1 ಲಕ್ಷ ರೂ. ಲಂಚ ಪಡೆದ PSI ಸೌಮ್ಯ: ACB ಅಧಿಕಾರಿಗಳಿಂದ ಬಂಧನ

ಕಳ್ಳತನದ ಮೊಬೈಲ್‌ ಖರೀದಿ ಮಾಡಿದ್ದ ವ್ಯಕ್ತಿಯೊಬ್ಬರನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹ 1 ಲಕ್ಷ ಲಂಚ ಪಡೆದ ಸಬ್‌ ಇನ್‌ಸ್ಪೆಕ್ಟರ್‌ ಸೌಮ್ಯಾ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಜಯಪ್ರಕಾಶ್ ರೆಡ್ಡಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಮಂಗಳವಾರ ಬಂಧಿಸಿದೆ. ಇವರಿಬ್ಬರೂ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯ ಅಧಿಕಾರಿಗಳಾಗಿದ್ದಾರೆ.

ಮೊಬೈಲ್‌ ಕಳ್ಳನನ್ನು ಬಂಧಿಸಿದ್ದ ಸೌಮ್ಯಾ ಮತ್ತು ತಂಡ, ಕಳವು ಮಾಡಿದ ಮೊಬೈಲ್‌ ಅನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ₹ 2 ಲಕ್ಷ ಲಂಚ ನೀಡಿದರೆ ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಿದ್ದರು. ಈ ಕುರಿತು ಆ ವ್ಯಕ್ತಿಯ ಹೆಂಡತಿ ಸೋಮವಾರ ACB ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು

ಮಂಗಳವಾರ ₹ 1 ಲಕ್ಷ ನೀಡುವಂತೆ ದೂರುದಾರರಿಗೆ ಆರೋಪಿಗಳು ಸೂಚಿಸಿದ್ದರು. ಮಂಗಳವಾರ ಮಧ್ಯಾಹ್ನ ಸೌಮ್ಯಾ ಮತ್ತು ಅವರ ಪರವಾಗಿ ಲಂಚದ ಹಣ ಪಡೆದ ಜಯಪ್ರಕಾಶ್‌ ರೆಡ್ಡಿ ಅವರನ್ನು ACB ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದ ತಂಡ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲೇ ಬಂಧಿಸಿದೆ.

ACB ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸೌಮ್ಯಾ, ಜಯಪ್ರಕಾಶ್‌ ರೆಡ್ಡಿ ಅವರೊಂದಿಗೆ ಇತರ ಸಿಬ್ಬಂದಿಯೂ ಠಾಣೆಯಲ್ಲಿಯೇ ಇದ್ದರು. ಎಸಿಬಿ ದಾಳಿಯಿಂದ ಗಾಬರಿಗೊಂಡ ಕುಮಾರ್‌ ಎಂಬ ಕಾನ್‌ಸ್ಟೆಬಲ್‌ ತಮ್ಮನ್ನೂ ಬಂಧಿಸಬಹುದು ಎಂಬ ಭಯದಲ್ಲಿ ಕಟ್ಟಡದ ಮೊದಲನೇ ಮಹಡಿಯಿಂದ ಹಾರಿದ್ದಾರೆ. ಅವರ ಕಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಂಟ್ರಿ ಅಂಡ್ ಪಾಲಿಟಿಕ್ಸ್ ವರದಿ ಮಾಡಿದೆ.

Please follow and like us:
error