ಸೊಲಬಕ್ಕನವರ್ ಗೆ ಬಿ.ಪೀರಬಾಷಾ ನುಡಿನಮನ

ಸೊಲಬಕ್ಕನವರ್ ಮತ್ತು ಅವರು ನನ್ನ ಮಡದಿಗೆ ಕೊಟ್ಟ ಹಸಿರು ಸೀರೆಯ‌ ನೆನಪು.

ಬೆಳಿಗ್ಗೆ, ಹಾಸಿಗೆಯಿಂದ ಏಳುತ್ತಿದ್ದಂತೆಯೇ ಮಡದಿ ಸುದ್ದಿ ತಿಳಿಸಿದಳು; ಸೊಲಬಕ್ಕನವರ್ ಹೋದ್ರಂತೆ!

ಅಯ್ಯೋ, ಎನ್ನುವುದನ್ನು ಬಿಟ್ಟರೆ, ನನ್ನಲ್ಲಿ ಬೇರೆ ಪದಗಳಿರಲಿಲ್ಲ. ಈ ನಡುವೆ ಒಂದ್ಸಲ ಹೋಗಿ ಬರಬೇಕಿತ್ತು. ಮೊನ್ನೆ ಮೊನ್ನೆ ಅಂದುಕೊಂಡಿದ್ವಿ, ಇನ್ನೊಂದ್ಸಲ ಹೋಗಿ, ಮಾತಾಡಿಸಿ ಬರಬೇಕಿತ್ತು ಅಂದುಕೊಳ್ಳುತ್ತಲೇ, ಈಕೆ ಹೇಳಿದಳು; “ಅವ್ರು ಕೊಟ್ಟ ಹಸುರು ಸೀರಿ ಹಂಗಾ ಇಟ್ಟೀನಿ”.

ನಮ್ಮ ಮದುವೆಯಾಗಿ ಮೂರ್ನಾಲ್ಕು ವರ್ಷಗಳು ಕಳೆದಿದ್ದವು. ಕಾಗಿನೆಲೆಯಲ್ಲಿ ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ’ಯಿಂದ ಸಂಘಟಿಸಿದ್ದ ‘ಅರಿವಿನ ಯಾನ’ ಕಾರ್ಯಕ್ರಮ ಮುಗಿಸಿಕೊಂಡು ಅವತ್ತು ಹಾವೇರಿ ಐ.ಬಿ.ಯಲ್ಲೇ ಉಳಿದುಕೊಂಡು ಬೆಳಗ್ಗೆದ್ದು ಗೋಟಗೋಡಿಗೆ ಹೋಗಿದ್ದೆವು.

ರಾಕ್ ಗಾರ್ಡನ್ ಗೆ ನಾವು ಬರುತ್ತಿರುವ ಸುದ್ದಿ ತಿಳಿಸಿದ್ದರಿಂದ ಅವರು ಸಂತಸಗೊಂಡಿದ್ದರು. ಗೇಟಿನಲ್ಲಿ ಟಿಕೇಟ್ ಕೇಳಿ ಮುಜುಗರ ಮಾಡಿಯಾರೆಂದು ಸ್ವತಃ ಅವರ ಮಗಳು ವೇದರಾಣಿ ನಮಗಾಗಿ ಹೊರಗೆ ಬಂದು ಒಳಗೆ ಕರೆದುಕೊಂಡು ಹೋಗಿದ್ದರು. ರಾಕ್ ಗಾರ್ಡನ್ ಒಳಗೆ ಕಟ್ಟಿಕೊಂಡ ಮನೆಯ ಹೊರಗೆ ಬಂದು ಸ್ವತಃ ಸೊಲಬಕ್ಕನವರ್ ಸ್ವಾಗತಿಸಿದ್ದರು. ಅವತ್ತು ಅವರೆಷ್ಟು ಆಹ್ಲಾದಕರವಾಗಿದ್ದರೆಂದರೆ, ನಾವು ನಮ್ಮದೇ ಹಿರಿಯರ ಮನೆಗೆ ಬಂದಿದ್ದೇವೇನೋ ಎಂಬಷ್ಟು ಆನಂದ ಅನುಭವಿಸಿದ್ದೆವು. ನನ್ನ ಮಡದಿಗೋ ಅವರ ಕುರಿತು ಹುಟ್ಟಿದ ಆಪ್ತ ಗೌರವಭಾವಗಳೆಲ್ಲಾ ಮುಖದಲ್ಲಿ ಸೂಸುತ್ತಿದ್ದವು. ಪುಟ್ಟ ಮಗು ಸಮೀರ ಅವರ ಮನೆಯ ಹೊರ ಜಗುಲಿಯಲ್ಲಿ ಓಡಾಡಿಕೊಂಡಿದ್ದ.

