ಹಂಪಿ ಉತ್ಸವ ನಡೆಸಲು ಆಗ್ರಹ

ಬಳ್ಳಾರಿ :  ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಹಂಪಿ ಉತ್ಸವ ವಿಳಂಬವಾಗಿದ್ದಕ್ಕೆ ಬಳ್ಳಾರಿ ಜಿಲ್ಲೆ ಜನರಿಂದ ಭಿಕ್ಷೆ ಎತ್ತಿ ಹಂಪಿ ಉತ್ಸವ ಆಚರಿಸುತ್ತೇನೆಂದು ಬಳ್ಳಾರಿ ನಗರ ಶಾಸಕ ಸೋಮಶೇಖರರಡ್ಡಿ ಬೊಬ್ಬಿರಿದು ಅಬ್ಬರಿಸಿದ್ದರು. ಆದರೇ ತಮ್ಮದೇ ಬಿಜೆಪಿ ಸರ್ಕಾರವಿದ್ದು ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆ ಇಲ್ಲಿಯವರೆಗೂ ನಡೆಯದೇ ಇದ್ದರೂ ಚಕಾರವೆತ್ತುತ್ತಿಲ್ಲ ಯಾಕೆ?

ತಕ್ಷಣವೇ ಅಂದು ಸಂಸದರಾಗಿದ್ದ ಉಗ್ರಪ್ಪ ಶ್ರಮವಹಿಸಿ ಉತ್ಸವ ಆಚರಣೆಗೆ ಚಾಲನೆ ನೀಡಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದ ದೇವೇಂದ್ರಪ್ಪ ಹಂಪಿ ಉತ್ಸವಕ್ಕೆ ಧ್ವನಿ ಎತ್ತದಿರುವುದು ಖೇದಕರ ಸಂಗತಿ. ಹಂಪಿ ಉತ್ಸವ ಆಚರಣೆಗೆ ಪೂರ್ವಭಾವಿ ಸಭೆಯನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಲಕ್ಷಣ ಸವದಿಯವರು ತಕ್ಷಣ ಕರೆದು ನಿಗದಿಯಂತೆ ನವಂಬರ್ 3,4 ಹಾಗೂ5 ರಂದು ಉತ್ಸವ ನಡೆಸಬೇಕು ಎಂದ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ ಆಗ್ರಹಿಸಿದ್ದಾರೆ.
ನೆರೆ ಪ್ರವಾಹದ ಕಾರಣ ನೀಡದೇ ಅದ್ದೂರಿ ಆಡಂಬರವಾಗಿ ಮಾಡದಿದ್ದರೂ  ಎದುರು ಬಸವಣ್ಣ ಮಂಟಪ ವೇದಿಕೆ, ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಮತ್ತು ಸಾಸಿವೆಕಾಳು ಗಣಪ ವೇದಿಕೆಗಳಲ್ಲಿ ಸರಳವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು. ಉತ್ಸವದಲ್ಲಿ ಹಿಂದಿ ಮತ್ತು ಕನ್ನಡ ಸಿನಿಮಾ ರಂಗದವರಿಗೆ ಹೆಚ್ಚಿನ ಹಣ ವ್ಯಯ ಮಾಡುವ ಬದಲು ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಕರ್ನಾಟಕದ ಪ್ರಾಚೀನ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

   

Please follow and like us:
error