ಅಪ್ಪನ ದಿನ – ಅಪ್ಪ-ಮಗನ ಎರಡು ಕವಿತೆಗಳು

ಅಪ್ಪ
ನಾ ಬರಲು ಈ ಜಗಕೆ ಕಾರಣನು ನೀನು
ಹೆತ್ತಮ್ಮ ಲಾಲಿಸಿದರೆ ಪಾಲಿಸಿದೆ ನೀನು
ಮುತ್ತಿನೊಂದಿಗೆ ಕಚಗುಳಿಯಿಕ್ಕಿ ನೀ ನಗಲು
ನಿನ್ನ ಗಡ್ಡದ ತುರಿಕೆಯಿಂದ ನಾ ಒದ್ದಾಡಿದೆ
ನುಡಿದ ಮೊದಲಾಕ್ಷರ ಅಮ್ಮನಾದರೂ
ನೀ ಅಪ್ಪಿ ಮುದ್ದಾಡಿದೆ
ಕೋರಿಕೆ ಹೆಚ್ಚಾಗಿ ಕಾಡಿದರೂ ನಾನು
ಸಿಡಿಮಿಡಿಗೊಳ್ಳದೇ ಪೂರೈಸಿದೆ ನೀನು
ಬೆಳೆಸಿ ಕಲಿಸಿ ಇಂದು ಗಳಿಸುವ ನನ್ನ
ಏಳ್ಗೆಯನು ಕೊಂಡಾಡಿ ನಲಿಯುತಿಹೆ ನೀನು
ನಿನ್ನ ಕರ್ತವ್ಯದಂತೆ ಪೋಷಿಸಿದೆ ನನ್ನ
ಕಾಣದ ದೇವಗಿಂತ ನೀನೇ ಚೆನ್ನ
ಕೋಪ ಬರುತಿದೆ ನಿನ್ನ ಬಗ್ಗೆ ಬರೆಯದವರ ಕಂಡು
ನಾನಂತೂ ಸೇವಿಸುವೆ ಪಿತೃದೇವೋಭವ ಮನಗಂಡು
– ಬಾಬುಸಾಬ ಬಿಸರಳ್ಳಿ
ಅಪ್ಪ
ಸಾವಿರ ಕುದುರೆಗಳ ಏರುವಾಸೆಯಲಿ
ಆಕಾಶ ಭೂಮಿಯಷ್ಟು ಪ್ರೀತಿ ಕೊಟ್ಟು
ಸಾವಿರ ಸಲ ಸೋತರೂ
ಫಿನಿಕ್ಸ್ ನ ಛಲದಿಂದ ಬದುಕಿ
ಅವಸರದ ಆಕರ್ಷಣೆಗೆ ಸಿಲುಕಿ
ಪತಂಗವಾಗಿ ಸುಟ್ಟುಹೋದ
ನನ್ನಪ್ಪ  ಕಾಣುತ್ತಾನೆ ನನಗೆ
ಪ್ರತಿಸಲವೂ  ಸವಾಲುಗಳ ಎದುರು ನಿಂತಾಗ
ಉತ್ತರಿಸಲಾಗದ ನನ್ನ ಪ್ರಶ್ನೆಗಳಿಗೆ
ಮೌನವಾಗಿರುತ್ತಿದ್ದ ಅಪ್ಪನಂತೆ
ನಾನೀಗ  ನನ್ನ ಮಗಳ ಮುಂದೆ !
ಬದುಕ ಪ್ರೀತಿಯ ಕಲಿಸಿ
ಇದ್ದಷ್ಟೂ ದಿನಗಳೂ ಬದುಕಿನ
ಹೋರಾಟದಲ್ಲೇ ಕಳೆದ
ಅಪ್ಪ ನೀನಂದು ಪ್ರಶ್ನೆಯಾಗಿದ್ದೆ,
ಇಂದು ನಾನು ಹುಡುಕುತ್ತಿದ್ದೇನೆ
ಆ ಪ್ರಶ್ನೆಗಳಿಗೆ ಉತ್ತರ
-ಸಿರಾಜ್ ಬಿಸರಳ್ಳಿ

Leave a Reply