ಅವತ್ತು ನಾನು ಮತ್ತು ಸೊಲಬಕ್ಕನವರ್ ಅವರು ಎದುರು ಬದಿರಾಗಿ, ಅವರ ಆಮನೆಯ ಕಿರಿದಾದ ಕಟ್ಟೆಯ ಮೇಲೆ ಕುಳಿತು ಅದೆಷ್ಟು ಮಾತಾಡಿದೆವೆಂದರೆ, ಮಾತು ಮೀರಿ ನನ್ನೆದೆಯಿಂದ ಹಾಡು ಹರಿದಿತ್ತು, ಅದು ‘ಸಮುದಾಯ’ದ ಹಾಡು. ಅವರು ಅದೆಷ್ಟು ಹರ್ಷವಾಗಿದ್ದರೆಂದರೆ, ಮನೆಯ ಮಕ್ಕಳು ಮನೆಗೆ ಬಂದರೆ ಮನೆ ಹಿರಿಯರ ಹೃದಯ ಹಗುರ ಎಂಬಷ್ಟು.

“ನೂರು ಅಡಿಗಳಣ್ಣ, ಇದು ಬಣ್ಣದ ನಡೆಯಣ್ಣ.
ನೂರು ಅಡಿಗಳ ನಡೆಯು, ನಮ್ಮ ಸಮುದಾಯದ ಈ ಕರೆಯು…. “
ನಾನು ಎಸ್.ಎಸ್.ಎಲ್.ಸಿ. ಯಲ್ಲಿರುವಾಗಲೇ ಈ ಹಾಡು ಕೇಳಿದ್ದೆ, ಗುನುಗಿದ್ದೆ. ನಮ್ಮೂರಿನ ಸೊಪ್ಪಿನ ಮಲ್ಲಪ್ಪನವರ ಧರ್ಮ ಛತ್ರದಲ್ಲಿ ಆಗ ಬಂದಿದ್ದ ಯುದ್ಧ ವಿರೋಧಿ ಜಾಥಾದ ನೂರಾ ಹತ್ತು ಅಡಿಗಳ ಒಂದೇ ಪೇಂಟಿಂಗನ್ನು ಬೆರಗಿನಿಂದ ನೋಡಿದ್ದೆ. ಆಗಲೇ ಈ ಕಲಾಕೃತಿಯನ್ನು ರಚಿಸಿದ ಸೊಲಬಕ್ಕನವರ್ ಅವರ ಹೆಸರು ಅಚ್ಚರಿಯ ಕಾರಣದಿಂದಲೇ ಅಚ್ಚಳಿಯದೆ ಉಳಿದಿತ್ತು. ಆ ನಂತರ ನಾನು1987ರಲ್ಲಿ “ಸಮುದಾಯ” ಸೇರಿದ ನಂತರ ನೂರೇಕೆ, ಸಾವಿರಬಾರಿ ಆ ಹಾಡನ್ನು ಹಾಡಿರಬಹುದು. ಹಾಗೆ ಸೊಲಬಕ್ಕನವರ್ ನಮ್ಮ ಮನಸ್ಸಿನಲ್ಲಿ ಉಳಿದಿದ್ದರು.

