ಹಿಂದೂ ಧರ್ಮಕ್ಕೆ ಅಪಾಯ ಒಡ್ಡುತ್ತಿರುವ ಗೋಡ್ಸೆ ಪರಿವಾರ

 ಗಾಂಧೀಜಿಯನ್ನು ಕೊಂದ ಈ ಭಯೋತ್ಪಾದಕನನ್ನು ‘ಹಿಂದೂ ಭಯೋತ್ಪಾದಕ’ ಎಂದು ಕರೆಯುವುದು ಅಕ್ಷಮ್ಯ. ಈತ ಪ್ರತಿಪಾದಿಸುತ್ತಾ ಇದ್ದುದು ಮನುವಾದಿ ಹಿಂದುತ್ವವನ್ನು. ಈ ದೇಶದ ನಿಜವಾದ ಹಿಂದೂ ಸಂಸ್ಕೃತಿಯನ್ನು ಇವನು ಪ್ರತಿನಿಧಿಸುತ್ತಿರಲಿಲ್ಲ.

ನಾಥೂರಾಂ ಗೋಡ್ಸೆ ‘ಸ್ವಾತಂತ್ರೋತ್ತರ ಭಾರತ’ದ ಮೊತ್ತ ಮೊದಲ ಭಯೋತ್ಪಾದಕ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಇದು ಭಾರತಕ್ಕೆ ಈಗಾಗಲೇ ಗೊತ್ತಿರುವ ವಿಷಯ. ಇದನ್ನು ನಮ್ಮ ನ್ಯಾಯವ್ಯವಸ್ಥೆಯೇ ಒಪ್ಪಿಕೊಂಡು ಆತನನ್ನು ಗಲ್ಲಿಗೇರಿಸಿದೆ. ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ಬ್ರಿಟಿಷ್ ಸರಕಾರವಲ್ಲ, ಸ್ವತಂತ್ರ ಭಾರತ ಸರಕಾರ. ಆತ ಈ ದೇಶದ ಭಯೋತ್ಪಾದಕ ಎನ್ನುವುದರಲ್ಲಿ ದೇಶದ ಜನರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆ ಕುರಿತಂತೆ ಭಿನ್ನಾಭಿಪ್ರಾಯ ಇರುವವರು ಈ ದೇಶ ಪ್ರಜಾಸತ್ತೆಯ ವಿರೋಧಿಗಳು ಮಾತ್ರವಲ್ಲ, ದೇಶ ವಿರೋಧಿಗಳು ಕೂಡ. ನಾಥೂರಾಂ ಗೋಡ್ಸೆಗೆ ಗಾಂಧೀಜಿಯನ್ನು ಕೊಂದ ಕೊಲೆಪಾತಕ ಹಿನ್ನೆಲೆ ಹೊರತು ಪಡಿಸಿ, ಯಾವ ಹಿನ್ನೆಲೆಯೂ ಇಲ್ಲ. ಸ್ವಾತಂತ್ರ ಹೋರಾಟದಲ್ಲಿ ಗುರುತಿಸಿಕೊಳ್ಳದ ಈತನನ್ನು ಭಯೋತ್ಪಾದಕನನ್ನಾಗಿ ಮಾರ್ಪಡಿಸಿದ್ದು ‘ಹಿಂದೂ ಮಹಾ ಸಭಾ’ದ ಚಿಂತನೆಗಳು. ಗಾಂಧೀಜಿಯ ಕೊಲೆಯ ಬಳಿಕ ಇದಕ್ಕೆೆ ನಿಷೇಧ ಹೇರಿದ್ದೂ ಅದೇ ಕಾರಣಕ್ಕಾಗಿ.

