಹೇಳಲು ವರ್ಷಗಟ್ಟಲೆ ತೆಗೆದುಕೊಳ್ಳಲೂಬಹುದು. ಈ ಅವಧಿಯೊಳಗೇ ದಂಪತಿಗಳ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಲ್ಲಿ ತಲಾಖ್ ಬಿದ್ದುಹೋಗುವುದು.

ಇನ್ನು ಮುಂದೆಂದಾದರೂ ಒಮ್ಮೆ ಅವರು ಮತ್ತೆ ಪರಸ್ಪರರನ್ನು ಮದುವೆಯಾಗಬಯಸುವುದಾದರೆ ಹೆಂಡತಿ ಬೇರೊಬ್ಬರನ್ನು ಮದುವೆಯಾಗಿ ಅವರೊಡನೆ ಒಂದು ರಾತ್ರಿಯನ್ನಾದರೂ ಕಳೆದು, ಆ ಇನ್ನೊಬ್ಬ ಗಂಡನಿಂದ ತಲಾಖ್ ಪಡೆದು ನಂತರ ಹಳೆಯ ಗಂಡನನ್ನು ಮರುಮದುವೆಯಾಗಬಹುದು. ತಲಾಖ್ ಪಡೆದ ಹೆಣ್ಮಕ್ಕಳು ಮರುಮದುವೆಯಾಗಲು ಅನುಸರಿಸಬೇಕಾದ ಈ ಪದ್ಧತಿಯನ್ನು ‘ಹಲಾಲಾ’ ಎನ್ನುತ್ತಾರೆ. ಹಳೆಯ ಗಂಡನನ್ನು ಮರುಮದುವೆಯಾಗುವ ಎಲಿಜಿಬಿಲಿಟಿ ಬರಲು ಇನ್ನೊಬ್ಬನ ಜೊತೆ ಮಲಗಬೇಕಾದ ಹಿಂಸೆಗೆ ಹೆಣ್ಣು ಒಳಗಾಗಬೇಕಾದ ಅನಿವಾರ್ಯತೆಯಿದೆ.

ಹೆಂಗಸರಿಗೂ ವಿಚ್ಛೇದನ ಪಡೆಯುವ ‘ಖುಲಾ’ ಅವಕಾಶ ಇದೆ. ಆದರೆ ಅವರು ಗಂಡಸಿನಂತೆ ನೇರವಾಗಿ ಬಿಡುಗಡೆ ಹೊಂದಲಾರರು. ಗಂಡನಿಗೆ ಮೆಹ್ರ್ ಹಣವನ್ನು ಎಲ್ಲಿಂದಲಾದರೂ ತಂದು ಕಟ್ಟಿ, ಅವನನ್ನು ಒಪ್ಪಿಸಿ ತಲಾಖ್ ‘ಹೇಳಿಸಿ’ಕೊಳ್ಳಬೇಕು. ಅಲ್ಲೂ ಹೆಣ್ಣಿಗಿರುವ ಅವಕಾಶ ಕಡಿಮೆಯೇ. ಎಂದೇ ತಲಾಖ್ ಪಡೆದಷ್ಟು ಸುಲಭದಲ್ಲಿ ಖುಲಾ ಪಡೆಯಲು ಸಾಧ್ಯವಾಗುವುದಿಲ್ಲ. ಕೋರ್ಟ್ ದಾಖಲೆಗಳು ಹೇಳುವಂತೆ ‘ಖುಲಾ’ ಎಂಬ ಅವಕಾಶವನ್ನು ಹೆಣ್ಮಕ್ಕಳು ಬಳಸಿಕೊಂಡದ್ದು ತೀರ ಅಪರೂಪ. ಬಳಕೆಯಾಗಿದ್ದರೂ ಅದೂ ಗಂಡ ಎರಡನೇ ಮದುವೆಯಾದನೆಂದು, ಆಗಲೇ ಮದುವೆಯಾಗಿದ್ದಾನೆನ್ನುವುದು ತಿಳಿದ ಬಳಿಕ ಮಾತ್ರ.

ಮೇಲ್ನೋಟಕ್ಕೆ ಮಹಿಳಾಸ್ನೇಹಿಯಂತೆ ಕಾಣುವ ಈ ನಿಯಮಗಳಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯಕ್ಕೆ ಎಷ್ಟು ಬೆಲೆ ಇದೆ ಎಂದು ಸುಲಭವಾಗಿ ಊಹಿಸಬಹುದು. ಗಂಡಸಿನ ದೈಹಿಕ ಅಪೇಕ್ಷೆ-ಸಾಮರ್ಥ್ಯಗಳಿಗೆ ಬಹುಪತ್ನಿತ್ವ ಮತ್ತು ತಲಾಖ್ ಅನಿವಾರ್ಯವಾಗಿವೆ; ಇಲ್ಲದಿದ್ದರೆ ಮುಸ್ಲಿಂ ಗಂಡಸರು ಭಾರತೀಯ ಗಂಡಸರಂತೆ ಹೆಂಡತಿಯರನ್ನು ಸೀಮೆಎಣ್ಣೆ ಸುರಿದು ಸುಟ್ಟಾರು ಅಥವಾ ಪಾಶ್ಚಾತ್ಯ ರೀತ್ಯಾ ಲಿವಿಂಗ್ ಇನ್ ಸಂಬಂಧ ಹೊಂದಿ ಜವಾಬ್ದಾರಿಯಿಂದ ತಪ್ಪಿಸಿಕೊಂಡಾರು ಎಂದು ಧರ್ಮಪಂಡಿತರು, ಅವರ ಕೈಗೊಂಬೆಗಳಾದ ಮುಸ್ಲಿಂ ಮಹಿಳೆಯರೇ ಅಭಿಪ್ರಾಯಪಡುತ್ತಿದ್ದಾರೆ! ಕುರಾನಿನ ಹೆಸರಿನಲ್ಲಿಯೇ ಪುರುಷ ಹಿತಾಸಕ್ತಿಗಳನ್ನು ಮಹಿಳೆಯರು ಕಾಪಾಡುತ್ತಿದ್ದಾರೆ!

ಅದು ಹಾಗೇ. ತಪ್ಪು ಪ್ರಶ್ನೆಗಳನ್ನು ಕೇಳಿಕೊಂಡವರು ತಪ್ಪು ಉತ್ತರಗಳನ್ನೇ ಪಡೆಯುತ್ತಿರುತ್ತಾರೆ.