ಅವತ್ತು ಅವರ ಮನೆಯಲ್ಲಿ ಮಗು ಸಮೀರನಾದಿಯಾಗಿ ನಾವು ಮೂವರೂ ಅಪ್ಪಟ ಜವಾರಿ, ಉತ್ತರ ಕರ್ನಾಟಕದ ಊಟ ಮುಗಿಸಿ ಮಾತಿಗೆ ಕೂತಾಗ ಇವೆಲ್ಲವನ್ನೂ ತಾಸುಗಟ್ಟಲೆ ಮೆಲುಕು ಹಾಕಿದ್ದೆವು. ಸೊಲಬಕ್ಕನವರ ಮನಸ್ಸೂ ಹಳೆಯದರ ಕನವರಿಕೆಗೆ ಜಾರಿತ್ತು.

ಅವರದು ಹಾಗೆಯೇ, ಹರಿವ ಹಾರುವ ಸ್ವಚ್ಛಂದದ ಸೃಜನಶೀಲ ಮನಸ್ಸು. ಅವರ ಮನೋವಿಸ್ತಾರಕ್ಕೆ ನೌಕರಿಕೆಯ ಗೋಡೆಗಳು ಅಡ್ಡಿಯಾಗಿದ್ದವು. ಹಾಗೆಂದೇ ನೌಕರಿ ಬಿಟ್ಟು “ದೊಡ್ಡಾಟದ ಸಂಸ್ಥೆ ಕಟ್ಟುವ ಹುಚ್ವು ಹತ್ತಿಸಿಕೊಂಡು ಕುಟುಂಬದ ಪಾಡನ್ನೇ ಬಯಲಾಟದಂತಾಗಿಸಿದ್ದರು. ಅವು ಅವರ ಬದುಕಿನ ಅತ್ಯಂತ ಕಷ್ಟದ ದಿನಗಳಾಗಿರಬೇಕು. ವೇದರಾಣಿ ಇನ್ನೂ ಚಿಕ್ಕವಳು. ಅವಳ ತಮ್ಮ ಇನ್ನೂ ಕೂಸಾಗಿದ್ದನೇನೋ. ಆ ಪಡಿಪಾಟಲಿನ ಸಂದರ್ಭದಲ್ಲಿ ಅವರ ಜೊತೆಗಿದ್ದವರು ದೊಡ್ಡಾಟದ ಇನ್ನೊಬ್ಬ “ಹುಚ್ಚ” ಶ್ರೀಶೈಲ ಹುದ್ದಾರ. ಅದ್ಹೇಗೆ ಸಂಸಾರದ ನೌಕೆ ತೂಗಿಸಿದರೋ ಅವರಿಗೇ ಗೊತ್ತು. ಅವರ ಬದುಕಿನ ಉತ್ತರಾರರ್ಧದಲ್ಲಿ ಯಶಸ್ಸಿನ ದಾರಿ ಹೊರಳಿದ್ದು ಮಗಳು ವೇದರಾಣಿಯ ಮದುವೆಯ ನಂತರ.

