ಹಾರುವ ಹಕ್ಕಿ ಮತ್ತು ಇರುವೆ ಕಥಾ ಸಂಕಲನ ನಿತ್ಯಾನಂದ ಶೆಟ್ಟಿಯವರ ಅಭಿಪ್ರಾಯ

ತುಮಕೂರಿನಲ್ಲಿ ಬಿಡುಗಡೆಗೊಂಡ ಡಾ. ಮಿರ್ಜಾ ಬಷೀರ ಅವರ ಲಡಾಯಿ ಪ್ರಕಾಶನದ ಪ್ರಕಟಿಸಿದ ಹಾರುವ ಹಕ್ಕಿ ಮತ್ತು ಇರುವೆ ಕಥಾ ಸಂಕಲನದ ಬಗ್ಗೆ ಪ್ರೊಫೆಸರ್ ನಿತ್ಯಾನಂದ ಶೆಟ್ಟಿಯವರ ಅಭಿಪ್ರಾಯ

ಪ್ರಿಯ ಗೆಳೆಯರಾದ ಡಾ. ಮಿರ್ಜಾ ಬಶೀರ್ ಅವರಿಗೆ ನಮಸ್ಕಾರ.

ಇಂದಿನ ಕಾರ್ಯಕ್ರಮ ಬಹಳ‌ ಆತ್ಮೀಯವಾಗಿತ್ತು. ಸ್ವಲ್ಪ ಜನ ಅತಿಥಿಗಳು ಜಾಸ್ತಿ ಆದರು ಎನ್ನುವುದನ್ನು ಬಿಟ್ಟರೆ ಉಳಿದಂತೆ ಯಾವ ಲೋಪವೂ ಇಲ್ಲ.
ಜಿಲೇಬಿಯೂ ಚೆನ್ನಾಗಿತ್ತು.

ಇನ್ನು ನಿಮ್ಮ ಕಥೆಗಳ ಬಗ್ಗೆ ನನ್ನ ಕೆಲವು ಮಾತು:
ನಿಮ್ಮ ಎಲ್ಲ ಕಥೆಗಳು ಅದ್ಭುತವಾದ ಕಥೆಗಳು ಎಂದು ನಾನು ಸುಳ್ಳು ಹೇಳುವುದಿಲ್ಲ.
ಆದರೆ ನಿಮ್ಮ ಕೆಲವು ಕಥೆಗಳು ನಿಜಕ್ಕೂ ಇಡಿಯ ಕನ್ನಡ ಕಥಾ ಸಾಹಿತ್ಯದಲ್ಲೇ ಬಹಳ ಒಳ್ಳೆಯ ಕಥೆಗಳು ಎಂದು ನಾನು ಹೇಳಬಲ್ಲೆ.
ನಿಮ್ಮ ಕೆಲವು ಕಥೆಗಳು ಬಹಳ ಅಪರೂಪವಾದ ಹದವನ್ನು ಹೊಂದಿದ ಕಥೆಗಳು.

ಈ ಹದ ಎನ್ನುವ ಪದವನ್ನೇ ಒಂದು ಪರಿಕಲ್ಪನೆಯನ್ನಾಗಿ ಬೆಳೆಸಿ ನಿಮ್ಮ ಕೆಲವು ಕಥೆಗಳ ಬಗ್ಗೆ ಇಂದು ಮಾತಾಡಬೇಕೆಂದಿದ್ದೆ. ಆದರೆ ಇದು ಸೂಕ್ತ ಸಮಯವಲ್ಲ ಎಂದು ಅದನ್ನು ಎತ್ತಿ ಪಕ್ಕಕ್ಕೆ ಇಟ್ಟೆ.

ನಿಮ್ಮ ಅಜೀಜ್ ಸಾಹೇಬರ ಕಿವಿಯ ಸಮಸ್ಯೆ ಏನೇ ಇದ್ದರೂ ಅವರು ಬದುಕನ್ನು ಕಾಣುವ ರೀತಿಯೇ ಹದಕ್ಕೆ ಸಂಬಂಧಿಸಿದ್ದು.

ಹಾಗೆಯೇ ಈ ಕಥಾಸಂಕಲನದ ಶೀರ್ಷಿಕೆಯೂ.

ಮಾನವ ಜಗತ್ತಿನ ಹುಸಿತನದ ಬಗ್ಗೆ ಓರ್ವ ಕಥೆಗಾರನಾಗಿ ನಿಮ್ಮ ಭ್ರಮನಿರಸನ ಮತ್ತು ಮನುಷ್ಯ ಜಗತ್ತಿನ ಎಲ್ಲ ಒಳ್ಳೆಯ ವ್ಯಕ್ತಿಗಳು ಹಕ್ಕಿ ಮತ್ತು ಇರುವೆಯಷ್ಟೇ ನಿರಪಾಯಕಾರಿಗಳು ಮತ್ತು ಸಜ್ಜನ ಸಭ್ಯರು ಎಂಬ ನಿಮ್ಮ ಭಾವುಕ ಮನಸ್ಸು ಈ ಶೀರ್ಷಿಕೆಯನ್ನು ಇಟ್ಟಿದೆ.

ಪ್ರಾಯಶಃ ಪಶುವೈದ್ಯರು ಸ್ವಲ್ಪ ಹೆಚ್ಚು ಭಾವುಕರೂ ಆಗಿರುತ್ತಾರೇನೋ.?

ವಿವಾಹ ಮತ್ತು ಕುಟುಂಬವೂ ಸೇರಿದಂತೆ ಮನುಷ್ಯ ಜಗತ್ತಿನ ಈ ಎಲ್ಲ ಸಂಸ್ಥೆಗಳು ನಮ್ಮ ಕಣ್ಣಿನ ಮುಂದೆಯೇ ಕುಸಿಯುತ್ತಿರುವಾಗ ನಮಗೆ ನಿಜವಾಗಿಯೂ ಪಶು/ಪ್ರಾಣಿ/ಖಗ/ಮೃಗ ಲೋಕದ‌ ಜಗತ್ತು ಹೆಚ್ಚು ಆಪ್ಯಾಯಮಾನವೂ ಮತ್ತು ಬೇಷರತ್ ಪ್ರೀತಿಯ ರೂಪಕವೂ ಆಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ.

ನಿಮ್ಮ ಕಥೆಗಳು ಒಂದು ಹದದಲ್ಲಿ ಬೇಯುತ್ತಿರುವುದರಿಂದಲೇ ಈ ಸಂಕಲನದ ಕೆಲವು ಕಥೆಗಳು (ಶರ್ಪಜ್ಜಿಯೂ ಸೇರಿದಂತೆ) ಅತ್ಯುತ್ತಮ ಕಥೆಗಳಾಗಿವೆ.

ಈ ಹದ ಬರಬೇಕಿದ್ದರೆ ನೀವು ಧ್ಯಾನಸ್ಥರೇ ಆಗಬೇಕು. ಆ ಧ್ಯಾನದ ಸ್ಥಿತಿಗೆ ನೀವು ಈಗ ನಿಜಕ್ಕೂ ತಲುಪಿರುವಿರಿ.‌

ಅಭಿನಂದನೆಗಳು ಸಾವಿರಾರು ಅಭಿನಂದನೆಗಳು.

ಪುಸ್ತಕದ ಬೆಲೆ: 100
ಲಡಾಯಿ ಪ್ರಕಾಶನ: 9480286844

Please follow and like us:
error