ಹಾಗೆ ನೋಡಿದರೆ ಸ್ವಾತಂತ್ರ ಹೋರಾಟದ ಕಾಲಘಟ್ಟದಲ್ಲಿ ನೂರಾರು ಕ್ರಾಂತಿಕಾರಿಗಳು ಬ್ರಿಟಿಷರ ಶೋಷಣೆಯ ವಿರುದ್ಧ ಹೋರಾಡಿದ್ದರು. ಸ್ವಾತಂತ್ರಕ್ಕಾಗಿ ಹಿಂಸಾ ಮಾರ್ಗವನ್ನು ತುಳಿದಿದ್ದರು. ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ಹಿಂಸಾ ಹೋರಾಟಕ್ಕಿಳಿದು ಬಳಿಕ ನೇಣುಗಂಬವನ್ನೇರಿದರು. ದೇಶದ ಕುರಿತಂತೆ ಅದಮ್ಯ ಪ್ರೀತಿಯನ್ನು ಹೊಂದಿದ್ದ ಈ ಯುವಕರು ಸಾಮಾಜಿಕ ಕಾಳಜಿಯನ್ನು ಹೊಂದಿದ್ದವರು. ಅಪಾರ ಓದು ಇವರನ್ನು ಬೆಳೆಸಿತ್ತು. ಗಾಂಧೀಜಿ ಇವರು ಆರಿಸಿಕೊಂಡ ಮಾರ್ಗವನ್ನು ಒಪ್ಪಿಕೊಂಡಿರಲಿಲ್ಲವಾದರೂ, ಇವರಿಗಿರುವ ದೇಶದ ಕುರಿತ ಬದ್ಧತೆಯ ಬಗ್ಗೆ ಅವರಿಗೆ ಅಭಿಮಾನವಿತ್ತು. ದೇಶ ಇಂದಿಗೂ ಇವರ ಬಲಿದಾನಗಳನ್ನು ಸ್ಮರಿಸುತ್ತಿದೆ. ಇದೇ ಸಂದರ್ಭದಲ್ಲಿ ನಾಥೂರಾಂ ಗೋಡ್ಸೆಗೆ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ ಯಾವ ಇತಿಹಾಸವೂ ಇಲ್ಲ. ಭಾರೀ ವಿದ್ಯಾಭ್ಯಾಸವನ್ನು ಹೊಂದಿದಾತನೂ ಅಲ್ಲ. ದೇಶದ ಶ್ರೀಸಾಮಾನ್ಯರ ಪರವಾಗಿ ಚಿಂತಿಸಿದ ವ್ಯಕ್ತಿಯೂ ಈತನಲ್ಲ. ಅಸ್ಪಶ್ಯತೆ, ಬಡತನ, ಜಾತೀಯತೆ ಇವುಗಳ ವಿರುದ್ಧ ಹೋರಾಡಿದ ಚರಿತ್ರೆಯೂ ಈತನಿಗಿಲ್ಲ. ಈ ದೇಶದ ಸಾಮಾಜಿಕ, ರಾಜಕೀಯ ಬದಲಾವಣೆಗಳಿಗಾಗಿ ಹಗಲಿರುಳು ಬದುಕನ್ನು ಸವೆಸಿದ ಮಹಾತ್ಮಾ ಗಾಂಧೀಜಿ ಎಂಬ ಶಸ್ತ್ರ ರಹಿತ ವೃದ್ಧ್ದರೊಬ್ಬರನ್ನು ಕೊಂದ ಹೇಡಿ ಈತ. ಈ ದೇಶವನ್ನು ಗಾಂಧೀಜಿ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ದೇಶವಾಗಿಸಲು ಪ್ರಯತ್ನಿಸಿದ್ದೇ ಆತ ಗಾಂಧೀಜಿಯನ್ನು ಕೊಂದು ಹಾಕಲು ಕಾರಣ. ನಾಥೂರಾಂ ಗೋಡ್ಸೆಗೆ ಭಾರತ ‘ಹಿಂದೂ ರಾಷ್ಟ್ರ’ವಾಗಬೇಕಾಗಿತ್ತು. ಇಲ್ಲಿನ ಸಂವಿಧಾನ ಮನು ಆಧಾರಿತವಾಗಿರಬೇಕಾಗಿತ್ತು. ಗಾಂಧೀಜಿ ಅದಕ್ಕೆ ಬಹುದೊಡ್ಡ ಅಡ್ಡಿಯಾದರು. ಈ ಕಾರಣದಿಂದ ಹಿಂದೂಮಹಾಸಭಾದ ನಾಯಕರು ನಾಥೂರಾಂ ಗೋಡ್ಸೆಯ ವುೂಲಕ ಗಾಂಧೀಜಿಯನ್ನು ಕೊಲ್ಲಿಸಿದರು.

