ಹೊಟ್ಟೆಗಾಗಿ ನಿತ್ಯವೂ ಹುಟ್ಟುಹಾಕುವವರು…


– ಕಳಕೇಶ ಡಿ ಗುಡ್ಲಾನೂರ

ತುಂಬಿಹರಿವ ತುಂಗಭದ್ರೆಯ ತೀರದಗುಂಟ ತೊಳ್ಬಲವನ್ನೇ ನಂಬಿ ಹೊಟ್ಟೆಗಾಗಿ ನಿತ್ಯವೂ ಹರಿಗೋಲಿಗೆ ಹುಟ್ಟುಹಾಕುತ್ತಾ ಮೀನಿಗಾಗಿ ಬಲೆಬೀಸಿ ಬದುಕನ್ನು ಹಸನವಾಗಿಸಿಕೊಳ್ಳಲು ಹಾತೊರೆಯುವ ಕೊಪ್ಪಳ ಜಿಲ್ಲೆಯ ಕಾತರಕಿಯ ಹೊನ್ನಾಳಪ್ಪ-ರಂಗಮ್ಮನವರು ದಣಿವರಿಯದ ದಂಪತಿಗಳು!

ಅರವತ್ತರ ಆಸುಪಾಸಿನ ಇವರೊಂದಿಗೆ ದಿನಕ್ಕೆ ಎಷ್ಟು ಮೀನು ಸಿಗ್ತಾವ? ಎಷ್ಟು ದುಡಿತೀರಿ? ಅಂತ ಮೆಲ್ಲಗೆ ಮಾತಿಗಿಳಿದೆ, ‘ನೋಡ್ರೀ ಯಪ್ಪಾ ನಮ್ದೇನ್ ಕೇಳ್ತಿರಿ ಸಿಕ್ಕರೆ ಶಿಕಾರಿ; ಇಲ್ಲ ಅಂದ್ರ ಬಿಕಾರಿ! ಒಮೊಮ್ಮೆ ಗಾಳಿ ಕಡಿಮಿ ಇದ್ದಾಗ ಹೊಳಿ ಇಳ್ದಾಗ ನೀರ ಹತ್ತಿಬಿದ್ದಾಗ ಚ್ವಲೋ ಸಿಗ್ತಾವ ಮೀನು, ಕೆಲವೊಮ್ಮೆ ಹೈರಣಾಗಿ ಬರಿಗೈಲೇ ಮನೆದಾರಿ ಹಿಡಿತೀವಿ ಏನ್ ಮಾಡೋದು ಭಂಡ ಹೊಟ್ಟಿ ಐತಲ್ರೀ. ಹೊಳೆ ಇದ್ದಾಗ ನೀರ್ಡಾತೀವಿ ಇಲ್ದಾಗ ಕೂಲಿ ಕೆಲಸಕ್ಕ; ಅಲಸಂದಿ ಬುಡ್ಡಿ ಬುಡಸಾಕ ಹೊಕ್ಕಿವಿ. ಎನ್ನತ್ತಾರೆ.