ಈಗ ಚರ್ಚೆ ನಡೆಯುತ್ತಿರುವುದು ಒಂದೇ ಉಸಿರಿನಲ್ಲಿ ಮೂರು ಸಲ ತಲಾಖ್ ಹೇಳಿ ವಿಚ್ಛೇದನ ಕೊಡುವ ಬಗೆಗೆ. ಇದು ಪ್ರವಾದಿಗಳ ಕಾಲದಿಂದಲೂ ಸುನ್ನಿ ಮುಸ್ಲಿಮರ ನಾಲ್ಕೂ ಪಂಗಡಗಳು ಒಪ್ಪಿಕೊಂಡು ಬಂದ ಪ್ರಕ್ರಿಯೆ. ನಂತರ ಹನಬಲಿ ಪಂಗಡದ ಪಂಡಿತರಾದ ಇಬ್ನ್ ತೈಮಿಯಾ ಒಟ್ಟಿಗೆ ಮೂರು ತಲಾಖ್ ಹೇಳುವುದು ಒಮ್ಮೆ ಹೇಳುವುದಕ್ಕೆ ಸಮ ಎಂದು ೧೩ನೇ ಶತಮಾನದಲ್ಲೆ ಭಿನ್ನ ನಿಲುವು ತಳೆದರು. ಈಜಿಪ್ಟ್ ೧೯೨೯ರಲ್ಲಿ, ಸುಡಾನ್ ೧೯೩೫ರಲ್ಲಿ ತೈಮಿಯಾ ನಿಲುವು ಒಪ್ಪಿದವು. ಬಹುಪಾಲು ಮುಸ್ಲಿಂ ದೇಶಗಳು ತೈಮಿಯಾ ಅಭಿಪ್ರಾಯ ಅನುಸರಿಸಿದವು. ಎಷ್ಟೋ ದೇಶಗಳು ಧಾರ್ಮಿಕ ಕಾನೂನಿನ ಹೊರಗೆ ನ್ಯಾಯಾಲಯದ ವಿಚ್ಛೇದನವನ್ನೂ ಸ್ವೀಕಾರಾರ್ಹ ಎಂದವು.

೧೯೫೫ರಲ್ಲಿ ಪಾಕಿಸ್ತಾನದ ಪ್ರಧಾನಿ ಮುಹಮದ್ ಅಲಿ ಬೋಗ್ರಾ ಮೊದಲ ಹೆಂಡತಿಯಿಂದ ವಿಚ್ಛೇದನೆ ಪಡೆಯುವ ಮೊದಲೆ ತಮ್ಮ ಕಾರ್ಯದರ್ಶಿಯನ್ನು ಮದುವೆಯಾದರು. ‘ಆಲ್ ಪಾಕಿಸ್ತಾನ್ ವಿಮೆನ್ಸ್ ಅಸೋಸಿಯೇಷನ್’ ಪ್ರತಿಭಟನೆ ನಡೆಸಿದಾಗ ಮೂರುಸಲ ತಲಾಖ್ ಎಂದರು. ಮತ್ತಷ್ಟು ಪ್ರತಿಭಟನೆಗಳು ನಡೆದು, ಮದುವೆ ಮತ್ತು ಕೌಟುಂಬಿಕ ವಿಷಯ ಕುರಿತು ಪರಿಶೀಲಿಸಲು ಏಳು ಸದಸ್ಯರ ಸಮಿತಿಯೊಂದು ನೇಮಕವಾಗಿ ಹೊಸ ನಿಯಮಗಳು ಜಾರಿಯಾದವು. ವಿಚ್ಛೇದನೆಗೆ ನ್ಯಾಯಮಂಡಳಿಯ ಸಮ್ಮತಿ ಅವಶ್ಯವಾಯಿತು. ಅಲ್ಲಿ ಇವತ್ತಿಗೂ ಅದೇ ಕಾನೂನು ಜಾರಿಯಲ್ಲಿದೆ. ಬಾಂಗ್ಲಾದೇಶವೂ ಅದನ್ನೇ ಅನುಸರಿಸಿದೆ. ಪಾಕಿಸ್ತಾನ, ಟ್ಯುನಿಷಿಯ, ಮೊರಕ್ಕೊ, ಇರಾನ್, ಈಜಿಪ್ಟ್, ಬಾಂಗ್ಲಾದೇಶ, ಟರ್ಕಿ, ಸೈಪ್ರಸ್, ಜೋರ್ಡಾನ್, ಸಿರಿಯಾ, ಕತಾರ್‌ಗಳು ಸೇರಿದಂತೆ ವಿಶ್ವಾದ್ಯಂತ ೨೨ ಮುಸ್ಲಿಂ ದೇಶಗಳು ತ್ರಿವಳಿ ತಲಾಖ್ ನಿಷೇಧಿಸಿವೆ. ಶ್ರೀಲಂಕಾದಲ್ಲೂ ಮೂರು ಸಲ ಒಂದು ಪದ ಹೇಳಿ ಹೆಂಡತಿಯನ್ನು ಬಿಡುವಂತಿಲ್ಲ. ಶ್ರೀಲಂಕಾದ ‘ಮುಸ್ಲಿಂ ಮದುವೆ ಮತ್ತು ವಿಚ್ಛೇದನ ಕಾಯ್ದೆ – ೧೯೫೧’ ಅತ್ಯಂತ ವೈಜ್ಞಾನಿಕವಾದದ್ದೆಂದು ಇಸ್ಲಾಮಿ ಪಂಡಿತರೂ ಒಪ್ಪುತ್ತಾರೆ.

