ಲಾಕಡೌನ್ ನಿಂದ ಉದ್ಯೋಗ ಕಳೆದುಕೊಂಡವರು ತೋಟಗಾರಿಕೆ ಇಲಾಖೆಯ ಯೋಜನೆಗಳ ಲಾಭ ಪಡೆಯಿರಿ- ಶ್ರೀಶೈಲ ದಿಡ್ಡಿಮನಿ

Kannadanet NEWS ಕೊಪ್ಪಳ  : ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ದಿ.ಡಾ.ಎಂ.ಎಚ್.ಮರಿಗೌಡರ ಜನ್ಮ ದಿನದ ನಿಮಿತ್ತ ತೋಟಗಾರಿಕೆ ದಿನ ಆಚರಿಸಲಾಯಿತು.ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೋಟಗಾರಿಕೆ ಕ್ಷೇತ್ರದಲ್ಲಿ ಇರುವಷ್ಟು ಉದ್ಯೋಗ ಅವಕಾಶ ಮತ್ತೆಲ್ಲೂ ಸಿಗುವುದಿಲ್ಲ. ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿರುವ ವಿದ್ಯಾವಂತ‌ ಯುವಕರು ತೋಟಗಾರಿಕೆ ಕಡೆ ಮುಖ ಮಾಡಿದರೆ ಉತ್ತಮ ಆದಾಯ ಪಡೆಯುವ‌ ಅವಕಾಶಗಳಿವೆ ಎಂದರು.

 

ಉಪನಿರ್ದೇಶಕ ಕೃಷ್ಣ ಉಕ್ಕುಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ತೋಟಗಾರಿಕೆ ಎಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಭಾವನೆ ಇತ್ತು.ಇದನ್ನು ಸಾಮಾನ್ಯ ರೈತರಿಂದ ದೂರ ಮಾಡಿದವರು ಮರಿಗೌಡ ಅವರು. ಕಾರಣಕ್ಕೆ ಇವರನ್ನು ತೋಟಗಾರಿಕೆ ಪಿತಾಮಹ ಎಂದು ಕರೆಯುತ್ತೇವೆ. ತೋಟಗಾರಿಕೆ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತ ಆಗಬಾರದು ಎಂಬ ಕಾರಣಕ್ಕೆ ತೋಟಗಾರಿಕೆ ಸಪ್ತಾಹವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಕೋವಿಡ್19 ಹೊಡೆತದಿಂದ ಸಾಕಷ್ಟು ಯುವಕರು ನಗರ ಪ್ರದೇಶದಿಂದ ಹಳ್ಳಿ ಕಡೆ ಮುಖ ಮಾಡಿದ್ದರೆ. ಅವರಿಗೆ ಇದೀಗ ಕೃಷಿಯಲ್ಲಿ ಮುಕ್ತ ಅವಕಾಶ ಇದ್ದು, ಯುವಕರನ್ನು ತೋಟಗಾರಿಕೆ ಕಡೆಗೆ ಸೆಳೆಯಲು ತೋಟಗಾರಿಕೆ ಇಲಾಖೆಯಿಂದ ತರಬೇತಿ ನೀಡುವ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಎಸ್ಎಡಿಎಚ್ ನಜೀರ ಅಹ್ಮದ್ ಇದ್ದರು. ವಿಷಯ ತಜ್ಞ ವಾಮನಮೂರ್ತಿ ನಿರೂಪಿಸಿದರು. ನಂತರ ಡಾ.ಕವಿತಾ ಉಳ್ಳಿಕಾಶಿ ಅವರು ಅಣಬೆ ಬೇಸಾಯದ ಬಗ್ಗೆ ಉಪನ್ಯಾಸ ನೀಡಿದರು.

Please follow and like us:
error