Bellary ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಸರಕಾರಿ ದಂತ ಮಹಾವಿದ್ಯಾಲಯದಲ್ಲಿರಿಸಲಾಗಿರುವ ಕೊರೊನಾ ಸೊಂಕಿತರ ವಾರ್ಡ್ ನೊಳಗೆ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಬುಧವಾರ ತೆರಳಿ ಸೊಂಕಿತರ ಅಹವಾಲುಗಳನ್ನು ಆಲಿಸಿದರು. ಪಿಪಿಇ ಕಿಟ್ ಧರಿಸಿದ್ದ ಸಚಿವರು ಅವರ ಆರೋಗ್ಯ-ಕ್ಷೇಮ ವಿಚಾರಿಸಿದರು.
ವಿಮ್ಸ್ ನಿರ್ದೇಶಕ ಡಾ.ದೇವಾನಂದ, ವೈದ್ಯರ ಜತೆಗೆ ಪಿಪಿಇ ಕಿಟ್ ಧರಿಸಿಕೊಂಡು ಸೊಂಕಿತರಿರುವ ವಾರ್ಡ್ ಗೆ ಪ್ರವೇಶಿಸಿದ ಸಚಿವ ಆನಂದಸಿಂಗ್ ಅವರು ಸೊಂಕಿತರ ಅಹವಾಲುಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು.ಸೊಂಕಿತರ ಕಷ್ಟಗಳನ್ನು ಆಲಿಸಿದರು. ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಿದರು; ಚಿಂತೆ ಬೇಡ ತಾವು ಗುಣಮುಖರಾಗಿ ಹೊರಬರುತ್ತೀರಿ ಎಂದು ಧೈರ್ಯ ತುಂಬಿದರು.
ಸೊಂಕಿತರು ಇಲ್ಲಿ ಗುಣಮಟ್ಟದ ಊಟ, ಚಿಕಿತ್ಸೆ ಕೊಡಲಾಗುತ್ತಿದೆ ಮತ್ತು ಸ್ವಚ್ಛತೆಯೂ ಚೆನ್ನಾಗಿದೆ ಎಂದರು.
ಕೊರೊನಾ ಬಂದಿದೆ ಎಂಬ ಭಯಬೇಡ;ತಮ್ಮೆಲ್ಲರೊಂದಿಗೆ ಜಿಲ್ಲಾಡಳಿತ ಮತ್ತು ಸರಕಾರವಿದೆ; ತಾವು ಆಸ್ಪತ್ರೆಯೊಳಗೆ ವಿಶ್ರಾಂತಿ ತೆಗೆದುಕೊಂಡು ಗುಣಮುಖರಾಗಿ ಹೊರಬನ್ನಿ ಎಂದು ಹೇಳಿದರು.
ನಂತರ ಸಚಿವರು ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಜಿಲ್ಲಾಡಳಿತದಿಂದ ಹಾಗೂ ಸರಕಾರದಿಂದಾಗಬೇಕಾಗುವ ಸಹಾಯ-ಸಹಕಾರಗಳ ಮಾಹಿತಿಯನ್ನು ವಿವರವಾಗಿ ಪಡೆದರು ಮತ್ತು ವೈದ್ಯರಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಹಿಂದೆಯೂ ಬಳ್ಳಾರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಕೊರೊನಾ ಸೊಂಕಿತರ ವಾರ್ಡ್ ಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದ್ದನ್ನು ಸ್ಮರಿಸಬಹುದಾಗಿದೆ.