ಆದರೆ ೮ ಕೋಟಿ ಮುಸ್ಲಿಂ ಮಹಿಳೆಯರಿರುವ ಭಾರತವೆಂಬೋ ಪ್ರಜಾಪ್ರಭುತ್ವ ದೇಶವು ತನ್ನ ನೆರೆಯವರು ತಳೆದ ನ್ಯಾಯಪರ ನಿಲುವು ತಳೆಯಲು ಮೀನಮೇಷ ಎಣಿಸುತ್ತಿದೆ. ಅವಿಭಜಿತ ಭಾರತದಲ್ಲಿ ಹೇಗೋ ಹಾಗೆಯೇ ಅಜ್ಞಾನ, ಪಿತೃಪ್ರಾಧಾನ್ಯ, ಪುರೋಹಿತಶಾಹಿಯ ಹುನ್ನಾರಗಳಿಂದ ತ್ರಿವಳಿ ತಲಾಖ್ ಉಳಿದು ಬಂದಿದೆ. ಸ್ಪೀಡ್ ಪೋಸ್ಟ್, ಇ ಅಂಚೆ, ಫ್ಯಾಕ್ಸ್, ಎಸ್ಸೆಮ್ಮೆಸ್, ಫೋನಿನ ಮೂಲಕ ತಲಾಖ್ ಕೊಡುವುದು ಅಬಾಧಿತವಾಗಿ ಮುಂದುವರೆದಿದೆ. ಹೆಂಡತಿಯನ್ನು ಮಣಿಸಿಟ್ಟುಕೊಳ್ಳಲು ಇದೂ ಒಂದು ಅಸ್ತ್ರವಾಗಿದೆ. ಪ್ರತಿ ೧೧ರಲ್ಲಿ ಒಬ್ಬ ಮುಸ್ಲಿಂ ಮಹಿಳೆ ತಲಾಖ್ ಪಡೆದವಳು, ನ್ಯಾಯಯುತ ಜೀವನಾಂಶಕ್ಕಾಗಿ ಕಾಯುತ್ತಿರುವವಳು ಎಂಬ ಅಂಕಿಅಂಶ ನೋಡಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಮುಸ್ಲಿಂ ಮಹಿಳಾ ಸಂಘಟನೆಗಳು, ಚಿಂತಕರು, ನ್ಯಾಯಾಲಯಗಳು ಅದು ನ್ಯಾಯವಲ್ಲ ಎಂದು ಸಾರಿಸಾರಿ ಹೇಳಿದರೂ ಧಾರ್ಮಿಕ ವ್ಯಕ್ತಿ-ಸಂಘಸಂಸ್ಥೆಗಳು ತಮ್ಮ ಪ್ರಭಾವ, ಅಧಿಕಾರ ಬಳಸಿ ಅದು ನಿಷೇಧಗೊಳ್ಳದಂತೆ ತಡೆದಿದ್ದಾರೆ. ಮುಸ್ಲಿಂ ಪುರೋಹಿತರು ಜನರಿಗೆ ವ್ಯವಸ್ಥಿತವಾಗಿ ತಪ್ಪು ಮಾಹಿತಿ ನೀಡುತ್ತಲೇ ಬಂದಿದ್ದಾರೆ. ‘ಉಲೇಮಾಗಳಿಗೆ ಪೂರಕವಾಗಿ ಈಗ ಚಾಲ್ತಿಯಲ್ಲಿರುವುದು ಇಸ್ಲಾಮಿ ಕಾನೂನಲ್ಲ, ಆಂಗ್ಲೋ ಮೊಹಮದನ್ ಕಾನೂನು’ ಎಂದು ಎ. ಜಿ. ನೂರಾನಿಯಂತಹ ಹಿರಿಯ ವಕೀಲರೂ ಭಾವಿಸುತ್ತಾರೆ.

ಶಾಬಾನುವಿನಿಂದ ಶಾಯರ್ ಬಾನುವರೆಗೆ 

ಭಾರತದಲ್ಲಿ ತ್ರಿವಳಿ ತಲಾಖಿಗೆ ವಿರೋಧ ಈಗ ಬಂದಿರುವುದಲ್ಲ. ಮುಸ್ಲಿಂ ಮತ್ತು ಮುಸ್ಲಿಮೇತರ ಮಾನವಹಕ್ಕು ಸಂಘಟನೆಗಳು ಪದೇಪದೇ ತ್ರಿವಳಿ ತಲಾಖ್ ನಿಷೇಧಕ್ಕೆ ಒತ್ತಾಯಿಸುತ್ತಲೇ ಬಂದಿವೆ. ಈಗ ಚರ್ಚೆ ಮುನ್ನೆಲೆಗೆ ಬಂದಿರುವುದರ ಹಿಂದೆ ದೀರ್ಘ ಹೋರಾಟದ ಹೆಜ್ಜೆ ಗುರುತುಗಳಿವೆ.

೧೯೮೪ರಲ್ಲಿ ಮುಂಬಯಿಯ ಮಹಿಳಾ ಸಂಘಟನೆ ‘ಆವಾಜ್ ಇ ನಿಸ್ವಾನ್’ನ ಮುಂದಾಳು ಶೆಹನಾಜ್ ಶೇಖ್ ಮುಸ್ಲಿಂ ವೈಯಕ್ತಿಕ ಕಾನೂನು ತನ್ನ ಸಮಾನತೆಯ ಹಕ್ಕನ್ನು ಕಸಿದುಕೊಂಡಿದೆ ಎಂದು ಸುಪ್ರೀಂಕೋರ್ಟಿಗೆ ಹೋದರು. ೧೯೮೫ರಲ್ಲಿ ಶಾಬಾನು ಪ್ರಕರಣದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೆ. ೧೨೫ರ ಪ್ರಕಾರ ಮುಸ್ಲಿಂ ವಿಚ್ಛೇದಿತೆಗೂ ಆಜೀವಪರ್ಯಂತ ಜೀವನಾಂಶದ ಹಕ್ಕಿದೆ ಎಂದು ಕೋರ್ಟು ತೀರ್ಪಿತ್ತಿತು. ಆ ತೀರ್ಪಿನಲ್ಲಿ ಒಂದೆಡೆ ಪ್ರವಾದಿಯವರ ಉಲ್ಲೇಖ ಬಂದಿದ್ದೇ ನೆಪವಾಗಿ ದೇಶಾದ್ಯಂತ ಮುಸ್ಲಿಮರಿಂದ ಪ್ರತಿಭಟನೆ ನಡೆಯಿತು. ಅವರನ್ನು ಸಮಾಧಾನಿಸಲು ಕೌಟುಂಬಿಕ ದೌರ್ಜನ್ಯ ಕಾಯ್ದೆ ಮುಸ್ಲಿಂ ಮಹಿಳೆಯರಿಗೆ ಅನ್ವಯಿಸದಂತೆ ರಾಜೀವಗಾಂಧಿ ಸರಕಾರ ಬೇರೆಯೇ ಆದ ‘ಮುಸ್ಲಿಂ ಮಹಿಳೆ (ವಿಚ್ಛೇದಿತೆಯ ಹಕ್ಕು ಸಂರಕ್ಷಣಾ) ಕಾಯ್ದೆ ೧೯೮೬’ ನ್ನು ಜಾರಿಗೆ ತಂದಿತು. ಕಟ್ಟಾ ಮುಸ್ಲಿಮರನ್ನು ಓಲೈಸಿದ್ದಕ್ಕೆ ಹಿಂದೂ ಧರ್ಮದವರೆಲ್ಲಿ ಕ್ಯಾತೆ ತೆಗೆದಾರೋ ಎಂದು ೧೬ನೇ ಶತಮಾನದ ಬಾಬ್ರಿ ಮಸೀದಿಯ ಬಾಗಿಲು ತೆರೆದರು. ೧೯೯೨ರಲ್ಲಿ ಮಸೀದಿ ಧ್ವಂಸವಾಯಿತು. ಹಾಗೆ ಬಿದ್ದದ್ದು ಬರಿಯ ಮಣ್ಣುರಾಶಿಯಷ್ಟೆ ಆಗುಳಿಯಲಿಲ್ಲ, ಮುಸ್ಲಿಂ ಮಹಿಳೆಯರ ಪ್ರಯತ್ನಗಳನ್ನು ಹೂತುಹಾಕುವ ‘ಧಾರ್ಮಿಕ ಬಿಕ್ಕಟ್ಟು’ ಎಂಬ ಧೂಳು ರಾಶಿಯಾಯಿತು.

