ಹಸಿದವನ ಹೊಟ್ಟೆಗೆ ಅನ್ನ , ಬಟ್ಟೆ, ಭಾಷೆಯ ಕೆಲಸಗಳಿಗೆ ಹಣ ನೀಡದ ಸರಕಾರ ನಾಡ ದ್ರೋಹಿ ಸರ್ಕಾರ- ಸಿದ್ದರಾಮಯ್ಯ

ಬೆಂಗಳೂರು : ಹಂಪಿ ಕನ್ನಡ ವಿವಿಗೆ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಹಂಪಿಯಲ್ಲಿರುವ ಕನ್ನಡ ವಿಶ್ವ ವಿದ್ಯಾಲಯಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಕೇಳಿ ತೀವ್ರ ಆಘಾತವಾಗಿದೆ . ಅಲ್ಲಿನ ಕುಲಪತಿಗಳು ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರಗಳನ್ನು ಬರೆದು ಅನುದಾನ ಬಿಡುಗಡೆ ಮಾಡುವಂತೆ ಅಂಗಲಾಚುತ್ತಿರುವುದನ್ನು ನೋಡಿದರೆ ಸರ್ಕಾರಕ್ಕೆ ಕನ್ನಡಕ್ಕಾಗಿ ದುಡಿಯುತ್ತಿರುವ ಮತ್ತು ಕನ್ನಡದ ಜ್ಞಾನವನ್ನು ವಿಸ್ತರಿಸುತ್ತಿರುವ ಸಂಸ್ಥೆಗಳ ಎಂತಹ ನಿರ್ಲಕ್ಷ್ಯ ಭಾವನೆ ಇದೆ ಎಂದು ಅರ್ಥವಾಗುತ್ತದೆ . ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ 4-5 ಕೋಟಿ ರೂಪಾಯಿಗಳನ್ನು ಸಂಬಳ , ಸಾರಿಗೆ ಮುಂತಾದ ಉದ್ದೇಶಗಳಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿತ್ತು . ಈ ವರ್ಷ ಕೇವಲ 50 ಲಕ್ಷ ರೂಪಾಯಿಗಳನ್ನು ಮೀಸಲಿರಿಸಲಾಗಿದೆ . ಅದರಲ್ಲೂ ಬಿಡುಗಡೆ ಮಾಡಿರುವುದು ಕೇವಲ 25 ಲಕ್ಷ ರೂಪಾಯಿಗಳು ಮಾತ್ರ ಇದಕ್ಕಿಂತ ನಾಚಿಕೆಗೇಡಿನ ಮತ್ತು ದುರಂತದ ಸಂಗತಿ ಬೇರೆ ಇದೆಯೇ ? ಕುರಿತು ವಿಶ್ವ ವಿದ್ಯಾಲಯದ ತಾತ್ಕಾಲಿಕ ಸಿಬ್ಬಂದಿ , ಅತಿಥಿ ಉಪನ್ಯಾಸಕರು , ಭದ್ರತಾ ಮತ್ತು ಸ್ವಚ್ಛತಾ ಸಿಬ್ಬಂದಿಗಳ ವೇತನ , ವಿದ್ಯುಚ್ಛಕ್ತಿ ಬಿಲ್ಲು . ಇಂಧನ ಖರೀದಿ , ವಾಹನ ದುರಸ್ತಿ , ದೂರವಾಣಿ ಬಿಲ್ಲು , ಪರೀಕ್ಷೆಗಳ ಮೌಲ್ಯಮಾಪನ , ಕೋರ್ಸ್‌ವರ್ಕ್‌ಗಳ ವೆಚ್ಚ , ಕಟ್ಟಡಗಳ ವಾರ್ಷಿಕ ನಿರ್ವಹಣೆ , ವಿದ್ಯಾರ್ಥಿ , ವಿದ್ಯಾರ್ಥಿನಿಯರ ನಿಲಯಗಳ ನಿರ್ವಹಣೆ , ತೆರಿಗೆ ವಿಮೆ , ಶುದ್ಧ ನೀರಿನ ಘಟಕಗಳ ನಿರ್ವಹಣೆ , ಇತ್ಯಾದಿಗಳಿಗಾಗಿ ವಿಶ್ವ ವಿದ್ಯಾಲಯವು ಪ್ರತಿ ತಿಂಗಳು ಸುಮಾರು 37.5 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ . ಒಟ್ಟು ವಿಶ್ವ ವಿದ್ಯಾಲಯದ ನಿರ್ವಹಣೆಗೆ ಸರಕಾರ ಬಿಡುಗಡೆ ಮಾಡಬೇಕಾಗಿರುವ ಹಣ ಸುಮಾರು 6 ಕೋಟಿ ರೂಪಾಯಿಗಳಷ್ಟು ಬಾಕಿ ಇದೆ . ಪರಿಸ್ಥಿತಿ ಹೀಗಿದ್ದಾಗ ನಾಡು ಕಟ್ಟುವ ಉದ್ದೇಶದಿಂದ ಸ್ಥಾಪನೆಯಾದ ವಿಶ್ವ ವಿದ್ಯಾಲಯವನ್ನು 50 ಲಕ್ಷ ರೂಗಳಲ್ಲಿ ನಡೆಸುವುದಾದರೂ ಹೇಗೆ ? ಇದು ನೇರವಾಗಿ ಕನ್ನಡದ ಬೌದ್ಧಿಕ ವಿಕಾಸ ಮತ್ತು ಕನ್ನಡ ಜ್ಞಾನ ಸೃಷ್ಟಿಯ ಕುತ್ತಿಗೆ ಹಿಚುಕುವ ಕೃತ್ಯವಾಗಿದೆ . ಉನ್ನತ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಜ್ಞಾನ ಸೃಷ್ಟಿಯಲ್ಲಿ , ಸಂಶೋಧನೆಗಳಲ್ಲಿ ತೊಡಗದಿದ್ದರೆ ಅಂತಹ ನಾಡಿನ ಬೌದ್ಧಿಕತೆ ಸ್ಮಶಾನ ಸದೃಶವಾಗುತ್ತದೆ . ಬೌದ್ಧಿಕವಾಗಿ ಬರಡಾದ ನಾಡು ತನ್ನ ಸುತ್ತ ಮುತ್ತಲ ಸರೀಕರ ಎದುರಿಗೆ ತಲೆ ಎತ್ತಿ ನಿಲ್ಲಲಾಗದ ಸ್ಥಿತಿಗೆ ಬಂದು ಹಿಂದಿನ ಬರಡಾದ ನಾಡು ತನ್ನ ಸುತ್ತ ಮುತ್ತಲ ಸರೀಕರ ಎದುರಿಗೆ ತಲೆ ಎತ್ತಿ ನಿಲ್ಲಲಾಗದ ಸ್ಥಿತಿಗೆ ನಿಲ್ಲುತ್ತದೆ . ಇದನ್ನು ಮನಗಂಡು ಸರಕಾರಗಳು ಸಾಕಷ್ಟು ಅನುದಾನಗಳನ್ನು ವಿಶ್ವ ವಿದ್ಯಾಲಯಗಳಿಗೆ ನೀಡುತ್ತಾ ಬಂದಿವೆ . 2017-18 ರ ಒಂದು ವರ್ಷದಲ್ಲಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 25 ಕೋಟಿ 16 ಲಕ್ಷ ರೂ ಗಳನ್ನು ಬಿಡುಗಡೆ ಮಾಡಲಾಗಿತ್ತು . ಈಗ ಕೇವಲ 50 ಲಕ್ಷ ರೂಪಾಯಿಗಳನ್ನು ನಿಗಧಿಪಡಿಸಿದ್ದೀರಿ . ಇದು ವಿಶ್ವ ವಿದ್ಯಾಲಯಗಳನ್ನು ಪರೋಕ್ಷವಾಗಿ ಕೊಲ್ಲುವ ಅಮಾನವೀಯವಾದ ಕೆಲಸವಾಗಿದೆ . ಕನ್ನಡದ ಕೆಲಸಗಳಿಗೆ , ಕನ್ನಡದ ಜ್ಞಾನ ವಿಕಾಸಕ್ಕೆ ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದು ಅತ್ಯಂತ ನಾಚಿಕೆಗೇಡಿನ ವಿಚಾರ , ನಿಮ್ಮ ಹಣಕಾಸು ಇಲಾಖೆಯ ಅಂಕಿ ಅಂಶಗಳು ನವೆಂಬರ್ ಅಂತ್ಯದ ವೇಳೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 3.08 ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದು ಹೇಳುತ್ತಿವೆ . ಇದರಲ್ಲಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ ಮಾಡಲಾಗಿದೆ . ಈ ಹಣವನ್ನು ಏನು ಮಾಡುತ್ತಿದ್ದೀರಿ ? ರಾಶಿ ರಾಶಿಯಾಗಿ ಶಾಸಕರನ್ನು , ಸರಕಾರದ , ಪಕ್ಷದ ಹಿಂಬಾಲಕರುಗಳನ್ನು ಈ ಕೆಟ್ಟ ಕಾಲದಲ್ಲಿ ನಿಗಮ , ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಅವರುಗಳಿಗೆ ಸಚಿವ ಸಂಪುಟ ದರ್ಜೆ ಸ್ಥಾನ ಮಾನ ನೀಡಿ ನೂರಾರು ಕೋಟಿ ಹಣವನ್ನು ದುಂದು ಮಾಡಲಾಗುತ್ತಿದೆ . ಹಸಿದವನ ಹೊಟ್ಟೆಗೆ ಅನ್ನ , ಬಟ್ಟೆ ಮತ್ತು ಭಾಷೆಯ ಕೆಲಸಗಳಿಗೆ ಹಣ ನೀಡದ ಸರಕಾರ ನಾಡ ದ್ರೋಹಿ ಸರ್ಕಾರವೆನ್ನಿಸಿಕೊಳ್ಳುತ್ತದೆ . ರೈತರ , ಕಾರ್ಮಿಕರ ಮತ್ತು ನಾಡ ಭಾಷಿಕರ ಸಿಟ್ಟಿಗೆ ಗುರಿಯಾದ ಸರ್ಕಾರಗಳು ಹಿಂದೆಲ್ಲಾ ಧೂಳೀಪಟವಾಗಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು , ಕನ್ನಡ ವಿಶ್ವ ವಿದ್ಯಾಲಯವೂ ಸೇರಿದಂತೆ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ,

Please follow and like us:
error