ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ ( ಕವಿತೆ) 

ganesh-festival-koppal (1) ganesh-festival-koppal (2)

ನಮ್ಮೂರ ಗಣೇಶಂಗೆ
 ಮಸೀದಿ ಎಂದರೆ ಪ್ರೀತಿ
ಮುಸ್ಸಂಜೆ ಹೊತ್ತಲ್ಲಿ ಸಿಂಗರಿಸಿಕೊಂಡು ಹೊರಡ್ತಾನೆ
ಡೊಳ್ಳು ಬಾಜಾ ಭಜಂತ್ರಿಯವನ ಜೊತೆ
ಡಿಜೆಯವನೂ ಸಾಥ್ ಕೊಡ್ತಾನೆ
ಕೆರೆ,ಬಾವಿಗೆ ನೂರೆಂಟು ದಾರಿಯಿವೆ
ಅಲ್ಲಿ ಮರೆತೂ ಕಾಲಿಡಲ್ಲ ಯಾಕೆಂದರೆ
ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ
ಮುಗಿಲು ಮುಟ್ಟುವ ಜೈಕಾರ
ಭಕ್ತಿಯ ಪರಕಾಷ್ಠೆ, ಅಂಕೆ ಮೀರಿದ  ಉನ್ಮಾದ ಆವೇಶ
ಕಳಚುತ್ತವೆ ಒಂದೊಂದೇ ವೇಷ
ಗಣೇಶ ಮೆಲ್ಲಗೆ ಮೆರವಣಿಗೆಯಲ್ಲಿ  ಮಸೀದಿ ಹತ್ತಿರ ಬರ್ತಾನೆ
ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ
ವಾಚ್ ನೋಡುತ್ತಾ ನಮಾಜಿಗೆ ಬರುವ ಮುಸಲ್ಮಾನ
ಕಲಿಯಬೇಕಿದೆ ಪಾಠ
ನೋಡು ಸಂಜೆ ಬಂದ ಗಣೇಶ ಮಧ್ಯರಾತ್ರಿ ಕಳೆದು ಬೆಳಗಾದರೂ ಇನ್ನೂ ಹೋಗಿಲ್ಲ
ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಪ್ರೀತಿ
ಏನೋ ಮಾಡಬೇಕೆನ್ನುವ ಹಪಾಹಪಿ
ಏನೂ ಮಾಡಲಾಗುತ್ತಿಲ್ಲ ಎನ್ನುವ ಚಡಪಡಿಕೆ
ನೆನಪಾಗುವುದಿಲ್ಲ ಕೇಳಿಸುವುದಿಲ್ಲ
ಶಾಂತಿಸಭೆಯ ಮಾತುಗಳು ಸಿಡಿಮದ್ದಿನ ಸೌಂಡಿನಲಿ
ದೃಷ್ಟರಾಷ್ಟ್ರರ ದಂಡಿನ ಮುಂದೆ ಒದ್ದಾಡುತ್ತದೆ ಸೌಹಾರ್ಧ
ಮಂಜಾಗುತ್ತವೆ  ಕಣ್ಣುಗಳು ಮದ್ದಿನ ಹೊಗೆಯಲ್ಲಿ
ಎಲ್ಲ ಮುಗಿದ ಮೇಲೆ ನೀರವ ಮೌನ….
ಬದುಕಿದೆಯಾ ಸತ್ತಿದೆಯೋ ತಿವಿದು ನೋಡುತ್ತಾರೆ ಪೊಲೀಸರು
ಅಯ್ಯೋ….
ನನ್ನೂರ ಮಸೀದಿಯ ಮುಂದೆ  ಸತ್ತು ಬಿದ್ದಿದೆ ಭಾವೈಕ್ಯತೆ
ಹೆಗಲು ಕೊಡಲ ಬನ್ನಿ ಸ್ಮಶಾನಕ್ಕೆ ಮುಟ್ಟಿಸಬೇಕಿದೆ
ಮತ್ತೆ ಮತ್ತೆ ಹುಟ್ಟಿ ಬರಬೇಕಿದೆ ಅದಕೆ
ಯಾಕೆಂದರೆ ನಮ್ಮೂರ ಗಣೇಶಂಗೆ
ಮಸೀದಿ ಎಂದರೆ ಪ್ರೀತಿ !
(ಹಳೆಯ ಕವಿತೆ ಮತ್ತೆ ನೆನಪಾಯಿತು)
– ಸಿರಾಜ್ ಬಿಸರಳ್ಳಿ
Please follow and like us:
error