ಹರಿಗೋಲಿನೊಳಗೆ ಹರಸಾಹಸ :
ಬಿದಿರಿನಿಂದ ಮಾಡಿದ ಸಣ್ಣ ಹರಿಗೋಲು/ ಪುಟ್ಟಿಯೊಳಗೆ ಬಲೆಯ ಗಂಟು ತುಂಬಿಕೊಂಡು ಅರ್ಧಶತಮಾನದಿಂದ ದಿನಕ್ಕೆರಡು ಹೊತ್ತು ಮೀನಿಗಾಗಿ ಸದಾ ತುಂಗಭದ್ರೆಯ ಅಲೆಯೊಳಗೆ ಅಲೆಯುವ ಇವರು ಬಿರುಗಾಳಿ ಬೀಸಿ ಪುಟ್ಟಿ ಬುಡಮೇಲಾಗುವ ‘ಬೀತಿ’ ಬಲ್ಲ ಅನುಭವ ತಜ್ಞರು. ಜೊತೆಗೆ ಅಪಾಯದಿಂದ ಪಾರುಗುವ ಕೆಲವು ತಮ್ಮದೆ ತಂತ್ರಗಳನ್ನು ಸಿದ್ಧಿಸಿಕೊಂಡಿದ್ದಾರೆ. ಈಜುಬಾರದಿದ್ದರು ಗಂಡನಿಗೆ ಜೀವಬಲತುಂಬುವ ರಂಗಮ್ಮ ನಿಜಾರ್ಥದ ಗಟ್ಟಿಗಿತ್ತಿ!
ನದಿಯ ನಡುವೆ ಇರುವಾಗ ಜಿಟಿಜಿಟಿ ಮಳೆ ಶುರುವಾದರೆ ಸರಸರನೇ ಹುಟ್ಟುಹಾಕಿ ಸಮೀಪದ ದಡಸೇರಿ ಬಚಾವ್ ಆಗುತ್ತಾರೆ.
‘ ಗಾಳಿ ಬಿಸಿದತ್ತ ಹುಟ್ಟು ಹಾಕಿದರೆ
ಹರಿಗೋಲು ಸಾಗಬಹುದಾದರು ಗುರಿನಿಲುಕದಯ್ಯ ‘ ಎಂಬಂತೆ, ಕೆಲವೊಮ್ಮೆ ಮುಸ್ಸಂಜೆಯ ಮಾರುತಕ್ಕೆ ತತ್ತರಸಿ ತಾವು ಮರಳಿ ತಲುಪಬೇಕಾದ ತಾಣ ಸಿಗದೆ ತಾಪತ್ರಯದಿಂದ ದೂರದೂರಿನ ದಡಸೇರಿ ಕರಾಳ ರಾತ್ರಿಗಳನ್ನು ಕಳೆದಿದ್ದಾರೆ. ಮೊಬೈಲ್ ಇಲ್ಲದ ಆ ಕಾಲದಲ್ಲಿ ಸರಿಯಾದ ಸಮಯಕ್ಕೆ ಮೀನುಗಾರರು ಹೊಳೆಯಿಂದ ಬಾರದಿದ್ದರೆ ಮನೆಮಂದಿಯಲ್ಲ ಹೌವಾರಿ ಎಲ್ಲಿ ಹೋದ್ರೇನೋ? ಏನ್ ಆವಂತರವಾಗಿದಿಯೋ? ಏಲ್ಲಿ ಸಿಕ್ಕೊಂಡು ಶಿವನಪಾದ ಸೇರಿದ್ರೆನೋ? ಅಂತ ಬಗೆಬಗೆಯ ಗುಮಾನಿ ಹಬ್ಬುವುದನ್ನು ಸ್ಮರಿಸಿತ್ತಲೆ ಕಳೆದ ವರ್ಷ ಮೀನು ಹಿಡಿಯಲ್ಹೋಗಿ ನೀರುಪಾಲಾದ ಪಿಂಜಾರ್ ಹುಡ್ಗನ ನೆನೆದು ಈ ದಂಪತಿಗಳ ಕಣ್ಣಾಲಿಗಳು ಹನಿಗೊಂಡವು.

