​ಎನ್. ಪದ್ಮವರ್ದನ್ ; ಹೋರಾಟದ ಕೆಚ್ಚಿನ ಸೀನಿಯರ್ ಇನ್ನಿಲ್ಲ

Raichur : ಎನ್.ಪದ್ಮವರ್ದನ್, ವಕೀಲರು, ಸಂಘಟನೆಗಳ ಒಡನಾಡಿ, ಪ್ರಗತಿಪರ ಚಿಂತಕ ನಮ್ಮನ್ನಗಲಿದ್ದಾರೆ.  ನಿನ್ನೆ‌ ರಾತ್ರಿ  10.30  ರ‌ ಸುಮಾರಿಗೆ ಹೃದಯಾಘಾತ ಸಂಭವಿಸಿದೆ.

ಕಳೆದ 20  ವರ್ಷಗಳ ಒಡನಾಟವಿದ್ದ ನನ್ನಂತಹ ಎಷ್ಟೋ ಜನ ಸಾಮಾಜಿಕ ಕಾರ್ಯಕರ್ತರುಗಳು ಇವರ ಸಾವನ್ನು ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ತಂದೆಯ  ಕೊನೆ ಉಸಿರು ಎಳೆಯುವಾಗ ಎದುರಿಗಿದ್ದ ಮಗಳು ಮೇಘನಾಳ ಬಿಕ್ಕಳಿಕೆಯ ಅಳು,  ಪತ್ನಿ ಪದ್ಮಾ ಮೇಡಂರ ದುಃಖದ ಆರ್ತನಾದ, ಅಪ್ಪನ ಮಾತು ಮೀರದ ಕೌಸಲ್ಯಳ ಮೌನದ ಅಳು‌, ಇವರನ್ನಲ್ಲದೆ ನಮ್ಮೆಲ್ಲರನ್ನೂ ಕಾಡುತ್ತಿದೆ ಅನಾಥತೆ……

ಜನರ ಪರವಾದ ವಕೀಲರೆಂದರೆ ಪದ್ಮವರ್ದನ್. ಬಡವರು ಇವರ ಬಳಿ ಹೋದರೆ 10ರೂ ಕೊಡದೆ ಕೇಸು ಕೊಡಬಹುದಿತ್ತು…ಕೇಸು ನಡೆಸಬಹುದಿತ್ತು.

ಸಾಮಾಜಿಕ ಹೋರಾಟಗಾರರು, ದಲಿತ‌ ಚಳವಳಿ, ಶೋಷಿತ ಸಮುದಾಯಗಳ ಪರವಾಗಿ ಯಾರಾದರೂ ಧ್ವನಿ‌ ಎತ್ತಿದರೆ ಅವರ ಪರವಾಗಿ ನಿಲ್ಲದೇ ಇರುತ್ತಿರಲಿಲ್ಲ ಪದ್ಮವರ್ಧನ್. ಇವರು ಸೀನಿಯರ್  ಅಡ್ವೊಕೇಟ್ ಆಗಿದ್ದರೂ ಬರೀ ಕೋರ್ಟ್ ನಲ್ಲಿ ನ್ಯಾಯ ಸಿಗುವುದಿಲ್ಲ, ಬೀದಿ ಹೋರಾಟಗಳನ್ನು  ನಡೆಸಬೇಕೆನ್ನುವ ಅ್ಯಕ್ಟಿವಿಸ್ಟ್ ಸಹ ಆಗಿದ್ದರು.

1999 ರ ಕಾಲಘಟ್ಟ. ಪೊಲೀಸರು ರಾಯಚೂರಿನಲ್ಲಿ ನಡೆಯುತ್ತಿದ್ದ ನಕ್ಸಲ್ ಚಳವಳಿಯನ್ನು ಹತ್ತಿಕ್ಕಲು ಸರ್ಕಾರದ ವಿರುದ್ದ ಪಿತೂರಿ ನಡೆಸಿದರೆಂದು ಅರೋಪಿಸಿ ನೂರಾರು ಜನರನ್ನು ಜೈಲಿಗೆ ಕಳುಹಿಸುತ್ತಿತ್ತು ಆಗಿನ ಪೋಲಿಸರ ಮೂಲಕ ಅಂದಿನ ಸರ್ಕಾರ. ವಯಸ್ಸಾದ ಮುದುಕರು, ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೂ ರಾಜದ್ರೋಹ ಕೇಸುಗಳು, ಬಾಂಬು, ಬಂದೂಕು ಹೊಂದಿದ್ದರೆಂಬ ಸುಳ್ಳು ಕೇಸುಗಳು, ದಲಿತ ಚಳುವಳಿಗಾರರ ಮೇಲೆ ದಾಖಲಾಗುತ್ತಿದ್ದ ಕೇಸುಗಳ ವಿರುದ್ದ  ಹೋರಾಟಗಾರರ ಪರವಾಗಿ ವಕಾಲತ್ ವಹಿಸುತ್ತಾ ಜೀವಾಳವಾಗಿದ್ದರು. ಪೊಲೀಸ್‌ರ  ಕೇಸು, ಕಿರುಕುಳಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ  ನಮ್ಮಗಳ ಪರವಾಗಿ ವಕಾಲತ್ ವಹಿಸಲೂ ಕೆಲ ವಕೀಲರು ಹಿಂಜರಿಯುತ್ತಿದ್ದರು. ಅಂತಹ ಗಳಿಗೆಯಲ್ಲಿ ನಮ್ಮಂತಹವರನ್ನು ಕೈಹಿಡಿದ ಸಹೃದಯಿ.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಮೇಲೆ ದಾಖಲಿಸಿರುವ ಕೇಸಿನ ವಿರುದ್ದ ವಕಾಲತ್ ಸಹ ಇವರೇ  ವಹಿಸಿಕೊಂಡಿರುವುದು ತಿಳಿದೇ ಇದೆ.