ಶೆಹನಾಜ್ ಶೇಖ್ ಪ್ರಕರಣ ಹಿಂತೆಗೆದುಕೊಂಡರು. ಕಾನೂನಾತ್ಮಕವಾಗಿ ಶಾಬಾನುವಿಗೆ ಜಯ ಸಿಕ್ಕಿದ್ದರೂ, ಬರಿಯ ೮೫ ರೂ, ೧೮೫ ರೂ ಜೀವನಾಂಶ ಪಡೆದಿದ್ದರೂ, ಸಮುದಾಯದ ಒತ್ತಾಯಕ್ಕೆ ಶಾಬಾನು ಗೆದ್ದು ಸೋಲಬೇಕಾಯಿತು.

ಆದರೂ ೧೯೯೩ರಲ್ಲಿ ಅಹ್ಲೆ ಹದೀಸ್ ಪಂಥವು ತ್ರಿವಳಿ ತಲಾಖ್ ಅಮಾನ್ಯ ಎಂಬ ಫತ್ವಾ ಹೊರಡಿಸಿತು. ಇಸ್ಲಾಮಿ ಪಂಡಿತರಾಗಿದ್ದ ರಫೀಕ್ ಝಕಾರಿಯಾ ಆ ಫತ್ವಾವನ್ನು ಕಾಯ್ದೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತೆ ಮುಸ್ಲಿಂ ಸಂಸದರನ್ನು ಒತ್ತಾಯಿಸಿದರು. ಆಲ್ ಇಂಡಿಯಾ ವಿಮೆನ್ಸ್ ಕಾನ್ಫರೆನ್ಸ್ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಪತ್ರ ಬರೆದು, ಅಹ್ಲೆ ಹದೀಸ್ ಫತ್ವಾ ಒಪ್ಪಿ ತ್ರಿವಳಿ ತಲಾಖ್ ನಿಷೇಧಿಸಬೇಕು; ಇಲ್ಲದಿದ್ದರೆ ಸರ್ಕಾರದ ಮಟ್ಟದಲ್ಲಿ ಕಾನೂನು ತರುವಂತೆ ಪ್ರಯತ್ನಿಸುವುದಾಗಿ ತಿಳಿಸಿತು. ಮುಸ್ಲಿಂ ಮಹಿಳಾ ಹೋರಾಟಗಾರ್ತಿ ಉಜ್ಮಾ ನಹೀದ್ (ಅವರು ನಂತರ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರಾಗಿದ್ದರು) ತ್ರಿವಳಿ ತಲಾಖ್ ನಿಷೇಧಿಸುವುದಷ್ಟೆ ಅಲ್ಲ, ಹಾಗೆ ಹೇಳಿದ ಗಂಡಸರನ್ನು ಶಿಕ್ಷಿಸಬೇಕು ಹಾಗೂ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೇಳಿದರು. ಆದರೆ ಮಂಡಳಿಯು ತನಗೆ ಫತ್ವಾ ಒಪ್ಪಿಗೆ ಇಲ್ಲ, ತ್ರಿವಳಿ ತಲಾಖ್ ನಿಷೇಧಿಸುವುದಿಲ್ಲ, ಹಾಗೆಂದು ಕಾನೂನು ತಂದರೂ ಅದನ್ನು ಮಾನ್ಯ ಮಾಡುವುದಿಲ್ಲ ಎಂದು ಹಠ ಹಿಡಿಯಿತು. ಜಮಾಅತೆ ಇ ಹಿಂದ್ ಕೂಡಾ ಅದೇ ನಿಲುವು ತಳೆಯಿತು. ಅವು ಯಾವುದೇ ಬದಲಾವಣೆಯನ್ನು ವಿರೋಧಿಸಿದವು.

ಇಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬಗೆಗೆ ಎರಡು ಮಾತು: ೧೯೭೩ರಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ರಚಿತವಾಯಿತು. ೧೯೩೭ಕ್ಕೂ ಮುನ್ನ ಕೆಲವು ಮುಸ್ಲಿಮರು ಸ್ವಧರ್ಮದ ವೈಯಕ್ತಿಕ ಕಾನೂನು ತಿಳುವಳಿಕೆ ಇಲ್ಲದ ಕಾರಣ ಹಿಂದೂ ಕಾನೂನು ಅನುಸರಿಸುತ್ತಿದ್ದರು. ಆಗ ‘ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಪ್ಲಿಕೇಷನ್ ಆಕ್ಟ್ ೧೯೩೭’ ಬಂತು. ಅದರಡಿಯಲ್ಲಿ ೧೯೭೩ರಲ್ಲಿ ಸರ್ಕಾರೇತರ ಸಂಸ್ಥೆಯಾಗಿ ಮಂಡಳಿ ರಚಿತವಾಯಿತು. ತಾನೇ ಭಾರತದ ಮುಸ್ಲಿಮರ ಪ್ರತಿನಿಧಿ ಎಂದು ಹೇಳುತ್ತದಾದರೂ ಷಿಯಾ ಮತ್ತು ಅಹ್ಮದಿಯಾ ಮುಸ್ಲಿಮರ ವೈಯಕ್ತಿಕ ಕಾನೂನುಗಳಿಗೆ ಅದರಲ್ಲಿ ಅವಕಾಶವಿಲ್ಲ. ಮುಸ್ಲಿಂ ಸಮಾಜದ ಎಲ್ಲ ವರ್ಗಗಳ ೪೧ ಉಲೇಮಾಗಳು ಅದರ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ. ೨೦೧ ಜನ ಜನರಲ್ ಬಾಡಿಯಲ್ಲಿದ್ದು ಅವರಲ್ಲಿ ೨೫ ಜನ ಮಹಿಳೆಯರು. ಮಂಡಳಿಯು ೨೦೦೩ರಲ್ಲಿ ಮಾದರಿ ನಿಖಾನಾಮ ಬಿಡುಗಡೆ ಮಾಡಿತು. ಆದರೆ ಅದು ಕುರಾನಿನ ಪ್ರಕಾರ ತಲಾಖ್ ಕೊಡಬೇಕೆಂದು ಹೇಳಿತೇ ವಿನಹ ತಪ್ಪಿದಲ್ಲಿ ನೀಡುವ ಶಿಕ್ಷೆ ಕುರಿತು ಮಾತನಾಡಲಿಲ್ಲ. ಹೊಸನಿಯಮಾವಳಿಗಳನ್ನು ಸಮುದಾಯದೊಳಗೆ ಪ್ರಚುರಪಡಿಸಲೂ ಇಲ್ಲ. ಆದರೆ ಮಾಜಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ತಾಹಿರ್ ಮಹಮೂದ್, ನ್ಯಾ. ಮಾರ್ಕಂಡೇಯ ಖಟ್ಜು ಮೊದಲಾದವರು ಮಂಡಳಿಯ ಪ್ರಾತಿನಿಧ್ಯದ ಅರ್ಹತೆ ಪ್ರಶ್ನಿಸುತ್ತ ಅದನ್ನು ನಿಷೇಧಿಸಬೇಕೆನ್ನುತ್ತಾರೆ.