ಅವರ ಅಳಿಯ ಒಳ್ಳೆಯ ದುಡಿಮೆಯಲ್ಲಿದ್ದರು. ಮಾವನವರ ಕನಸಿಗೆ ಬಂಡವಾಳ ಜೋಡಿಸಿದರು. ಕನಸು ಮತ್ತು ಬಂಡವಾಳಗಳ ಸಂಗಮ ‘ಅಸಾಧ್ಯ ಸಾಧನೆ’ಗಳಿಗೆ ಕಾರಣವಾಯಿತು. ರಾಕ್ ಗಾರ್ಡನ್ ಎಂಬ ಶಿಲ್ಪಲೋಕ ಸೃಷ್ಟಿಯಾಯಿತು. ಕಲೆಯನ್ನು ಮತ್ತು ಉದ್ಯಮವಾಗಿ ಮಾರ್ಪಡಿಸುವಿಕೆ ಅವರಿಗೆ ಅಪಾರ ಹಣವನ್ನಷ್ಟೇ ತಂದುಕೊಡಲಿಲ್ಲ. ಹಲವು “ವಿಶ್ವದಾಖಲೆ”ಗಳನ್ನು ಅವರಿಂದ ಮಾಡಿಸಿತು. ಮಗ ದೊಡ್ಡವನಾಗಿ, ಶಿಲ್ಪರಚನಾ ಕೆಲಸಗಾರರನ್ನು ಕೈಯಲ್ಲಿಟ್ಟುಕೊಂಡು ಶಿಲ್ಪ ನಿರ್ಮಾಣದ ಗುತ್ತಿಗೆಯನ್ನು ಸ್ವಯಂ ನಿರ್ವಹಿಸುವಷ್ಟು ಸಮರ್ಥನಾಗಿದ್ದ ಆ ಬಳಿಕ ಸೊಲಬಕ್ಕನವರ್ ಅವರ ಜೀವನ “ಸಾಧನಾನಂದ”ದಿಂದ ಕೂಡಿದ್ದು.

ಅದೆಷ್ಟು ಮಾತಾಡಿದೆವೆಂದರೆ ನಮ್ಮಿಬ್ಬರ ಮನಸ್ಸುಗಳೂ ಅವ್ಯಕ್ತ ಸಂಬಂಧವನ್ನು ಮರು ಸ್ಥಾಪಿಸಿಕೊಂಡಿದ್ದವು. “ಹಳೆಯದೆಲ್ಲಾ ಮಾತಾಡಿ ಮನಸ್ಸು ಹಗುರಾಯ್ತು, ಬರ್ತಾಯಿರ್ರಿ. ಈಗ ಇದೆಲ್ಲಾ ಯಾರ ಹತ್ರ ಮಾತಾಡಾನಾ. ನೀವು ವಯಸ್ಸಿನ್ಯಾಗ ನಮಗಿಂತ ಚಿಕ್ಕವರಾದ್ರೂ ( ಅವರ ಮಗನಾಗಿರಬಲ್ಲಷ್ಟು) ಅನುಭವದಾಗ ವಾರಿಗೆಯವರ ಥರ, ಅವಾಗವಾಗ ಬರ್ರೀ” ಎಂದು ಬೀಳ್ಕೊಡುವಾಗ ಅವರ ಶ್ರೀಮತಿಯವರ ಕೈಯಲ್ಲಿ ಹಸಿರು ಸೀರೆಯಿತ್ತು. ಅವರ ಪ್ರೀತಿಯನ್ನುಂಡು ಉಟ್ಟು ನನ್ನ ಮಡದಿ ಭಾವುಕಳಾಗಿದ್ದಳು. ಗೇಟು – ಹೊಸ್ತಿಲ ತನಕ ಸೊಲಬಕ್ಕನವರ್ ಅವರು, ಮತ್ತೆ ರೋಡಿನ ತನಕ ಮಗಳು ಸಹೃದಯಿ ವೇದರಾಣಿ ಬಂದು ಬೀಳ್ಕೊಟ್ಟಿದ್ದರು.

ಸೊಲಬಕ್ಕನವರ್ ಹೋಗಿ ಬಿಟ್ಟರು…ನಿಜ. ಆದರೆ ನನ್ನ ಮಡದಿಯ ಪ್ರೀತಿಯ ವಸ್ತುವಾಗಿ ಉಳಿದಿರುವ ಹಸಿರು ಸೀರೆಯೊಂದಿದೆಯಲ್ಲ ಅಷ್ಟು ಸಾಕು, ಹೃದಯಗಳು ಹಸುರಾಗಲು.
– ಬಿ.ಪೀರ್ ಬಾಷ.

Please follow and like us:
error