ಗಾಂಧೀಜಿಯನ್ನು ಕೊಂದ ಈ ಭಯೋತ್ಪಾದಕನನ್ನು ‘ಹಿಂದೂ ಭಯೋತ್ಪಾದಕ’ ಎಂದು ಕರೆಯುವುದು ಅಕ್ಷಮ್ಯ. ಈತ ಪ್ರತಿಪಾದಿಸುತ್ತಾ ಇದ್ದುದು ಮನುವಾದಿ ಹಿಂದುತ್ವವನ್ನು. ಈ ದೇಶದ ನಿಜವಾದ ಹಿಂದೂ ಸಂಸ್ಕೃತಿಯನ್ನು ಇವನು ಪ್ರತಿನಿಧಿಸುತ್ತಿರಲಿಲ್ಲ. ಅದನ್ನು ಪ್ರತಿನಿಧಿಸಿದವರು ಮಹಾತ್ಮಾ ಗಾಂಧೀಜಿ. ಅವರೊಬ್ಬ ನಿಜವಾದ ಹಿಂದೂ ಆಗಿದ್ದ ಕಾರಣಕ್ಕಾಗಿಯೇ ನಾಥೂರಾಂ ಗೋಡ್ಸೆ ಅವರನ್ನು ಹತ್ಯೆ ಮಾಡಿದ. ಇಂದು ಈ ದೇಶದಲ್ಲಿ ನಾಥೂರಾಂ ಗೋಡ್ಸೆಯ ಹಿಂದುತ್ವ ಮತ್ತು ಮಹಾತ್ಮ್ಮಾ ಗಾಂಧೀಜಿಯ ಹಿಂದೂ ಧರ್ಮದ ನಡುವೆ ಸಂಘರ್ಷ ನಡೆಯುತ್ತಿದೆ. ಮಹಾತ್ಮಾ ಗಾಂಧೀಜಿಯೂ ಅಪ್ರತಿಮ ಶ್ರೀರಾಮ ಭಕ್ತರಾಗಿದ್ದರು. ಸದ್ಯಕ್ಕೆ ದೇಶದಲ್ಲಿ ಗಾಂಧೀಜಿಯ ಅಧ್ಯಾತ್ಮ ರಾಮ ಮತ್ತು ಸಂಘಪರಿವಾರದ ರಾಜಕೀಯ ರಾಮನಿಗೆ ತಿಕ್ಕಾಟ ನಡೆಯುತ್ತಿದೆ. ನಾಥೂರಾಂ ಗೋಡ್ಸೆಯನ್ನ್ನು ಭಯೋತ್ಪಾದಕನನ್ನಾಗಿ ರೂಪಿಸಿರುವುದು ಹಿಂದೂಧರ್ಮವಲ್ಲ, ಹಿಂದೂ ಮಹಾಸಭಾದ ಹಿಂದುತ್ವ ಸಿದ್ಧಾಂತ. ಸ್ಪಷ್ಟವಾಗಿ ೇಳುವುದಾದರೆ, ಮನು ಸಿದ್ಧಾಂತ.