೧೯೯೪ರಲ್ಲಿ ಮುಂಬಯಿಯ ಸಂಘಟನೆ ‘ಫಿಕ್ರ್’ ಒಂದು ಹೊಸ ನಿಖಾನಾಮ (ಮದುವೆಯ ನಿಯಮಗಳು) ಸಿದ್ಧಪಡಿಸಿತ್ತು. ನಿಖಾನಾಮಾ ನ್ಯಾಯಯುತವಾಗಿ ಬದಲಾದರಷ್ಟೇ ಮುಸ್ಲಿಂ ಮಹಿಳೆಯರ ಸಮಸ್ಯೆಗಳಾದ ತಲಾಖ್, ಜೀವನಾಂಶ, ಮಕ್ಕಳ ಕಸ್ಟಡಿ, ಬಹುಪತ್ನಿತ್ವ ಪರಿಹಾರ ಕಂಡಾವೆನ್ನುವುದು ಹಲವರ ಅಭಿಪ್ರಾಯವಾಗಿತ್ತು. ಅದೇವೇಳೆಗೆ ಹರ‍್ಯಾಣಾ ಹೈಕೋರ್ಟು ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ತೀರ್ಪು ನೀಡಿತು. ಸಾಮಾನ್ಯ ಮುಸ್ಲಿಂ ಮಹಿಳೆಯರು ‘ನಮಗೆ ಉಲೇಮಾಗಳಿಂದ ಅಲ್ಲ ನ್ಯಾಯಾಧೀಶರಿಂದ ನ್ಯಾಯ ದೊರೆಯುತ್ತದೆ’ ಎಂದು ತೀರ್ಪನ್ನು ಸ್ವಾಗತಿಸಿದರೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಉಲೇಮಾ ತಿರಸ್ಕರಿಸಿದವು. ತಲಾಖ್ ನೆಪದಲ್ಲಿ ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೀರಿ ಎಂದೇ ಹೇಳಿದರು.

ಅಸ್ಘರ್ ಅಲಿ ಎಂಜಿನಿಯರ್ ಈ ಎರಡೂ ಸಂಸ್ಥೆಗಳನ್ನು ಹಲವು ಬಾರಿ ಮಾತುಕತೆಗೆ ಕರೆದರೂ ಅವರು ಬರಲಿಲ್ಲ. ಅಷ್ಟೇ ಅಲ್ಲ, ಷರಿಯತ್‌ನಲ್ಲಿ ಯಾವ ಬದಲಾವಣೆಯನ್ನೂ ಸಹಿಸುವುದಿಲ್ಲ ಎಂಬ ಉತ್ತರ ಬಂತು.

ಹೀಗೆ ‘ಹೌದು’-‘ಅಲ್ಲ’; ‘ಬೇಕು’-‘ಬೇಡ’ಗಳ ಹಗ್ಗಜಗ್ಗಾಟದಲ್ಲಿ ಅಂದು ಶಾಬಾನು ಏಕಾಂಗಿಯಾಗಿದ್ದರು. ಇವತ್ತು ಹಾಗಲ್ಲ. ದೇಶದ ಎಲ್ಲ ಭಾಗದ ಮುಸ್ಲಿಂ ಹೆಣ್ಮಕ್ಕಳು ಮದುವೆ ಕಾನೂನನ್ನು ಕೋರ್ಟಿನಲ್ಲಿ ಪ್ರಶ್ನಿಸತೊಡಗಿದ್ದಾರೆ. ಹೆಚ್ಚುಕಡಿಮೆ ಯಾವ ಮಹಿಳೆಯೂ ತ್ರಿವಳಿ ತಲಾಖ್ ಹಾಗೂ ಬಹುಪತ್ನಿತ್ವವನ್ನು ಒಪ್ಪಲಾರರು. ಬಿಎಂಎಂಎ. ಈ ಸಂಘಟನೆಯು ೨೦೧೦ರಲ್ಲಿ ಮಾಡಿದ ಸರ್ವೇ ಪ್ರಕಾರ ೮೮% ಮುಸ್ಲಿಂ ಮಹಿಳೆಯರು ತಲಾಖಿಗೆ ವಿರುದ್ಧವಾಗಿದ್ದರು. ಇವತ್ತು ಹಿಂದೂತ್ವ ರಾಜಕಾರಣದಿಂದ ಸಮುದಾಯ ಒಳಸಂಕಟ-ಹೊರಸಂಕಟವನ್ನೆದುರಿಸುತ್ತಿದ್ದರೂ ಮುಸ್ಲಿಂ ಮಹಿಳೆಯರು ತಮಗೆ ನ್ಯಾಯ ಬೇಕೆಂದು ಕೇಳತೊಡಗಿದ್ದಾರೆ. ಸಮುದಾಯದೊಳಗಿನಿಂದಲೇ ನ್ಯಾಯಕ್ಕಾಗಿ ಒತ್ತಾಯ ಕೇಳಿಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬಿಎಂಎಂಎ

ಗುಜರಾತಿನ ಗೋಧ್ರಾ ಪ್ರಕರಣ ಮತ್ತದರ ನಂತರ ವಿಪ್ಲವದ ದಿನಗಳಲ್ಲಿ ಝಕಿಯಾ ಸೋಮನ್ (೫೧) ಮತ್ತವರ ಗೆಳತಿಯರಿಂದ ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ (ಬಿಎಂಎಂಎ) ೨೦೦೭ರಲ್ಲಿ ಹುಟ್ಟಿತು. ಇತ್ತೀಚೆಗೆ ಮುಂಬಯಿಯ ಹಾಜಿ ಅಲಿ ದರ್ಗಾಗೆ ಪ್ರವೇಶ ದೊರಕಿಸಿಕೊಳ್ಳಲು ನ್ಯಾಯಾಲಯ ಹೋರಾಟ ನಡೆಸಿ ಜಯಿಸಿದ ಸಂಘಟನೆ ಅದು. ಈಗದು ತ್ರಿವಳಿ ತಲಾಖ್ ವಿಷಯದಲ್ಲಿಯೂ ಹೋರಾಡುತ್ತಿದೆ. ‘ತ್ರಿವಳಿ ತಲಾಖ್ ನಿಷೇಧಗೊಳ್ಳಲೇಬೇಕು. ಕೊನೆಯ ಪಕ್ಷ ಸಾಮಾನ್ಯ ಮುಸ್ಲಿಂ ಮಹಿಳೆಯೂ ಕುರಾನ್ ಓದಿ, ಅರ್ಥ ಮಾಡಿಕೊಂಡು, ವ್ಯಾಖ್ಯಾನಿಸಬಲ್ಲಳು ಎಂದು ಇಡಿಯ ಜಗತ್ತಿಗೆ, ಉಲೇಮಾಗಳಿಗೆ ತಿಳಿಸುವುದಕ್ಕಾದರೂ ನಿಷೇಧ ಜಾರಿಯಾಗಬೇಕು’ ಎನ್ನುತ್ತದೆ ಬಿಎಂಎಂಎ. ಸ್ವತಃ ತ್ರಿವಳಿ ತಲಾಕ್ ವಿಚ್ಛೇದಿತೆಯಾದ ಝಕಿಯಾ ಒಂದು ಪೈಸೆ ಮೆಹ್ರ್ ಇಲ್ಲದೆ ತಮ್ಮ ಬದುಕು ಕಟ್ಟಿಕೊಳ್ಳುವಂತಾಗಿತ್ತು. ಮುಸ್ಲಿಂ ಪುರುಷರು ಸಮುದಾಯದ ಬಿಕ್ಕಟ್ಟಿನ ಹೆಸರಿನಲ್ಲಿ ಮಹಿಳಾ ಪ್ರಶ್ನೆಯನ್ನು ನಗಣ್ಯ ಮಾಡಿದ್ದಾರೆಂದು ಅವರು ಆಕ್ರೋಶಗೊಳ್ಳುತ್ತಾರೆ. ‘ತಮ್ಮ ಸ್ಥಿತಿಯನ್ನು ಜನರು ತಾವೇ ಬದಲಿಸಿಕೊಳ್ಳುವವರೆಗೆ ದೇವರು ಖಂಡಿತವಾಗಿ ಅದನ್ನು ಬದಲಿಸುವುದಿಲ್ಲ’ ಎಂಬ ಕುರಾನಿನ ಉಲ್ಲೇಖ (೧೩;೧೧) ವನ್ನು ಉಲ್ಲೇಖಿಸುತ್ತಾ, ‘೧೯೯೨ರಲ್ಲಿ ಈ ವಿಷಯ ಎತ್ತಿದಾಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಭವಿಸಿತು. ಸಮುದಾಯ ಅಸುರಕ್ಷಿತ ಮನಸ್ಥಿತಿಯಲ್ಲಿದೆ, ಸುಮ್ಮನಿರಿ ಎಂದರು. ೧೦ ವರ್ಷ ಕಳೆಯಿತು. ಮತ್ತೆ ವಿಷಯ ಎತ್ತಿದೆವು, ಗುಜರಾತಿನಲ್ಲಿ ಮುಸ್ಲಿಂ ಮಾರಣ ಹೋಮ ನಡೆದಿದೆ. ತೀವ್ರ ತಾರತಮ್ಯ ಇದೆ, ತಡೆಯಿರಿ ಎಂದರು. ಮತ್ತೆ ೧೩ ವರ್ಷ ಕಳೆಯಿತು. ಅಸುರಕ್ಷೆ, ತಾರತಮ್ಯ ಈಗಲೂ ಇದೆ. ಆದರೆ ಮಹಿಳೆಯರ ಸಮಸ್ಯೆ ಸಾವಿರಾರು ವರ್ಷಗಳಿಂದ ಇಲ್ಲವೆ? ಇನ್ನು ಹತ್ತು ವರ್ಷ ನಂತರ ಭಾರತದಲ್ಲಿ ಈಗಿರುವುದಕ್ಕಿಂತ ಸೆಕ್ಯುಲರ್ ಸಮಾಜ ಇದ್ದೀತೆಂದು ಯಾವ ಭರವಸೆ ಇಟ್ಟುಕೊಳ್ಳುವುದು?’ ಎನ್ನುತ್ತಾರೆ ಬಿಎಂಎಂಎಯ ನೂರ್ ಜೆಹಾನ್.

ಝಕಿಯಾ ಮುಂದುವರೆದು, ‘ಬಡ, ಅವಿದ್ಯಾವಂತ, ಹಿಂದುಳಿದ ಭಾರತದ ಮುಸ್ಲಿಮರನ್ನು ಧಾರ್ಮಿಕ ನಾಯಕರ ಸೋಗು ಹಾಕಿರುವವರು ನಿಯಂತ್ರಿಸುತ್ತಿದ್ದಾರೆ. ತಪ್ಪು ಮಾಹಿತಿ, ತಿಳುವಳಿಕೆ ಹರಡುತ್ತಿದ್ದಾರೆ’ ಎಂದು ಹೇಳುತ್ತಾರೆ. ಆ ಶಕ್ತಿಗಳೇ ದನಿಯೆತ್ತುವ ಮಹಿಳೆಯರ ವಿರುದ್ಧ ವೈಯಕ್ತಿಕ ಅಪಪ್ರಚಾರ ನಡೆಸುತ್ತ, ಇದೆಲ್ಲ ಆರೆಸ್ಸೆಸ್ ಕೈವಾಡವೆಂದೂ, ಹಿಂದೂವನ್ನು ಮದುವೆಯಾಗಿರುವ ಝಕಿಯಾ ಮುಸ್ಲಿಮಳೇ ಅಲ್ಲವೆಂದೂ ಆರೋಪಿಸುತ್ತಿವೆ. ಅವರಿಗೆಲ್ಲ ಉತ್ತರಿಸುವಂತೆ ಝಕಿಯಾ ತಣ್ಣಗೆ ತಮ್ಮ ಗುರಿ ಮುಂದಿಡುತ್ತಾರೆ: ಅವರ ಬೇಡಿಕೆ ಇಸ್ಲಾಮಿ ಸ್ವರೂಪದ ಮದುವೆ-ವಿಚ್ಛೇದನೆಗೆ. ಅದರಂತೆ, ೧. ತಲಾ ಮೂರು ತಿಂಗಳ ಅವಧಿಯ ಎರಡು ತಲಾಖ್ ೨. ನಡುನಡುವೆ ಸಂಧಾನದ ಪ್ರಯತ್ನ ೩. ಕೊನೆಗೂ ಹೊಂದಾಣಿಕೆ ಆಗದಿದ್ದರೆ ಕೋರ್ಟ್ ಮುಖಾಂತರ ವಿಚ್ಛೇದನೆ ೪. ಸೂಕ್ತ ಜೀವನಾಂಶ ೫. ಮಹಿಳೆಗೂ ಖುಲಾಗೆ ಮುಕ್ತ ಅವಕಾಶ ೬. ಮಕ್ಕಳ ಕಸ್ಟಡಿ. ಈ ಅಂಶಗಳನ್ನೊಳಗೊಂಡ ವಿಚ್ಛೇದನೆ ಕಾನೂನು ಜಾರಿಯಾದರೆ ಮಹಿಳೆಯರಿಗೆ ಅನ್ಯಾಯವಾಗದು ಎನ್ನುವುದು ಅವರ ಅಭಿಮತ.

