ಸಾರಿಗೆ ನೌಕರರ ಮುಷ್ಕರ, ಬಸ್ ರಸ್ತೆಗಿಳಿಯಲ್ಲ; ಕಾರ್ಮಿಕರು, ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದೇವೆ- ಡಿಸಿ

ಕೊಪ್ಪಳ: ವೇತನ ಪರಿಷ್ಕರಣೆ, ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು, ಕಾರ್ಮಿಕರು ಏಪ್ರಿಲ್ 1ರಿಂದ ನಾನಾರೀತಿಯ ಪ್ರತಿಭಟನೆ ನಡೆಸಿದ್ದು, ಏಪ್ರಿಲ್ 7ರಂದು ಬಸ್ ರಸ್ತೆಗೆ ಇಳಿಸದಿರಲು‌ ನಿರ್ಧರಿಸಿದ್ದಾರೆ. ನೌಕರರ ಮುಷ್ಕರದ ಪರಿಣಾಮ ಖಾಸಗಿ ವಾಹನಗಳ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಿದೆ.

ನಾಳೆ ಸಾರಿಗೆ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ
ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದು. ಸಾರಿಗೆ ಬಸ್‌ಗಳ ಬದಲು 400 ಖಾಸಗಿ ವಾಹನಗಳನ್ನು ಜಿಲ್ಲಾದ್ಯಂತ ಸಂಚರಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಆರ್‌ಟಿಓ ಕಚೇರಿ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ಜಿಲ್ಲೆಯ ಯಾವ ಭಾಗದಲ್ಲೂ ಅಹಿತಕರ ಘಟನೆಗಳು ಜರುಗದಂತೆ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆಯೂ, ಅಹಿತಕರ ಘಟನೆಗಳಿಗೆ ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸುರಳ್ಕರ್ ತಿಳಿಸಿದರು.

ಸಭೆಯಲ್ಲಿ ಆರ್ ಟಿ ಓ, ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳು,
ಎಸ್ಪಿ ಟಿ ಶ್ರೀಧರ್ ಸೇರಿದಂತೆ ಎಡಿಸಿ, ಎಸಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಕೋಟ್-1…
ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ
ಸಾರಿಗೆ ನೌಕರರ ಹಾಗೂ ಕಾರ್ಮಿಕರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲು ಸರಕಾರ ಸೂಚಿಸಿದ್ದು, ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆಯೂ, ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.
-ಎಂ.ಮುಲ್ಲಾ, ವಿಭಾಗೀಯ ನಿಯಂತ್ರಕರು, ಕೆಎಸ್ಆರ್‌ಟಿಸಿ ಕೊಪ್ಪಳ


ಬಸ್ ರಸ್ತೆಗೆ ಇಳಿಯಲ್ಲ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ತಿಂಗಳಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಮಾರ್ಚ್ ವೇಳೆಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರಕಾರ, ಮಾತು ಮರೆತಿದೆ. ಹಾಗಾಗಿ ಏಪ್ರಿಲ್ 1ರಿಂದ ಸಾರಿಗೆ ನೌಕರರು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಏಪ್ರಿಲ್ 7ರಂದು ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು.
-ಚಂದ್ರಪ್ಪ, ಕಾರ್ಮಿಕ ಮುಖಂಡ, ಕೊಪ್ಪಳ.

Please follow and like us:
error