15 ರಿಂದ 20 % ಕುಟುಂಬಗಳು ಮಹಿಳೆಯರಿಂದಲೇ ನಿರ್ವಹಣೆ : ಆರ್. ಪ್ರಮೀಳಾ ನಾಯ್ಡು


ಕೊಪ್ಪಳ, : ರಾಜ್ಯದಲ್ಲಿ 15 ರಿಂದ 20 ಪ್ರತಿಷತ್ ಕುಟುಂಬಗಳನ್ನು ಮಹಿಳೆಯರೆ ನಿರ್ವಹಣೆ ಮಾಡಿಕೊಂಡು ಇಡಿ ಕುಟುಂಬದ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚಾಗಿ ಕೌಟುಂಭಿಕ ಪ್ರಕರಣಗಳ ದೂರುಗಳು ಬರುತ್ತವೆ.  ಕೆಲವು ಮಹಿಳೆಯರಿಗೆ ತಂದೆ, ತಾಯಿ ಇರುವುದಿಲ್ಲ.  ಕೆಲವು ಮಹಿಳೆಯರಿಗೆ ಅತ್ತೆ ಮಾವಂದಿರ ಕಿರುಕುಳ ಮತ್ತು ಮಹಿಳೆಯರು ತಮ್ಮ ಆಸ್ತಿಯಲ್ಲಿ ಪಾಲು ಕೇಳಲು ಹೋದಾಗ ಅವರ ಮೇಲೆ ಹಲ್ಲೆಗಳನ್ನು ಮಾಡುತ್ತಾರೆ.  ಇಡಿ ರಾಜ್ಯದಲ್ಲಿ ಮಾರ್ಚ್ನಿಂದ ಆಗಸ್ಟ್ ವರೆಗೆ ಅತ್ಯಾಚಾರ, ವರದಕ್ಷೀಣೆ, ಕೆಲಸದ ಜಾಗದಲ್ಲಿ ಕಿರುಕುಳ ಹೀಗೆ ಒಟ್ಟು 198 ದೌರ್ಜನ್ಯ ಪ್ರಕರಣಗಳ ದೂರು ದಾಖಲಾಗಿದೆ ಎಂದರು.
ಮಹಿಳಾ ಆಯೋಗದಿಂದ ಕೌಟುಂಬಿಕ ಗಂಡ, ಹೆಂಡತಿಯರ ಜಗಳಗಳಂತಹ ಪ್ರಕರಣಗಳಲ್ಲಿ ಅವರಿಗೆ ವೈಜ್ಞಾನಿಕವಾಗಿ ಕೌನ್ಸ್ಲಿಂಗ್ ಮಾಡುವ ಮೂಲಕ ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತೇವೆ.  ಮಹಿಳೆಯರ ಜೀವನಾಂಶಕ್ಕಾಗಿ ಸೆಪ್ಟೆಂಬರ್. 19 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಅದಾಲತ್‌ಗಳನ್ನು ಮಾಡುತ್ತಾರೆ.  ದೇವದಾಸಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಒಂಟೆ ಜೀವನ ಸಾಗಿಸುವ ಮಹಿಳೆಯರಿಗೆ ರಾಜೀವ್ ವಸತಿ ಯೋಜನೆಯಡಿ ಸೂರು ಇಲ್ಲದವರಿಗೆ ಸೂರು ಒದಗಿಸುವಂತೆ ನಾನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಭೇಟಿಯಾದಾಗ ಹೇಳುತ್ತಿರುತ್ತೇನೆ ಎಂದರು.
ರಾಜ್ಯದಲ್ಲಿ ಈಗಾಗಲೇ ಡ್ರಗ್ ಪ್ರಕರಣಗಳು ಕಂಡುಬರುತ್ತಿದ್ದು, ಇದಕ್ಕೆ ನನ್ನ ವಿರೋಧವಿದೆ.  ಇದನ್ನು ಬುಡಸಮೇತ ಕಿತ್ತೆಸೆಯಬೇಕು.  ಶಾಲಾ, ಕಾಲೇಜಿನ ಮಕ್ಕಳು ಹಾಗೂ ಇಂದಿನ ಯುವ ಪಿಳಿಗೆಗೆ ಇದು ಮಾರಕವಾಗಿದ್ದು, ಈ ಕುರಿತು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.  

Please follow and like us:
error