ಮುಸ್ಲಿಂ ಮಹಿಳಾ ಹಕ್ಕು ರಕ್ಷಣಾ ಕಾಯ್ದೆ ೧೯೮೬ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ೨೦೦೫ – ಇವೆರೆಡೇ ಸಾಕು, ಮನಸ್ಸು ಮಾಡಿದರೆ ಹೆಣ್ಣುಮಕ್ಕಳ ಕಾಯಬಲ್ಲವು. ಭಾರತದ ಕೋರ್ಟುಗಳು ಖುಲಾವನ್ನೂ ಜಾರಿಗೊಳಿಸಬಹುದು, ಅದಕ್ಕೂ ಕಾರಣ ಕೊಡಬೇಕಿಲ್ಲ. ಆದರೆ ಗಂಡಸರೇ ರೂಪಿಸಿರುವ, ಕುರಾನಿಗೆ ವಿರುದ್ಧವಾಗಿರುವ, ದ್ವಂದ್ವಾತ್ಮಕ ಅರ್ಥ ಹೊಂದಿದ ಷರಿಯತ್ ಮಹಿಳೆಯರ ಪಾಲಿಗೆ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಇಸ್ಲಾಮಿನ ಆಳ ಅಧ್ಯಯನ ನಡೆಸಿರುವ ವಿದ್ವಾಂಸರೂ ಸಹ ಈ ಎಲ್ಲ ಶತಮಾನಗಳಲ್ಲಿ ಮುಸ್ಲಿಂ ಸಮುದಾಯ ಮಾಡಿದ ಗಂಭೀರ ಲೋಪವೆಂದರೆ ಮದುವೆಯ ಕುರಿತು ಕುರಾನಿನ ಸಂದೇಶವನ್ನು ತಪ್ಪಾಗಿ ಅರ್ಥೈಸಿರುವುದು ಎನ್ನುತ್ತಾರೆ. ಅಷ್ಟೇ ಅಲ್ಲ, ಕುರಾನಿನ ತಪ್ಪು ವ್ಯಾಖ್ಯಾನದಿಂದ ರೂಪಿಸಲ್ಪಟ್ಟ ಷರಿಯತ್; ಇತಿಹಾಸದಲ್ಲಿ ಎಂದೆಂದೂ ಇರದ, ಕುರಾನಿನ ಬೆಂಬಲವಿರದ ಇಸ್ಲಾಮಿಕ್ ರಾಷ್ಟ್ರ ಕಲ್ಪನೆ; ಕುರಾನಿನಲ್ಲಿ ಹೇಳಲಾಗಿದೆಯೆಂದು ತಿರುಚಲ್ಪಟ್ಟ ಪರಿಕಲ್ಪನೆ ಜೆಹಾದ್ – ಈ ಮೂರನ್ನೂ ಮುಸ್ಲಿಮರು ಕೈಬಿಡಬೇಕೆಂದು ಎ. ಜಿ. ನೂರಾನಿಯಂತಹ ಹಿರಿಯರು ಅಭಿಪ್ರಾಯಪಡುತ್ತಾರೆ.

ಚಲನಶೀಲತೆಯೇ ಧರ್ಮ

ಏಕಸಂಗಾತಿ ಸಂಬಂಧ ಹೆಣ್ಣಿಗೆ ಅನ್ವಯಿಸುವುದಾದರೆ ಗಂಡಿಗೂ ಅನ್ವಯಿಸಬೇಕು. ವಿಚ್ಛೇದನೆ-ಮರುಮದುವೆಗೆ ಗಂಡಸಿಗೆ ಅವಕಾಶವಿದೆಯೆಂದರೆ ಹೆಂಗಸಿಗೂ ಇರಬೇಕು. ಮಕ್ಕಳ ಕಸ್ಟಡಿ, ಆಸ್ತಿ ಹಕ್ಕು ಗಂಡಸಿಗೆ ಇದೆಯೆಂದರೆ ಹೆಣ್ಣಿಗೂ ಇರಬೇಕು. ಇಂಥ ಸಮಾನ ಆಶಯದ ಕಾನೂನು ಯಾವುದೇ ಧರ್ಮದ್ದಾಗಿರಲಿ, ಸಾಂವಿಧಾನಿಕ ಕಾನೂನೇ ಆಗಿರಲಿ, ಜಾತಿ ಪಂಚಾಯ್ತಿಯೇ ಆಗಿರಲಿ – ಅದನ್ನು ವಿರೋಧಿಸಲಾಗದು. ಆದರೆ ಧರ್ಮದ ಅಪವ್ಯಾಖ್ಯಾನದಿಂದ ಅಸಮಾನತೆ-ತಾರತಮ್ಯ ಅನುಭವಿಸುತ್ತಿರುವುದರಿಂದಲೇ ಮುಸ್ಲಿಂ ಮಹಿಳೆಯರು ದನಿಯೆತ್ತಿರುವುದು. ಒಂದು ಕಾಲದಲ್ಲಿ ಸಮಾಜದಲ್ಲಿ ಅಪಾರ ಬದಲಾವಣೆಗೆ ಕಾರಣವಾಗಿದ್ದ ಇಸ್ಲಾಂ ಸಮಾಜ ಸ್ಥಗಿತಗೊಳ್ಳುವುದು ತಪ್ಪಿಸಲೆಂದೇ ಅವರ ದನಿಗಳನ್ನು ಪರಿಗಣಿಸಬೇಕಾಗಿರುವುದು.

