ಹಿಟ್ನಾಳ ಟೋಲ್‍ಗೇಟ್ ಬಳಿ ರೈತಪರ ಸಂಘಟನೆಗಳ ಪ್ರತಿಭಟನೆ

ರೈತ ಇಲ್ದಿದ್ರೆ ಹೊಟ್ಟೆಗೆ ಏನ್ ತಿಂತಿರಾ?

-2 ಗಂಟೆಗೂ ಅಧಿಕ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತ

-ಅನಾಮತ್ತಾಗಿ ಹೋರಾಟಗಾರರನ್ನು ಎತ್ತಿ ವಾಹನದೊಳಗೆ ಹಾಕಿದ ಪರಾಕ್ರಮಿ ಪೊಲೀಸರು

-ಮಸೂದೆಗಳ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ


ಕೊಪ್ಪಳ: ಕೃಷಿಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯ ವಿವಿಧ ರೈತಪರ ಸಂಘಟನೆಗಳು ತಾಲೂಕಿನ ಹಿಟ್ನಾಳ ಟೋಲ್‍ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ -13 ರಸ್ತೆಯನ್ನು 2 ಗಂಟೆಗೂ ಅಧಿಕ ಕಾಲ ತಡೆದು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಾರ್ಟಿ, ಕರ್ನಾಟಕ ರೈತ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಿಐಟಿಯು,
ಎಐಡಿವೈಓ, ರೈತ ಸಂಘಟನೆಗಳ ಸಮನ್ವಯ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಜಂಟಿಯಾಗಿ ತಾಲೂಕಿನ ಹಿಟ್ನಾಳ ಟೋಲ್‍ಗೇಟ್ ಬಳಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೂ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ-16 ರಸ್ತೆಯ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೆಲ ವಾಹನ ಸವಾರರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ‌ ನಡೆಯಿತು. ಸಾರ್ವಜನಿಕರು ರೈತರ ಹೋರಾಟವನ್ನು ಬೆಂಬಲಿಸಬೇಕು ಎಂದು ಪ್ರತಿಭಟನಾನಿರತ ರೈತರು ಹರಿಹಾಯ್ದರು.

ಕೇಂದ್ರ ಸರಕಾರ ರೈತರ ಸಮಾಧಿ ಮೇಲೆ ಕೃಷಿ ಕಾಯ್ದೆ ಜಾರಿಗೊಳಿಸುವ ಹಠಮಾರಿತನ ಬಿಡಬೇಕು. ಜನಸ್ನೇಹಿ, ರೈತಪರ, ಕಾರ್ಮಿಕರ ಹಿತ ಕಾಪಾಡುವ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ವರಸೆ ಬದಲಿಸಿದೆ. ರೈತ ಹೊಲದಲ್ಲಿ ಬೆಳೆ ಬೆಳೆಯದಿದ್ದರೆ ಹೊಟ್ಟೆಗೆ ಏನು ತಿಂದು ಬದುಕುತ್ತಿರಿ ಎಂದು ಸರಕಾರದ ನಡೆ ಖಂಡಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೇಂದ್ರ ಸರ್ಕಾರವು ರೈತ ವಿರೋಧಿಯಾದ ಮೂರು ಕರಾಳ ಕಾಯ್ದೆಗಳನ್ನು ಜಾರಿ ಮಾಡಿದೆ. ಇದರಿಂದ ರೈತರಿಗೆ ದೊಡ್ಡ ಅಪಾಯವು ಎದುರಾಗಲಿದೆ. ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಹಲವು ದಿನಗಳಿಂದ ಮಳೆ, ಬಿಸಿಲು, ಚಳಿ ಎನ್ನದೇ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದಾರೆ.

