1 ಕೋಟಿ ನೀಡಿದ ಕೆಪಿಸಿಸಿ- ಕಾರ್ಮಿಕರಿಗೆ ಉಚಿತ ಪ್ರಯಾಣ ಘೋಷಿಸಿದ ಸರಕಾರ

ಕಳೆದ ಮೂರು ದಿನಗಳಿಂದ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತಲುಪಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಬೆಂಗಳೂರನ್ನು ಕಟ್ಟಿದ ಈ ಕಾರ್ಮಿಕರು ಒಂದೂವರೆ ತಿಂಗಳು ಕಾದರೂ ಸಹ ಕೊನಗೆ ಕಣ್ಣೀರಿಡುತ್ತಾ ತಮ್ಮ ಊರು ತಲುಪಬೇಕಾದ ಪರಿಸ್ಥಿತಿ ಬಂದಿತ್ತು.

ಮೊದಲು ಕರ್ನಾಟಕ ಸರ್ಕಾರ ಒಬ್ಬ ವ್ಯಕ್ತಿಗೆ ನಿಗಧಿತ ಬಸ್‌ ದರಕ್ಕಿಂತ ಮೂರು ಪಟ್ಟು ಹೆಚ್ಚು ಮಾಡಿತ್ತು. ಕಾರ್ಮಿಕರು ಮತ್ತು ಪ್ರಜ್ಞಾವಂತರಿಂದ ಇದಕ್ಕೆ ಬಲವಾದ ವಿರೋಧ ಬಂತು. ನಂತರ ಸರ್ಕಾರ ಒಂದೇ ದರ ಘೋಷಿಸಿತು. ಈ ಕುರಿತು ವಿರೋಧ ಪಕ್ಷ ಕಾಂಗ್ರೆಸ್‌ ಸರ್ಕಾರದ ಮೇಲೆ ತೀವ್ರ ಟೀಕೆ ಮಾಡಿತು. ಅಷ್ಟೇ ಅಲ್ಲದೇ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಬೆಂಗಳೂರಿನ ಮೆಜೆಸ್ಟಿಕ್‌ ನಿಲ್ದಾಣಕ್ಕೆ ತೆರಳಿ ಜನರ ಕಷ್ಟ ಆಲಿಸಿದರು. ಅವರಿಗೆ ನೆರವಾಗಲು ಕಾಂಗ್ರೆಸ್‌ ಪಕ್ಷದಿಂದ 1 ಕೋಟಿ ರೂ ನೆರವು ಘೋಷಿಸಿದರು. ಇದರಿಂದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರಿಗೆ ತೀವ್ರ ಮುಜುಗರ ಉಂಟಾಯಿತು. ಕೂಡಲೇ ಮೂರು ದಿನಗಳ ಕಾಲ ಕಾರ್ಮಿಕರಿಗೆ ಉಚಿತ ಪ್ರಯಾಣ ಎಂದು ಘೋಷಿಸಿದರು!

ಕಾಂಗ್ರೆಸ್‌ ಪಕ್ಷದಿಂದ ಕೆಎಸ್‌ಆರ್‌ಟಿಸಿ ಎಂಡಿಗೆ ಒಂದು ಕೋಟಿ ರೂಗಳ ಚೆಕ್‌ ಹಸ್ತಾಂತರವಾಗುತ್ತಿದ್ದಂತೆಯೇ ಅತ್ತ ಮುಖ್ಯಮಂತ್ರಿ ಯಡಿಯೂರಪ್ಪನವರು “ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಇಂದಿನಿಂದ 3 (ಮಂಗಳವಾರ) ದಿನಗಳವರೆಗೆ ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆ.ಎಸ್.ಆರ್‌.ಟಿ.ಸಿ ಬಸ್‍ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನನ್ನ ಕಳಕಳಿಯ ಮನವಿ ಯಾವುದೇ ಬಸ್ ನಿಲ್ಧಾಣಗಳಲ್ಲಿ ಯಾರು ನೂಕುನುಗ್ಗಲು ಮಾಡಬಾರದು. ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ” ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಕೇವಲ ಎರಡು ದಿನಗಳ ಹಿಂದಷ್ಟೇ ಕಾರ್ಮಿಕರಿಂದ ಮೂರು ಪಟ್ಟು ಹಣ ವಸೂಲಿಗ ಮುಂದಾಗಿದ್ದ ಸರ್ಕಾರ ಕೂಡಲೇ ಉಚಿತ ಎಂದು ಘೋಷಿಸುವಂತಾಗಿದೆ. ದುಪ್ಪಟ್ಟು ಬಸ್‌ ದರಕ್ಕೆ ಪ್ರಜ್ಞಾವಂತರ, ಕಾರ್ಮಿಕರ, ವಿರೋಧ ಪಕ್ಷಗಳ ತೀವ್ರ ಒತ್ತಡ ಬಂದ ನಂತರ ಅದರಲ್ಲೂ ಕಾಂಗ್ರೆಸ್‌ ಪಕ್ಷ ಒಂದು ಕೋಟಿ ರೂ ನೆರವು ನೀಡಿದ ನಂತರ ಸರ್ಕಾರ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿದೆ.

Please follow and like us:
error