ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೊರಗಿನಿಂದ ಬಂದವರಿಂದಲೇ ಈ ಸೋಂಕು ಹರಡುತ್ತಿದೆ. ಇದನ್ನು ನಿಯಂತ್ರಿಸಲು ಹೋಂ ಕ್ವಾರಂಟೈನ ಬಿಗಿಗೊಳಿಸಲು ಸೂಚಿಸಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಪ್ರತಿವಾರಕ್ಕೊಮ್ಮೆ ಸಭೆ ನಡೆಸುತ್ತಿದ್ದೇನೆ. ಕಿಮ್ಸ್ಗೂ ಕೂಡ ಭೇಟಿ ನೀಡಿದ್ದೇನೆ. ಅಲ್ಲಿ ಮತ್ತೊಂದು ಲ್ಯಾಬ್ ಘಟಕ ಉದ್ಘಾಟನೆ ಮಾಡಲಾಗಿದೆ. ಮೊದಲಿನಂತೆ ಈಗ ತಪಾಸಣಾ ವರದಿಗಳು ಬರುವುದು ತಡವಾಗುತ್ತಿಲ್ಲ. ಧಾರವಾಡ ಜಿಲ್ಲೆ ಅತೀ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಿದ ಜಿಲ್ಲೆಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ ಎಂದರು.
ಪಾಸಿಟಿವ್ ಕೇಸ್ ಬಂದ ಏರಿಯಾಗಳಲ್ಲμÉ್ಟೀ ಲಾಕ್ಡೌನ್ ಮಾಡಲಾಗುತ್ತಿದೆ. ಜನ ಹೆದರುವ ಅಗತ್ಯವಿಲ್ಲ. ಆದರೆ, ಜಾಗೃತವಾಗಿರಬೇಕು. ನಾಳೆ ಹುಬ್ಬಳ್ಳಿಯಲ್ಲಿ ಮಾಸ್ಕ್ ಡೇ ಆಚರಣೆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ಲ್ಯಾಂಡ್ಸೀಲಿಂಗ್ ಕಾಯ್ದೆ ಪ್ರಕಾರ ಒಂದು ಕುಟುಂಬಕ್ಕೆ 108 ಎಕರೆ ಭೂಮಿ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಈ ಮಿತಿಯು 58 ಎಕರೆ ಜಮೀನಿಗೆ ಸೀಮಿತವಾಗಿತ್ತು. ಇದರಿಂದ ಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದಾಗಿದೆ. ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಪಡೆದು ಬಳಕೆಯಾಗದ ಜಮೀನುಗಳು ಮರಳಿ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.