ಗಣರಾಜ್ಯೊತ್ಸವದ ದಿನದಂದು ರೈತರು ಹೋರಾಟ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರವು ಕೆಂಪು ಕೋಟೆ ಮೇಲೆ ಬಾವುಟ ಹಾರಾಡಿಸಿದರು ಎನ್ನುವ ಕಾರಣವಿಟ್ಟು ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಸ್ತೆಗಳಿಗೆ ಮೊಳೆ ಹೊಡೆಯಿತು. ಈ ಬಗ್ಗೆ ಕೆನಡಾ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದು ರೈತರ ಪರ ಹಲವರು ಧ್ವನಿ ಎತ್ತಿದ್ದಿರಿಂದ ತಮ್ಮ ಮಾನ ಉಳಿಸಿಕೊಳ್ಳಲು ರಸ್ತೆಯ ಮೇಲೆ ಹೊಡೆದಿದ್ದ ಮೊಳೆ
ತೆಗೆಸಿ ಹಾಕಿಸಿದೆ. ಪ್ರಸ್ತುತ ದಿನದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿವೆ. ಸರ್ಕಾರವು ರೈತರ ಸಮಸ್ಯೆಯನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಅಗತ್ಯವಿಲ್ಲ. ಅವರಿಗೆ ವೈಜ್ಞಾನಿಕ ಬೆಲೆ ಕೊಟ್ಟರೆ ಅನ್ನದಾತ ಸಮುದಾಯ ಉಳಿಯಲಿದೆ. ಇಲ್ಲದಿದ್ದರೆ ಆಹಾರ ಭದ್ರತೆ ಕೊರತೆಯು ಎದುರಾಗಲಿದೆ. ಇಂದು ರೈತ ಸಮೂಹ ಸಿಡಿದೆದ್ದಿದೆ. ದೆಹಲಿ ಮಟ್ಟದಲ್ಲಿ ದೊಡ್ಡ ಹೋರಾಟಕ್ಕೆ ನಿಂತಿದೆ.
ಯಾವುದೇ ಸರ್ಕಾರಗಳು ಹೋರಾಟಗಳಿಗೆ ಸ್ಪಂದನೆ ಮಾಡಬೇಕು. ಆದರೆ ಮೋದಿ ಅವರು ತಮ್ಮ ಮನ್ ಕೀ ಬಾತ್‍ನಲ್ಲಿ ರೈತರ ಸಮಸ್ಯೆಯ ಬಗ್ಗೆ ಪ್ರಸ್ತಾಪವೂ ಮಾಡಿಲ್ಲ. ಪ್ರತಿಭಟನಾ ಸ್ಥಳಕ್ಕೆ ಭೇಟಿಯನ್ನೂ ನೀಡಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂದು ದೇಶವನ್ನು ಬಿಜೆಪಿ ಆಳುತ್ತಿಲ್ಲ. ಬದಲಾಗಿ ಆರ್‌ಎಸ್‍ಎಸ್ ಸಂಘ ಪರಿವಾರವು ದೇಶದ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್‍ಸಾಬ ಮೂಲಿಮನಿ, ಕರ್ನಾಟಕ ರೈತ ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ್, ಶಿವಪ್ಪ ಮುಂಗೋಲಿ, ಎಐಡಿವೈಓನ ಶರಣು ಪಾಟೀಲ್, ಆಮ್ ಆದ್ಮಿ ಪಾರ್ಟಿಯ ಹುಸೇನ ಸಾಬ ಗಂಗನಾಳ, ಶರಣಪ್ಪ ಸಜ್ಜಿಹೊಲ, ಚನ್ನಬಸವ ಜಕ್ಕಿನ್,ಗಣೇಶ ಕಾಟಾಪೂರ, ದೊಡ್ಡಬಸಪ್ಪ, ಗಣೇಶ ಜಂತಕಲ್ ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೆದ್ದಾರಿ ತಡೆ ಮಾಡಿದರು.

ಹಿಟ್ನಾಳ ಟೋಲ್ ಗೇಟ್ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಬರೊಬ್ಬರಿ 2 ಗಂಟೆಗಳ ಕಾಲ ಹೆದ್ದಾರಿ ರಸ್ತೆ ತಡೆ ಮಾಡಿ ರೈತ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಮೋದಿ ವಿರುದ್ದ ದಿಕ್ಕಾರ ಕೂಗಿದರು. ಪೊಲೀಸರು ಪ್ರತಿಭಟನಾ ನಿರತರೆಲ್ಲರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ರಸ್ತೆಯಲ್ಲಿ ಮಲಗಿ ಪ್ರತಿಭಟನೆ

ದೆಹಲಿ ಹೋರಾಟ ಬೆಂಬಲಿಸಿ ಜಿಲ್ಲೆಯ ವಿವಿಧ ರೈತ ಸಂಘಟನೆಗಳ ಮುಖಂಡರು ತಾಲೂಕಿನ ಹಿಟ್ನಾಳ ಟೋಲ್‍ಗೇಟ್ ಬಳಿ ರಾಹೆ-16 ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರು. ಬಿಸಿಲನ್ನೂ ಲೆಕ್ಕಿಸದೇ ಕೆಲ ಗಂಟೆಗಳ ಕಾಲ ಮಲಗಿಯೇ ಕೇಂದ್ರ ಸರ್ಕಾರದ ಹಾಗೂ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗಿದರು.


ಪರಾಕ್ರಮಿ ಪೊಲೀಸರು..!
ರೈತರು ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪೊಲೀಸರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ಪೊಲೀಸರ‌ ಮನವಿಗೆ ದಯವಿಟ್ಟು ತೊಂದರೆ ಕೊಡಬೇಡಿ. ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಲು ಪರವಾನಗಿ ಇದೆ ಎಂದು ಪ್ರತಿಭಟನಾಕಾರರು ಪ್ರತಿ ಮನವಿ ಸಲ್ಲಿಸಿದರು. ಕೆಲ ನಿಮಿಷಗಯ ಬಳಿಕ ಪೊಲೀಸರ ಅನಾಮತ್ತಾಗಿ ಪ್ರತಿಭಟನಾಕಾರರನ್ನು ಎತ್ತಿ ಪೊಲೀಸ್ ವಾಹನದೊಳಗೆ ಹಾಕಿ ಪರಾಕ್ರಮ‌ ಮೆರೆದರು.

Please follow and like us:
error