ಈ ದೇಶದಲ್ಲಿ ಕ್ರಾಂತಿ ಎಂಬ ಬದಲಾವಣೆ ಬೇಕು. ಎಲ್ಲಾ ಜಾತಿಯ ಬಡವರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ, ಹಕ್ಕುಗಳು ಸಿಗುವಂತಾದಾಗಲೇ ಬದಲಾವಣೆಯೆಂದಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಸಂವಿಧಾನ ಒಂದು ಜಾತಿಗೆ ಸೀಮಿತಗೊಳ್ಳದೆ, ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕಾದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆಯೆಂದು ನವೆಂಬರ್ 26ರಂದು  ಸಿರಿವಾರ ಪಟ್ಟಣದಲ್ಲಿ ಸಂವಿಧಾನ ಸಮರ್ಪಣಾ ದಿನದಂದು ಮಾಡಿದ ಭಾಷಣವೇ ಅವರ ಕೊನೆ ಸಾರ್ವಜನಿಕ ಮಾತಾಗಿತ್ತು. 

ಸ್ವಂತ ಜೀವನದ ಬಗ್ಗೆ ಎಂದೂ ಸೀರಿಯಸ್ಸಾಗಿ ಪರಿಗಣಿಸದೆ, ವ್ಯಕ್ತಿಗತವಾಗಿ ಯಾವ ಆಸ್ತಿಯನ್ನೂ ಹೊಂದಿಲ್ಲದಿದ್ದರೂ ಅಪಾರ ಹೋರಾಟದ ಒಡನಾಡಿಗಳು, ಸ್ನೇಹಿತರೇ ಇವರ ಸಂಪತ್ತು. 

ಕುಡಿತ ಎಂಬ ಚಟದಿಂದ ವಿಮೋಚನೆಗೊಳ್ಳಲಾಗದೆ, ಸಂಸಾರದ ಎಡರುತೊಡರುಗಳನ್ನು ಬಿಡಿಸಕೊಳ್ಳಲಾಗದ ವಿಕ್ನೆಸ್ ಪದ್ಮವರ್ಧನ್ ಸರ್ ರವರನ್ನು  ಕೊನೆಯವರೆಗೂ ಕಾಡಿಸಿತು. ಈ ಎರಡು ವಿಚಾರದಲ್ಲಿ ವಿಕ್ನೆಸ್ ನಿಂದ ಹೊರ ಬಂದಿದ್ದರೆ ಅತ್ಯಂತ ಕಷ್ಟದಲ್ಲಿ ಬದುಕಿ ಸ್ವಾಭಿಮಾನದ ಜೀವನ ಕಲಿಸಿದ ಇವರ  ತಾಯಿ, ಜೀವನ ಸಂಗಾತಿ ಅತ್ಯಂತ ಹೆಚ್ಚು ಖುಷಿಪಟ್ಟುಕೊಳ್ಳುತ್ತಿದ್ದರೆಂದು ಅನಿಸುತ್ತಿತ್ತು. ದುರಂತ ಎಂದರೆ ಮಗನ ಸಾವನ್ನು ತಾಯಿ ನೋಡಬೇಕಾದ ಸನ್ನಿವೇಶ ಮನಕಲಕುತ್ತಿದೆ. 

ನಮ್ಮೊಡನೆ ಇನ್ನಷ್ಟು ದಿನಗಳು ಇರಬೇಕಾದ ಜೀವ, ಇದ್ದಿದ್ದರೆ ಹೋರಾಟಕ್ಕೆ ಕೆಚ್ಚಿನೊಂದಿಗೆ, ದ್ವನಿಯಾಗುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.

-ಕುಮಾರ್ ಸಮತಳ.

Please follow and like us:
error