2ಎ ಮೀಸಲಾತಿಗಾಗಿ ಬೃಹತ್ ಪಾದಯಾತ್ರೆ: ಯುವಜನತೆ ಭಾಗಿಯಾಗಲು ಸ್ವಾಮೀಜಿ ಕರೆ.

ಕೊಪ್ಪಳ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ, ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗೋಸ್ಕರವೇ ಆಗಿರುವ ಹಿನ್ನೆಲೆ, ಪಂಚಮಸಾಲಿ ಸಮಾಜದ-ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗಿ ಅದೇ ಶಾಲಾ ಸಮವಸ್ತ್ರದಲ್ಲಿ, ಬ್ಯಾಗ್, ಬುಕ್ಸ್ ಸಮೇತ ನನ್ನೊಂದಿಗೆ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಕೂಡಲಸಂಗಮ ಪೀಠದಿಂದ ಬೆಂಗಳೂರು ವಿಧಾನಸೌಧ ಆಡಳಿತ ಪೀಠದವರೆಗೆ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸೇರ್ಪಡೆ ಹಕ್ಕೊತ್ತಾಯಕ್ಕೆ ಪಂಚಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆ ರಾತ್ರಿ 8.40ಕ್ಕೆ ಬಾಗಲಕೋಟೆ ಜಿಲ್ಲಾ ಗಡಿಯಿಂದ ಕೊಪ್ಪಳ ಜಿಲ್ಲಾ ಸೀಮಾ ಗಡಿ ಪ್ರವೇಶಿಸಿದೆ. ಅಲ್ಲಿಂದ ಕ್ಯಾದಿಗುಪ್ಪ ಮಾರ್ಗವಾಗಿ ತಡರಾತ್ರಿ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮಕ್ಕೆ ಬಂದ ವೇಳೆ, ಪಂಚಮಸಾಲಿ ಸಮಾಜದಿಂದ ಪುಷ್ಪವೃಷ್ಟಿ ಹಾಗೂ ಮಹಿಳೆಯರು ಆರತಿ ಬೆಳಗಿ ಭವ್ಯ ಸ್ವಾಗತ ಕೋರಿದರು.
ನಂತರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಷ್ಪಗಿ ತಲಪುವ ಪಾದಯಾತ್ರೆಯಲ್ಲಿ ನಮ್ಮ ಸಮಾಜದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬೇಕು. ಈ ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳುವುದರಿಂದ, ಪಾದಯಾತ್ರೆ ಕೊಪ್ಪಳ ಜಿಲ್ಲಾ ಗಡಿ ದಾಟುವುದರೊಳಗಾಗಿ ಸರ್ಕಾರ 2-ಎ ಮೀಸಲಾತಿ ನೀಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಪಂಚಮಸಾಲಿ ಸಮಾಜದಲ್ಲಿ ಪ್ರತಿಭಾನ್ವಿತರಿದ್ದು ಮೀಸಲಾತಿ ಲಾಭ ಸಿಗದ ಹಿನ್ನೆಲೆ ಅವಕಾಶ ವಂಚಿತರಾಗಿ ಕಣ್ಣೀರಿಡುವಂತಾಗಿದೆ. ಕಣ್ಣೀರು ಒರೆಸಲು ಈ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಕಳೆದ 26 ವರ್ಷಗಳಿಂದ ಎಲ್ಲಾ ಸರ್ಕಾರಗಳಿಗೆ ಮನವಿ ನೀಡಲಾಗಿದ್ದರೂ ಕೂಡ ನಮ್ಮ ಕೂಗು ಕೇಳಿಲ್ಲ. ಇದೀಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರನ್ನು ಕೇಳುವ ಅಧಿಕಾರ, ಹಕ್ಕು ಇದೆ. ಯಡಿಯೂರಪ್ಪ ಸಿಎಂ ಆಗಲು ಪಂಚಮಸಾಲಿ ಸಮಾಜದ ಕೊಡುಗೆ ಸಾಕಷ್ಟಿದೆ. ಬಿಜೆಪಿಯಲ್ಲಿ ಪಂಚಮಸಾಲಿ ಸಮಾಜದ 15 ಜನ ಶಾಸಕರಿದ್ದು, ನಾಲ್ಕು ಜನ ಕಾಂಗ್ರೆಸ್ನಲ್ಲಿ, ಒಬ್ಬರು ಜೆಡಿಎಸ್ನಲ್ಲಿದ್ದು, ಒಟ್ಟು 20 ಶಾಸಕರು ಪಂಚಮಸಾಲಿ ಸಮಾಜದವರಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದ್ದು ಪಾದಯಾತ್ರೆ ಬೆಂಗಳೂರು ತಲುಪುವುದರೊಳಗಾಗಿ ಮೀಸಲಾತಿ ಘೋಷಿಸಿದರೆ ಮಾತ್ರ ಸಿಎಂ ಅವರಿಗೆ ಈ ಸಮಾಜದಿಂದ ನಿಜವಾದ ಗೌರವ ಸಿಗುತ್ತದೆ ಎಂದು ಗುಡುವು ನೀಡಿದರು. ಸದರಿ ಮೀಸಲಾತಿ ಕಲ್ಪಿಸದೇ ಇದ್ದಲ್ಲಿ ಈ ಸಮಾಜ ನಿರಾಸೆಗೆ ಒಳಗಾಗುವ ಸಾಧ್ಯತೆ ಇದ್ದು, ನಿರಾಸೆಯ ಪ್ರತೀಕಾರದ ಪರಿಣಾಮ ಏನಾಗುತ್ತದೆಯೋ ಎಂಬುದಕ್ಕೆ ಅಶ್ಚರ್ಯ ಪಡಬೇಕಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು. ಆರ್ಥಿಕ ಉದ್ಯೋಗ ಮೀಸಲಾತಿ ಕೇಳುತ್ತಿಲ್ಲ, ಕೇವಲ ಉದ್ಯೋಗ ಶಿಕ್ಷಣಕ್ಕಾಗಿ 2ಎ ಮೀಸಲಾತಿ ಕೇಳುತ್ತಿದ್ದೇವೆ. ಇದಕ್ಕೆ ಸರ್ಕಾರದಿಂದ ಭರವಸೆ ಸಿಕ್ಕರೆ ಸಾಲದು 2-ಎ ಮೀಸಲಾತಿ ಪ್ರಮಾಣ ಪತ್ರ ಕೈಗೆ ಸಿಗುವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಅಮರೆಗೌಡ ಪಾಟೀಲ್ ಬಯ್ಯಾಪೂರ, ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ , ದೇವೇಂದ್ರಪ್ಪ ಬಳೂಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error