ತನ್ನ ಧರ್ಮದ ವರ್ತುಳದಾಚೆ ಮನುಷ್ಯ ಚೇತನ ಪರಿಭಾವಿಸುವ ಎಲ್ಲವನ್ನು ಅಲ್ಲಗಳೆಯುವುದು; ತನ್ನ ಧರ್ಮ ಬಂದ ನಂತರ ಬಂದ ಜ್ಞಾನವನ್ನು ಜ್ಞಾನವೆಂದು ಸ್ವೀಕರಿಸದೆ ಇರುವುದು, ಹೊಸ ತಿಳಿವುಗಳ ಕಲಿಯಲು ನಿರಾಕರಿಸುವುದು ಸನಾತನವಾದ. ಈ ಕಾಲದ ಮುಸ್ಲಿಮರಿಗೆ ಗಾಢನಂಬಿಕೆಯ ಮನೆಯ ವಾತಾವರಣ, ಶಾಲಾಕಾಲೇಜುಸಮಾಜಗಳಲ್ಲಿ ಕಂಡುಬರುವ ಆಧುನಿಕತೆ, ವಿಚಾರವಾದ – ಇವೆರೆಡರ ನಡುವಿನ ವೈರುಧ್ಯ ಅವರ್ಣನೀಯ ದ್ವಂದ್ವ ಹುಟ್ಟಿಸುತ್ತಿರಬಹುದೆ? ಅವರಿಗೆ ಒಳ್ಳೆಯ ಮುಸ್ಲಿಮರಾಗುವ ಗುರಿಯಿರುತ್ತದೆ. ಆದರೆ ಆಧುನಿಕತೆ ಅದನ್ನು ಆಗಮಾಡುವುದಿಲ್ಲವೇನೋ ಎಂಬ ಭಯವೂ ಇರುತ್ತದೆ. ಮುಸ್ಲಿಮರಾಗಿ ಆಧುನಿಕವಾಗಿರುವುದು ತಪ್ಪೆನ್ನುವ ಪಾಪಪ್ರಜ್ಞೆಯನ್ನು ಜನರ ಮನಸಿನಲ್ಲಿ ಬಿತ್ತುವಲ್ಲಿ ಧರ್ಮದ ವಕ್ತಾರರು, ಧರ್ಮರಕ್ಷಕ ಪುರೋಹಿತರು ಯಶಸ್ವಿಯಾಗಿದ್ದಾರೆ. ಈ ದ್ವಂದ್ವವೇ ಸುಧಾರಣೆ ಬಯಸುವವರ ಅಸ್ಪಷ್ಟತೆ, ಅಧೀರತೆಗಳಿಗೆ ಕಾರಣವಾಗಿದೆ. ಅದರಲ್ಲೂ ಬದಲಾಗಬಾರದ್ದನ್ನು ಪೆಟ್ಟಿಗೆಯೊಳಗೆ ತುಂಬಿಟ್ಟು ಅದಕ್ಕೆ ಜಡಿದಿರುವ ಮೊಳೆಗಳಂತೆ ಬಳಸಲ್ಪಟ್ಟ ಮಹಿಳೆಯರಿಗೆ ಈ ಮಾತು ನಿಜವಾಗಿದೆ.

ಆದರೂ ಮಹಿಳೆಯರು ಈ ವಿಷಯವನ್ನು ಸ್ವಲ್ಪಮಟ್ಟಿಗೆ ಪರಿಹರಿಸಿಕೊಳ್ಳುತ್ತಿದ್ದಾರೆ.

ಧರ್ಮಗಳು ಯಾಕಾಗಿ ಹುಟ್ಟಿದವೋ ಮನುಷ್ಯ ಅದನ್ನರಿತು ಬದುಕಿದ್ದರೆ ಈ ಭೂಮಿ ಮೇಲಿನ ಅಂಗೈ ಅಗಲದ ದೇಶಗಳು ತಂತಮ್ಮ ಗಡಿಕಾಯಲು ಪ್ರಾಣಾಂತಿಕ ಅಸ್ತ್ರಗಳ ಮೈತುಂಬ ಪೋಣಿಸಿಕೊಂಡ ಸೈನಿಕರ ಕಾವಲಿಡಬೇಕಿರಲಿಲ್ಲ. ಧರ್ಮಗ್ರಂಥಗಳನ್ನು ಅಕ್ಷರಶಃ ಓದದೇ, ಅರಿತು ಅರ್ಥಮಾಡಿಕೊಂಡು ಅನುಸರಿಸಿದಲ್ಲಿ ಮೂಲಭೂತವಾದ ಹುಟ್ಟುತ್ತಲೇ ಇರಲಿಲ್ಲ. ಅಪ್ರಾಮಾಣಿಕ ಓದು ತಪ್ಪು ಅರ್ಥಗಳ ಹೊರಡಿಸುತ್ತದೆ. ನಾವೀಗಾಗಲೇ ಜಗತ್ತಿನ ಬಹುಪಾಲು ಸಂಕಟಗಳ ಮೂಲ ಧರ್ಮದ ತಪ್ಪು ವ್ಯಾಖ್ಯಾನ ಎನ್ನುವುದಕ್ಕೆ ಸಾಕ್ಷಿಯಾಗಿದ್ದೇವೆ. ಧರ್ಮವನ್ನು ತಮ್ಮ ಹಿತಾಸಕ್ತಿಗೆ ತಕ್ಕಂತೆ ತಿರುಚುವವರ ಭರಾಟೆಯಲ್ಲಿ ನಿಜದ ಒಳದನಿಗಳಿಗೆ ಜಾಗ ಕ್ಷೀಣಿಸುತ್ತಿದೆ.

ಹೀಗಿರುವಾಗ ಏನು ಮಾಡಬೇಕು? ಒಂದೋ ಧರ್ಮದ ಹಂಗಿಲ್ಲದೆ ಬದುಕಬೇಕು. ಅಥವಾ ಧರ್ಮದನುಯಾಯಿ ಆಗಿದ್ದರೂ  ದಲ್ಲಾಳಿಗಳನ್ನು, ಮಧ್ಯವರ್ತಿಗಳನ್ನು ಕೈಬಿಡಬೇಕು. ಧರ್ಮದ ನಿಜ ಬೇರು ನಮ್ಮಾಳದಲ್ಲಿಳಿದು ಚಿಗುರು ಮೂಡಿಸಿದಲ್ಲಿ ಋತುವಿಗೆ ತಕ್ಕ ಹೊಸಚಿಗುರು ಮೂಡಲೇಬೇಕು. ಆಗ ಮುಸ್ಲಿಂ-ಹಿಂದೂ-ಸಿಖ್-ಕ್ರೈಸ್ತ-ಬೌದ್ಧ ಆಗಿದ್ದುಕೊಂಡೇ ಸೆಕ್ಯುಲರ್ ಆಗಿ, ವೈಜ್ಞಾನಿಕವಾಗಿ ಯೋಚಿಸಲು ಸಾಧ್ಯವಿದೆ. ಆಗ ಜನಸಾಮಾನ್ಯರೂ ಹೊಸ ಭಾಷೆ, ಜ್ಞಾನ, ವಿಚಾರಗಳಿಗೆ ತೆರೆದುಕೊಂಡು ಹೊಸಬೆಳಕು ಒಳಗ ತುಂಬಬಹುದಾಗಿದೆ.

hs_Anupama

 

 

 

ಹೆಚ್.ಎಸ್.ಅನುಪಮಾ

Please follow and like us:
error