ಸಹನೆಯಿಂದ ವರ್ತಿಸಿ, ಗಲಭೆಯ ಹಿಂದಿರುವ ಶಕ್ತಿಗಳನ್ನು ಬಯಲಿಗೆ ತನ್ನಿ : ಡಿವೈಎಫ್ಐ ಆಗ್ರಹ

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪೈಗಂಬರರನ್ನು ನಿಂದಿಸಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಬೆಂಗಳೂರಿನ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಪ್ರದೇಶದಲ್ಲಿ ನಡೆದಿರುವ ಹಿಂಸಾಚಾರ ಖಂಡನೀಯ. ಜನತೆ ಈ ಸಂದರ್ಭದಲ್ಲಿ ತಾಳ್ಮೆ ಕಳೆದು ಕೊಳ್ಳದೆ ಸಹನೆಯಿಂದ ವರ್ತಿಸಬೇಕಿದೆ. ಪ್ರಧಾನವಾಗಿ ಇಂತಹ ಆಪತ್ಕಾಲದಲ್ಲಿ ತಮ್ಮನ್ನು ಪ್ರಚೋದಿಸುವ ಶಕ್ತಿಗಳ ಕುರಿತು ಮುಸ್ಲಿಂ ಸಮುದಾಯ ಎಚ್ಚರಿಕೆಯಿಂದ ಇರಬೇಕಿದೆ. ಇಷ್ಟು ದೊಡ್ಡ ಪ್ರಮಾಣದ ಹಿಂಸಾಚಾರ ದಿಢೀರ್ ಆಗಿ ನಡೆಯುವುದರ ಹಿಂದೆ ಕಾಣದ ಕೈಗಳ ವ್ಯವಸ್ಥಿತ ಪಿತೂರಿಯ ಸಾಧ್ಯತೆಗಳು ಕಂಡು ಬರುತ್ತಿವೆ. ಜನರ ಬದುಕಿನ ಜೊತೆ ಚೆಲ್ಲಾಟವಾಡುವ ಇಂತಹ ಶಕ್ತಿಗಳನ್ನು ನ್ಯಾಯಯುತ ತನಿಖೆಯ ಮೂಲಕ ಬಯಲಿಗೆ ತರಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಹಿಂಸಾಚಾರದಲ್ಲಿ ಆಸ್ತಿಪಾಸ್ತಿ ನಷ್ಟಗೊಂಡವರಿಗೆ, ಗೋಲಿಬಾರ್ ಗೆ ಬಲಿಯಾದವರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದೆ.

ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿ ಪೈಗಂಬರರನ್ನು ಅವಹೇಳನ ಮಾಡಿ ಹಾಕಿರುವ ಪೋಸ್ಟ್ ಕುರಿತು ಪೊಲೀಸರು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಅದಷ್ಟನ್ನೇ ಮುಂದಿಟ್ಟು ದೊಡ್ಡ ಪ್ರಮಾಣದಲ್ಲಿ ಮುಗ್ಧ ಜನರನ್ನು ಪ್ರಚೋದಿಸಿ ಗುಂಪು ಸೇರಿಸಿರುವುದು, ಏಕಕಾಲದಲ್ಲಿ ಪೊಲೀಸ್ ಠಾಣೆ ಹಾಗೂ ಶಾಸಕರ ಮನೆ ಮೇಲೆ ದಾಳಿ ನಡೆಸಿರುವುದರ ಹಿಂದೆ ವ್ಯವಸ್ಥಿತ ಪಿತೂರಿಯ ಸಾಧ್ಯತೆ ದಟ್ಟವಾಗುತ್ತದೆ. ಅದರಲ್ಲೂ ಸಂಬಂಧಿಯ ತಪ್ಪಿಗೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ಬೆಂಕಿ ಹಚ್ಚಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆಯ ಅನುಮಾನ ಮೂಡಿಸುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ರಿಕ್ತ ಗುಂಪನ್ನು ಹಿಂಸೆಗಿಳಿಸುವ ಹಿಂದೆ ನಕಾರಾತ್ಮಕ ಶಕ್ತಿಗಳ ಪ್ರಬಲ ಒತ್ತಾಸೆ ಇರುವಂತಿದೆ. ಈ ಕುರಿತು ಸಮಗ್ರ ತನಿಖೆ ನಡೆದು ಅಂತಹ ಶಕ್ತಿಗಳನ್ನು ಬಯಲಿಗೆ ತರಬೇಕಿದೆ. ಇದಲ್ಲದೆ ರಾಜಧಾನಿಯ ಹೃದಯ ಭಾಗದಲ್ಲಿ ನಡೆದ ಬಹು ದೊಡ್ಡ ಹಿಂಸಾಚಾರದ ಕುರಿತು ಗುಪ್ತಚರ ವರದಿ ಸರಕಾರಕ್ಕೆ ತಲುಪದಿರುವುದು ಅನುಮಾನಕ್ಕೆ ಎಡೆ ಮಾಡಿದೆ.

ಬಲಪಂಥೀಯ ಶಕ್ತಿಗಳ ನಿರಂತರ ದಾಳಿಗಳಿಂದ ಬಸವಳಿದಿರುವ, ಅವಹೇಳನ, ನಿಂದನೆಗೆ ಗುರಿಯಾಗಿ ಮುಖ್ಯವಾಹಿನಿಯಿಂದ ಅಂಚಿಗೆ ತಳ್ಳಲ್ಪಡುತ್ತಿರುವ ಮುಸ್ಲಿಂ ಸಮುದಾಯ ಇಂತಹ ಪ್ರಚೋದಿಸುವ ಶಕ್ತಿಗಳ ಷಡ್ಯಂತ್ರಗಳ ಕುರಿತು ಅತೀವ ಜಾಗ್ರತೆ ವಹಿಸಬೇಕಿದೆ. ತಮ್ಮೊಳಗೆ ನೆಲಯೂರಲು ಯತ್ನಿಸುತ್ತಿರುವ ಮತೀಯವಾದಿ ಶಕ್ತಿಗಳನ್ನು ತಿರಸ್ಕರಿಸಿ ಜಾತ್ಯಾತೀತತೆ, ಪ್ರಜಾಪ್ರಭುತ್ವವಾದಿ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ತಮ್ಮನ್ನು ಬಲಿಪಶು ಮಾಡುವ ಎಲ್ಲಾ ರೀತಿಯ ಕೋಮುವಾದವನ್ನು ಹಿಮ್ಮೆಟ್ಟಿಸಲು ಮುಂದಡಿಯಿಡಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡಿದೆ.

ಇತೀ,
ಮುನೀರ್ ಕಾಟಿಪಳ್ಳ (ರಾಜ್ಯಾಧ್ಯಕ್ಷರು) ಬಸವರಾಜ ಪೂಜಾರ (ರಾಜ್ಯ ಕಾರ್ಯದರ್ಶಿ)

ಸ್ಥಳ: ಬೆಂಗಳೂರು. ದಿನಾಂಕ‌: 12.08.2020

Please follow and like us:
error