ನಾಥೂರಾಂ ಗೋಡ್ಸೆಯನ್ನು ಗಲ್ಲಿಗೇರಿಸಿದರೂ ಆತನ ದೆವ್ವ ಇನ್ನೂ ಹಲವು ಜನರ ನಡುವೆ ಗುಟ್ಟಾಗಿ ಬದುಕುತ್ತಿದೆ ಎನ್ನುವ ಅಂಶ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ. ಉತ್ತರ ಭಾರತದಲ್ಲಿ ಹಿಂದೂ ಮಹಾಸಭಾದ ನಾಯಕಿಯೊಬ್ಬರು ಮಹಾತ್ಮಾ ಗಾಂಧೀಜಿಯ ಪ್ರತಿಕೃತಿಗೆ ಗುಂಡು ಹಾರಿಸುವ ಮೂಲಕ, ಭಯೋತ್ಪಾದಕರು ಇನ್ನೂ ಜೀವಂತವಾಗಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆೆ. ಪುರೋಹಿತ್, ಅಸೀಮಾನಂದ, ಪ್ರಜ್ಞಾಸಿಂಗ್ ಠಾಕೂರ್ ಮೊದಲಾದ ಕಳೆಗಳೆಲ್ಲ ನಾಥೂರಾಂ ಗೋಡ್ಸೆ ಎನ್ನುವ ವಿಷ ಬೀಜದಿಂದ ಹುಟ್ಟಿದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ದುರಂತವೆಂದರೆ, ‘ನಾಥೂರಾಂ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ’ ಎಂದು ಕರೆದ ಕಮಲ್ ಹಾಸನ್ ಅವರ ನಾಲಗೆಯನ್ನು ಕತ್ತರಿಸಬೇಕು ಎಂದು ತಮಿಳುನಾಡಿನ ಸಚಿವರೊಬ್ಬರು ಗುಡುಗಿದ್ದಾರೆ. ನಮ್ಮ ದೇಶಕ್ಕಾಗಲಿ, ಸಂವಿಧಾನಕ್ಕಾಗಿ ನಾಥೂರಾಂ ಗೋಡ್ಸೆ ಕೊಟ್ಟ ಕೊಡುಗೆ ಏನು ಎನ್ನುವುದಕ್ಕೆ ಮಾತ್ರ ಈತನಲ್ಲಿ ಉತ್ತರವಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೆ ನುಸುಳಿಕೊಂಡಿರುವ ಈ ಗೋಡ್ಸೆವಾದಿಗಳೇ ದೇಶಕ್ಕೆ ದೊಡ್ಡ ಸವಾಲಾಗಿದ್ದಾರೆ.

ಹಿಂದೂ ಧರ್ಮವನ್ನು ರೂಪಿಸುವಲ್ಲಿ ಮಹಾನ್ ಚಿಂತಕರು ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಹಿಂದೂ ಧರ್ಮವೆಂದರೆ ವೈದಿಕ ಶಾಸ್ತ್ರ ಗ್ರಂಥಗಳಲ್ಲ. ಅದು ತನ್ನಷ್ಟಕ್ಕೆ ಅರಳಿದ ಜೀವನ ಶೈಲಿ. ಅದರೊಳಗಿರುವ ಕಳೆಗಳನ್ನು ಕೀಳುವಲ್ಲಿ ಹತ್ತು ಹಲವು ನಾಯಕರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಅರವಿಂದ ಘೋಷ್, ರಾಜಾರಾಂ ಮೋಹನ್ ರಾಯ್, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ನಾರಾಯಣ ಗುರುಗಳು ಸಹಿತ ಹಲವು ಮಹನೀಯರ ಹೋರಾಟದ ಫಲವಾಗಿದೆ ಇಂದಿನ ಹಿಂದೂ ಧರ್ಮ. ದುರದೃಷ್ಟವಶಾತ್ ಇಂದು ಬೀದಿಯಲ್ಲಿ ನಕಲಿ ಗೋರಕ್ಷಕರು, ಗೂಂಡಾಗಳು, ರಾಜಕೀಯ ಸಮಯ ಸಾಧಕರು ಹಿಂದೂ ಧರ್ಮದ ರಕ್ಷಕರ ವೇಷದಲ್ಲಿ ಓಡಾಡುತ್ತಿದ್ದಾರೆ. ಇವರಿಗೆ ಹಿಂದೂ ಧರ್ಮದೊಳಗಿರುವ ಅಸ್ಪಶ್ಯತೆ, ಬಡತನ, ಜಾತೀಯತೆ, ಇತ್ಯಾದಿಗಳ ಕುರಿತಂತೆ ಎಳ್ಳಷ್ಟು ಕಾಳಜಿಗಳಿಲ್ಲ. ಬದಲಿಗೆ ಈ ದೇಶದ ಪ್ರಜಾಸತ್ತೆಯನ್ನು ನಾಶ ಮಾಡಿ, ಅಂಬೇಡ್ಕರ್ ಸಂವಿಧಾನದ ಬದಲಿಗೆ ಮನು ಸಂವಿಧಾನವನ್ನು ಜಾರಿಗೊಳಿಸುವ ಏಕೈಕ ಅಜೆಂಡಾವನ್ನಷ್ಟೇ ಅವರು ಹೊಂದಿದ್ದಾರೆ. ನಾಥೂರಾಂ ಗೋಡ್ಸೆ ಯಾವ ಮುಖವಾಡವೂ ಇಲ್ಲದೆ ಗಾಂಧೀಜಿಯನ್ನು ಕೊಂದಿದ್ದರೆ, ಗೋಡ್ಸೆಯ ಅನುಯಾಯಿಗಳು ಸನ್ಯಾಸಿಗಳ, ಗೋರಕ್ಷಕರ, ಸಂಸ್ಕೃತಿ ರಕ್ಷಕರ ವೇಷದಲ್ಲಿ ಬಚ್ಚಿಟ್ಟುಕೊಂಡು ಭಯೋತ್ಪಾದನೆ ನಡೆಸುವುದಕ್ಕೆ ಸಂಚು ನಡೆಸುತ್ತಿದ್ದಾರೆ. ಭಯೋತ್ಪಾದನೆ, ಉಗ್ರವಾದದ ವಿರುದ್ಧ ಪಾಕಿಸ್ತಾನಕ್ಕೆ ಸಲಹೆ ಸೂಚನೆಗಳನ್ನು ನೀಡುವ ನಮ್ಮ ಸರಕಾರ, ತನ್ನದೇ ಪಾದಬುಡದಲ್ಲಿ ಹರಿದಾಡುತ್ತಿರುವ ಭಯೋತ್ಪಾದಕ ಹಾವುಗಳಿಗೆ ಗುಟ್ಟಾಗಿ ಹಾಲೂಡಿಸುತ್ತಿದೆ. ಮಧ್ಯಪ್ರದೇಶದಲ್ಲಿ, ಶಂಕಿತ ಭಯೋತ್ಪಾದಕಿಯೊಬ್ಬಳಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಅಧಿಕೃತವಾಗಿ ಈ ಜಾಲದ ಜೊತೆಗೆ ಗುರುತಿಸಿಕೊಂಡಿದೆ. ಈ ಪರಿವಾರ ಹಿಂದೂ ಧರ್ಮಕ್ಕೂ, ಈ ದೇಶದ ಪ್ರಜಾಸತ್ತೆಗೂ ಏಕಕಾಲದಲ್ಲಿ ಸವಾಲು ಒಡ್ಡುತ್ತಿವೆ. ನಿಜವಾದ ಹಿಂದೂ ಧರ್ಮೀಯರು ಮತ್ತು ಅಂಬೇಡ್ಕರ್ ಸಂವಿಧಾನದ ಅನುಯಾಯಿಗಳು ಒಂದಾಗಿ ಈ ಗೋಡ್ಸೆ ಪರಿವಾರವನ್ನು ಮಟ್ಟಹಾಕುವ ಸಂದರ್ಭ ಬಂದಿದೆ. ಇಲ್ಲದಾವದರೆ, ಹಿಂದೂಧರ್ಮದ ಜೊತೆಗೆ ದೇಶವನ್ನೂ ಈ ಗೋಡ್ಸೆ ಪರಿವಾರ ನಾಶ ಪಡಿಸಲಿದೆ.

Varthabharati ಸಂಪಾದಕೀಯ

Please follow and like us:
error