ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಿಸಿ: ಆರ್. ಗಿರೀಶ್


ಹಾಸನ,: ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಉತ್ಸವ ಪ್ರಾರಂಭವಾಗಿದೆ. ಸೆಪ್ಟಂಬರ್ 24ರೊಳಗೆ ರೈತರ ಮುಖಾಂತರ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ಸಮೀಕ್ಷೆಯನ್ನು ಅಪ್ಲೋಡ್ ಮಾಡಿಸುವ ಮೂಲಕ ನಿರ್ಧಿಷ್ಟ ಗುರಿ ತಲುಪಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು 2020-21ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ತಾಲ್ಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 15 ಲಕ್ಷದ 16 ಸಾವಿರ ಭೂಮಿ ತಾಕುಗಳಿದ್ದು, ಇದುವರೆಗೂ 71 ಸಾವಿರ ಭೂಮಿ ತಾಕುಗಳನ್ನು ಅಪ್ಲೋಡ್ ಮಾಡಿದೆ ಹಾಗಾಗಿ ಎಲ್ಲಾ ತಾಲ್ಲೂಕುಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕರಪತ್ರಗಳನ್ನು ಹಂಚುವ ಮೂಲಕ ರೈತರಿಗೆ ಅರಿವು ಮೂಡಿಸಬೇಕು ಎಂದರು.
ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿ.ಡಿ.ಓ. ಗಳು ರೈತರ ಸಭೆ ನಡೆಸಿ ಪಿ.ಆರ್. ಗಳ ಮೂಲಕ ಬೆಳೆ ಸಮೀಕ್ಷೆ ಆಪ್‍ನಲ್ಲಿ ಹೇಗೆ ಅಪ್ಲೋಡ್ ಮಾಡಬೇಕು ಮತ್ತು ಹೇಗೆ ಬಳಸಬೇಕು ಎಂಬುದರ ಕುರಿತು ಪೂರ್ಣ ಮಾಹಿತಿ ನೀಡುವಂತೆ ಕ್ರಮ ವಹಿಸಿ ಎಂದು ತಹಶಿಲ್ದಾರರಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಬೆಳೆ ಸಮೀಕ್ಷೆ ಮಾಡಲು ನೆಟ್‍ವರ್ಕ ಸಮಸ್ಯೆ ಇರುವ ಸ್ಥಳಗಳಲ್ಲಿನ ರೈತರನ್ನು ನೆಟ್‍ವರ್ಕ್ ಸಿಗುವಂತಹ ಸ್ಥಳಗಳ ರೈತರೊಂದಿಗೆ ಕರೆದು ಬೆಳೆ ಸಮೀಕ್ಷೆ ಆಪ್ ಬಳಸುವ ಕುರಿತು ಪ್ರಾತ್ಯೇಕ್ಷಿಕೆ ನೀಡುವ ಮೂಲಕ ಎಲ್ಲಾ ರೈತರಿಗೂ ತಿಳಿಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ತಹಶಿಲ್ದಾರರು ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಜೊತೆಗೂಡಿ ಸಭೆ ನಡೆಸಿ ಬೆಳೆ ಸಮೀಕ್ಷೆ ಆಪ್ ಬಳಸುವ ಕುರಿತು ಮಾಹಿತಿ ನೀಡಿ ಹಾಗೂ ಆ.29 ರೊಳಗೆ ಬೆಳೆ ಸಮೀಕ್ಷೆಯಲ್ಲಿ ಶೇ.20 ರಷ್ಟು ಅಭಿವೃದ್ಧಿ ಸಾಧಿಸಬೇಕು. ಹಾಗಾಗಿ ಹೆಚ್ಚಿನ ಪರಿಶ್ರಮದೊಂದಿಗೆ ತುರ್ತಾಗಿ ಅಪ್‍ಲೋಡ್ ಮಾಡಿಸುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಹಾನಿಯಿಂದ ಈಗಾಗಲೇ 4,600 ಹೆಕ್ಟೇರ್ ನಲ್ಲಿ ಬೆಳೆಹಾನಿ ಹಾಗೂ ಕಾಫಿ ಸೇರಿದಂತೆ 7 ಸಾವಿರ ಹೆಕ್ಟೇರ್ ನಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಕಾಫಿ ಬೋರ್ಡ್ ಹಾಗೂ ತೋಟಗಾರಿಕೆ ಇಲಾಖೆಯವರು ತಂಡವಾಗಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಫಲಾನುಭವಿಯೊಂದಿಗೆ ಹಾನಿಯಾಗಿರುವ ಪ್ರದೇಶದ ಭಾವ ಚಿತ್ರ ತೆಗೆದು ಸಂಪೂರ್ಣ ಮಾಹಿತಿಯನ್ನು ಅಪ್‍ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ಜಂಟಿ ಕೃಷಿ ನಿರ್ದೇಶಕರಾದ ರವಿಕುಮಾರ್, ತಹಶೀಲ್ದಾರರಾದ ಶಿವಶಂಕರಪ್ಪ, ಸಂತೋಷ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.


Please follow and like us:
error