ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ ಓರ್ವ ವ್ಯಕ್ತಿ ಹೃದಯಾಘಾತದಿಂದ ಸಾವು


ಚಿತ್ರದುರ್ಗ ಮೇ. 17 :

ಕೋವಿಡ್-19 ವೈರಸ್ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣಕ್ಕಾಗಿ ಚಿತ್ರದುರ್ಗ ನಗರದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ 55 ವರ್ಷದ ಓರ್ವ ವ್ಯಕ್ತಿ ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟ ಘಟನೆ ಜರುಗಿದೆ. ಆದರೆ ಈ ವ್ಯಕ್ತಿಯ ಕೋವಿಡ್ ಟೆಸ್ಟ್ ಪರೀಕ್ಷಾ ವರದಿ ನೆಗೆಟೀವ್ ಬಂದಿತ್ತು ಎನ್ನುವುದು ಗಮನಾರ್ಹ. ಗುಜರಾತ್‍ನ ಅಹಮದಾಬಾದ್‍ನಿಂದ ಖಾಸಗಿ ಬಸ್‍ವೊಂದರಲ್ಲಿ ಚಿತ್ರದುರ್ಗ ನಗರಕ್ಕೆ ಸ್ಥಳೀಯರಾದ 15 ಜನ ತಬ್ಲೀಘ್‍ಗಳು ಮೇ. 05 ರಂದು ಆಗಮಿಸಿದ್ದರು. ಬಳಿಕ ಇವರನ್ನು ಚಿತ್ರದುರ್ಗ ನಗರದ ಬಿಸಿಎಂ ಹಾಸ್ಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಇವರನ್ನು ಕ್ವಾರಂಟೈನ್‍ನಲ್ಲಿ ಇರಿಸುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ತಬ್ಲೀಘ್‍ನವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ವಯ ನಗರದ ಧವಳಗಿರಿ ಬಡಾವಣೆಯ 55 ವರ್ಷದ ಓರ್ವ ವ್ಯಕ್ತಿಯನ್ನು ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಬಳಿಯ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಸತಿನಿಲಯದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಈ ಮಧ್ಯೆ ಅಹಮದಾಬಾದ್‍ನಿಂದ ನಗರಕ್ಕೆ ಆಗಮಿಸಿದ್ದ 15 ಜನ ತಬ್ಲೀಘ್‍ಗಳ ಪೈಕಿ 06 ಜನರಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 55 ವರ್ಷದ ಈ ವ್ಯಕ್ತಿಯ ಗಂಟಲು ದ್ರವವನ್ನು ಕೂಡ ಸಂಗ್ರಹಿಸಿ ಮೇ. 09 ರಂದು ಪರೀಕ್ಷೆಗಾಗಿ ಕಳುಹಿಸಲಾಯಿತು. ಮೇ. 12 ರಂದು ಇವರ ಪರೀಕ್ಷಾ ವರದಿ ನೆಗೆಟೀವ್ ಎಂದು ಬಂದಿತ್ತು. ಆದರೆ ಎಸ್‍ಒಪಿ ಮಾರ್ಗಸೂಚಿಯನ್ವಯ ಪ್ರಾಥಮಿಕ ಸಂಪರ್ಕಿತರಿಗೆ ಎರಡು ಬಾರಿ ಪರೀಕ್ಷೆ ನಡೆಸುವುದು ಅಗತ್ಯವಾಗಿದ್ದು, ಹೀಗಾಗಿ ಮೇ. 20 ರಂದು ಎರಡನೆ ಬಾರಿಗೆ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಬೇಕಾಗಿತ್ತು. ಇದಕ್ಕಾಗಿ ಪ್ರಾಥಮಿಕ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಮುಂದುವರೆಸಲಾಗಿತ್ತು. 55 ವರ್ಷದ ಈ ವ್ಯಕ್ತಿಗೆ ಮೇ. 16 ರಂದು ಸಂಜೆ ಎದೆ ನೋವು ಕಾಣಿಸಿಕೊಂಡ ಕಾರಣ, ಇವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದು, ಇವರ ಇಸಿಜಿ ವರದಿ ನಾರ್ಮಲ್ ಬಂದಿತ್ತು. ಆದಾಗ್ಯೂ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ನೀಡಿ, ಪುನಃ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲಾಯಿತು. ಆದರೆ ಮೇ. 17 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಬೆಳಗಿನ ಪ್ರಾರ್ಥನೆಗಾಗಿ ಎದ್ದಿದ್ದು, ಈ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುತ್ತಾರೆ. ಮೃತ ದೇಹವನ್ನು ನಿಯಮಾನುಸಾರ ಕ್ರಮ ಕೈಗೊಂಡು, ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.

Please follow and like us:
error