ಬಲೆಯ ಹಿಂದಿನ ಬವಣೆ:
ಕೆಜಿಗೆ ಏಳು ನೂರು ರೂಪಾಯಂತೆ ಇಪ್ಪತ್ತು ಸಾವಿರದ್ದು ಬಲೆ ಹಾಗೂ ಐದಾರು ಸಾವಿರ ಖರ್ಚುಮಾಡಿ ಬಿದರಿನಪುಟ್ಟಿ, ಅದು ತೂತು ಬಿದ್ದರೆ ಹಚ್ಚಲು ಡಾಂಬರು ಡಬ್ಬಿ, ವರ್ಷಕ್ಕೆರಡು ಹುಟ್ಟು ತಗೊಂಡು ಬೆವರು ಸುರಿಸಿ ದುಡಿಯುವ ಇವರು ದಲ್ಲಾಳಿಗಳಿಗೆ ಕೆಜಿಗೆ ಬರೀ 60 ರೂಪಾಯಿ ಯಂತೆ ಮೀನು ಮಾರುತ್ತಾರೆ!. ಕೆಲವೊಮ್ಮೆ ಹೊಸದಾಗಿ ಖರೀದಿಸಿದ ಬಲೆಯು ಸಹ ಕಟ್ಟಿಗೆ/ದೊಂಟಿಗೆ ಸಿಲುಕಿಕೊಂಡು ಬೇಗನೆ ಹರಿದು ಹಾಳಾಗಿ ಹೋದ ಉದಾಹರಣೆಗಳಿವೆ. ಆಗಾಗ ಸುತ್ತಲೂರಿನ ಮೀನುಗಾರರೊಂದಿಗೆ ‘ಮೀನಿಗಾಗಿ’ ಪೈಪೋಟಿ ಕೂಡ ಏರ್ಪಡುತ್ತದೆ.

ದಡ ಸೇರಿಸು ತಂದೆ :
ಕೊಪ್ಪಳ ಜಿಲ್ಲೆಯ ತುಂಗಭದ್ರೆಯ ಹೊಳೆಸಾಲಿನ ಕಾತರಕಿ ಗುಡ್ಲಾನೂರ ಗೊಂಡಬಾಳ ಕರ್ಕಿಹಳ್ಳಿ ಬೇಳೂರು ನೀರಲಗಿ ಮತ್ತೂರು ನಿಲೋಗಿಪುರ ಸೇರಿದಂತೆ ಮುನಿರಾಬಾದ್ ಡ್ಯಾಂನವರೆಗಿನ ನದಿತೀರದ ಗ್ರಾಮಗಳ ಮೀನುಗಾರರು ‘ಗಂಗಾದೇವಿ’ ಎನ್ನುವ ಸಂಘ ರಿಜಿಸ್ಟಾರ್ ಮಾಡಿಸಿಕೊಂಡಿದ್ದಾರಂತೆ.
“ಎರಡು ವರ್ಷದ ಹಿಂದ ಪ್ಲಾಸ್ಟಿಕ್ ಪುಟ್ಟಿ ಕೊಟ್ಟಾರ ಅವು ನೆಡೆಗಿಲ್ಲ ನಮ್ಗ್ ಬಿದ್ರಿನವು ಬೇಕು, ಏನಾರ ನಮಗೀಟ್ ಸಹಾಯ ಮಾಡ್ಬೇಕು, ಸರಕಾರದಿಂದ ವರ್ಷಕೊಮ್ಮೆ ಹೊಸ ಪುಟ್ಟಿ-ಬಲೆ ಕೊಟ್ರ್ ಹೆಂಗರ ದುಡಕಂತ ದಡ ಸೇರತೀವಿಯಪ್ಪ “ ಎನ್ನುವ ಕೊಪ್ಪಳದ ಕಾತರಕಿಯ ರಂಗಮ್ಮನ ಈ ಮಾತು ಇಡೀ ಬಡಬೆಸ್ತರ ಒಡಲನುಡಿಯಾಗಿದೆ. ಒಟ್ಟಾರೆ ನಾಡಿನುದ್ದಕ್ಕೂ ಹೊಳೆಗುಂಟ ಹೊಟ್ಟೆಗಾಗಿ ನಿತ್ಯವೂ ಹುಟ್ಟುಹಾಕುತ್ತಾ ಬಲೆಬಿಸುವವರಿಗೆ ನೆಲೆ-ಬೆಲೆ ಸಿಗುವಂತಾಗಲಿ.

Please follow and like us:
error